ಡಿ.ಕೆ ಸುರೇಶ್ 
ರಾಜ್ಯ

ಯುಗಾದಿ ಹಬ್ಬಕ್ಕೆ ಬಮೂಲ್ ನಿಂದ ಭರ್ಜರಿ ಗಿಫ್ಟ್: ಪ್ರತಿ ಲೀಟರ್ ಗೆ 1 ರೂ.ನಂತೆ ಹಾಲು ಉತ್ಪಾದಕರಿಗೆ ಬೋನಸ್; ಡಿ.ಕೆ. ಸುರೇಶ್

ಕಳೆದ ಸಾಲಿನಲ್ಲಿ ನಮ್ಮ ಒಕ್ಕೂದಿಂದ 2900 ಕೋಟಿ ವಹಿವಾಟು ಮಾಡಿದ್ದು, ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿಯಷ್ಟು ವಹಿವಾಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದೆ. ನಮ್ಮಲ್ಲಿ 880 ಖಾಯಂ ಸಿಬ್ಬಂದಿ, 1800 ಗುತ್ತಿಗೆ ಕಾರ್ಮಿಕರು ಇದ್ದಾರೆ.

ಬೆಂಗಳೂರು: 2025-26ನೇ ಸಾಲಿನಲ್ಲಿ ಬಮೂಲ್ 3400 ಕೋಟಿ ರೂ. ವಹಿವಾಟು ಮಾಡಿದ್ದು, 14.50 ಕೋಟಿ ನಷ್ಟದಲ್ಲಿದ್ದ ಸಂಸ್ಥೆಯು ಈ ವರ್ಷ 60 ಕೋಟಿ ಲಾಭ ಕಂಡಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ಹಬ್ಬದ ಬೋನಸ್ ಆಗಿ ಏಪ್ರಿಲ್ 1, 2025ರಿಂದ ಮಾರ್ಚ್ 31, 2026ರ ಅವಧಿಯಲ್ಲಿ ಸಂಸ್ಥೆಗೆ ಹಾಲು ನೀಡಿರುವ 1,27,644 ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ 1 ರೂ. ಹೆಚ್ಚುವರಿ ಹಣವನ್ನು ನೀಡಲು ತೀರ್ಮಾನಿಸಲಾಗಿದೆ” ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಿಳಿಸಿದರು.

ಡೈರಿ ವೃತ್ತದಲ್ಲಿರುವ ಬಮೂಲ ಕಚೇರಿಯಲ್ಲಿ ಸುರೇಶ್ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು. ಕಳೆದ ಸಾಲಿನಲ್ಲಿ ನಮ್ಮ ಒಕ್ಕೂದಿಂದ 2900 ಕೋಟಿ ವಹಿವಾಟು ಮಾಡಿದ್ದು, ಈ ವರ್ಷ ಮಾರ್ಚ್ 31ರ ವೇಳೆಗೆ 3,400 ಕೋಟಿಯಷ್ಟು ವಹಿವಾಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಆಡಳಿತಾತ್ಮಕ ವೆಚ್ಚ ಹೆಚ್ಚಾಗಿದೆ. ನಮ್ಮಲ್ಲಿ 880 ಖಾಯಂ ಸಿಬ್ಬಂದಿ, 1800 ಗುತ್ತಿಗೆ ಕಾರ್ಮಿಕರು ಇದ್ದಾರೆ. ತಿಂಗಳಿಗೆ 15-16 ಕೋಟಿ ರೂ. ಸಿಬ್ಬಂದಿ ವೆಚ್ಚಕ್ಕೆ ಬೇಕಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಆಡಳಿತಾತ್ಮಕವಾಗಿ, ಮಾರುಕಟ್ಟೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ, ಸುಧಾರಣೆ ಮಾಡುವ ಜವಾಬ್ದಾರಿ ನಮ್ಮ ಆಡಳಿತ ಮಂಡಳಿಗೆ ಇದೆ. ನಾನು ಬಮೂಲ್ ಅಧ್ಯಕ್ಷನಾದ ಬಳಿಕ ಬದಲಾವಣೆ ಮಾಡುವ ನಿರೀಕ್ಷೆ ರೈತರು, ಕಾರ್ಮಿಕರಲ್ಲಿದೆ. ನಾನು ಏನು ಮಾಡಿದ್ದೇನೋ ಗೊತ್ತಿಲ್ಲ, ಆದರೆ ನನ್ನ ಮೇಲೆ ನಿರೀಕ್ಷೆಯಂತೂ ಇದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುವಾಗ ನಿರ್ದೇಶಕರು, ಸಿಬ್ಬಂದಿ ಸಹಕಾರ ಬೇಕಾಗುತ್ತದೆ. ಇವರ ಸಹಕಾರದಿಂದ ಒಂದು ಹಂತಕ್ಕೆ ಬಂದಿದ್ದು, ಈ ವರ್ಷ 500 ಕೋಟಿ ರೂ.ನಷ್ಟು ವಹಿವಾಟು ಹೆಚ್ಚಾಗಿದೆ” ಎಂದು ತಿಳಿಸಿದರು.

