ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವಂತೆಯೇ ಇತ್ತ ಪೆಟ್ರೋಲ್ ಮತ್ತು ಅನಿಲ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಹೋಟೆಲ್, ರೆಸ್ಟೋರೆಂಟ್‌ಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದಲ್ಲಿ ಬೆಂಗಳೂರು ಹೋಟೆಲ್‌ಗಳ ಸಂಘವು ನಗರದಾದ್ಯಂತ ಹೋಟೆಲ್‌ಗಳನ್ನು ಬಂದ್ ಮಾಡಲು ತೀರ್ಮಾನಿಸಿದೆ. ಈ ಮಧ್ಯೆ ಸಿಲಿಂಡರ್ ಕೊರತೆಯು ರಾಜ್ಯದಲ್ಲಿ ಗಂಭೀರ ಕಳವಳಕಾರಿಯಾಗಿದೆ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಸಮಸ್ಯೆ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಸಾಧ್ಯತೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಪ್ರತ್ಯೇಕವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಹಾಗೂ ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತೇಜಸ್ವಿ ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಾಸನ ಜಿಲ್ಲೆಯ ಕೌಶಿಕ ಗ್ರಾಮದ ಅಂತರ್ಜಲ ಕೈಗಾರಿಕಾ ತ್ಯಾಜ್ಯದಿಂದ ಕಲುಷಿತವಾಗಿದ್ದರೆ, ಕೇಂದ್ರದಿಂದ ತಂಡ ಕಳಿಸಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ನ್ಯೂನತೆ ಇದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಪರಿಷತ್ತಿಗಿಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಸೂರಜ್ ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೌಶಿಕ ಗ್ರಾಮಸ್ಥರಿಂದ ಕೊಳವೆ ಬಾವಿಗಳಿಗೆ ಕೈಗಾರಿಕಾ ತ್ಯಾಜ್ಯ ಬಿಡುತ್ತಿರುವ ಬಗ್ಗೆ ದೂರು ಸ್ವೀಕೃತವಾಗಿಲ್ಲ ಎಂದು ತಿಳಿಸಿದ್ದಾರೆ. ಸೂರಜ್ ರೇವಣ್ಣ ಅವರು ಬಾಟಲಿಯಲ್ಲಿ ತಂದಿದ್ದ ನೀರನ್ನು ಸದನದಲ್ಲಿ ಪ್ರದರ್ಶಿಸಿದರು. ನಂತರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ನೀರಿನ ಗುಣಮಟ್ಟ ಪರೀಕ್ಷಿಸಿ 3 ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚನೆ ನೀಡಿದರು.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ಮೊದಲ ಆದ್ಯತೆಯಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಮುಖಾಂತರ ಪಡೆಯಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅಗತ್ಯವಿರುವ ಸ್ಥಳದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ 21 ಜಿಲ್ಲೆಗಳ 144 ತಾಲ್ಲೂಕುಗಳಲ್ಲಿನ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇವುಗಳ ಪೈಕಿ 31 ಗ್ರಾಮಗಳಿಗೆ 96 ಟ್ಯಾಂಕರ್‌ಗಳ ಮುಖಾಂತರ ಹಾಗೂ 152 ಗ್ರಾಮಗಳಿಗೆ 154 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿದ್ದು ಕೊಲ್ಲಿ ರಾಷ್ಟ್ರಗಳಲ್ಲಿ ಸಹ ಯುದ್ದದ ಭೀತಿ ಆವರಿಸಿದೆ. ಹಾರ್ಮುಜ್ ಮೂಲಕ ಸಾಗಬೇಕಿದ್ದ ಬೃಹತ್ ಕಂಟೇನರ್ ಹೊತ್ತ ಹಡಗುಗಳ ಸಂಚಾರ ಬಹುತೇಕ ಬಂದ್ ಆಗಿದೆ. ಇದರ ಪರಿಣಾಮ ಇದೀಗ ಜಿಲ್ಲೆಯ ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಮೇಲೆ ಸಹ ಉಂಟಾಗಿದೆ. ಕೆಲವು ಮುಂಬೈ ಮತ್ತು ಚೆನ್ನೈ ಬಂದರಿನಲ್ಲಿ ನಿಂತಿವೆ. ಪರಿಣಾಮ ನೂರಾರು ಕೋಟಿ ರೂಪಾಯಿ ಮೌಲ್ಯದ ಮೆಣಸಿಕಾಯಿ ಕಂಟೇನರ್ಗಳಲ್ಲಿಯೇ ಉಳಿದಿದೆ. ಇತ್ತ ಇರಾನ್ನಿಂದ ಬ್ಯಾಡಗಿ ವರ್ತಕರಿಗೆ ಬರಬೇಕಾಗಿದ್ದ ಕೋಟ್ಯಂತರ ರೂಪಾಯಿ ಹಣವೂ ಸಂದಾಯವಾಗಿಲ್ಲ. ಇದರಿಂದಾಗಿ ಬ್ಯಾಡಗಿ ಮೆಣಸಿನಕಾಯಿ ವರ್ತಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ವರ್ತಕ ಎಸ್.ಆರ್. ಪಾಟೀಲ್ ತಿಳಿಸಿದರು.
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮಾರ್ಚ್ 11ರಿಂದ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳ ಲಭ್ಯತೆ ಕುರಿತು ಜನಸಾಮಾನ್ಯರಲ್ಲಿ ಆತಂಕ ವ್ಯಕ್ತವಾಗಿದೆ. ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಮಾರ್ಚ್ 16 ರಿಂದ ವೈದ್ಯರು ತುರ್ತು ಸೇವೆಗಳು ಸೇರಿದಂತೆ ಎಲ್ಲಾ ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಯೋಜಿಸಿದ್ದಾರೆ. ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳ ಸಂಘ ಎತ್ತಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಭರವಸೆ ನೀಡಿದ್ದಾರೆ.