ಹಿಂದಿನ ಆಡಳಿತ ಮಂಡಳಿಯಲ್ಲಿ 280 ಜನರನ್ನು ಹೊಸದಾಗಿ ನೇಮಕ ಮಾಡಿಕೊಂಡಿದ್ದರು. 3 ವರ್ಷವಾಗಿದ್ದರೂ ನಮಗೆ ಖಾಯಂ ಮಾಡಿಲ್ಲ ಎಂದು ಅವರಿಂದ ಒತ್ತಡವಿದೆ. ಇದನ್ನು ಮಾಡಿದರೆ ವಾರ್ಷಿಕವಾಗಿ 1.60 ಕೋಟಿ ಹೆಚ್ಚಿನ ವೇತನ ನೀಡಬೇಕಾಗುತ್ತದೆ. ಸರ್ಕಾರದ ನಿಯಮ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ವೇತನ ಪ್ರಮಾಣ 2% ಇರಬೇಕು.

ಆದರೆ ನಮ್ಮ ಒಕ್ಕೂಟದಲ್ಲಿ ಅದು 6.5% ಇದೆ. ಇದನ್ನು ತಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಹೀಗಾಗಿ ನಾವು ನಮ್ಮದೇ ಆದ ಗುರಿ ಹೊಂದಿದ್ದೇವೆ. ನಮ್ಮ ವಹಿವಾಟಿನ ಮುಂದಿನ ಗುರಿ 3,400 ಕೋಟಿಯಿಂದ 4500 ಅಥವಾ 5000 ಕೋಟಿಗೆ ಹೋಗಬೇಕು. ಆಗ ಆಡಳಿತ ವೆಚ್ಚ ಸುಧಾರಿಸಬಹುದು. ನಮ್ಮ ಸಂಸ್ಥೆ ಲಾಭ ಕಂಡಿರುವ ಹಿನ್ನೆಲೆಯಲ್ಲಿ, ನಾವು ಕಾರ್ಮಿಕರಿಗೆ ಬಾಕಿ ಇದ್ದ 4.68 ಕೋಟಿ ಡಿಎ ಅನ್ನು ನೀಡಲು ತೀರ್ಮಾನಿಸಿದ್ದೇವೆ. 3 ವರ್ಷದಿಂದ ಖಾಯಂ ಆಗದ ಸಿಬ್ಬಂದಿಗಳನ್ನು ಖಾಯಂ ಮಾಡಿದ್ದೇವೆ.

ನಮಗೆ ಶಕ್ತಿ ನೀಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ತಲಾ 5 ಸಾವಿರ ಬೋನಸ್ ನೀಡಲು ತೀರ್ಮಾನಿಸಿದ್ದೇವೆ. 2300 ಪ್ರಾಥಮಿಕ ಹಾಲು ಒಕ್ಕೂಟಗಳಿಗೆ ನಿರ್ವಹಣೆಗೆ ಪ್ರತಿ ಲೀಟರ್ ಗೆ 1.40 ರೂ. ನೀಡುತ್ತಿದ್ದು, ಈ ಬಾರಿ ನಮ್ಮ ನಿರ್ದೇಶದ ಮನವಿ ಮೇರೆಗೆ ಪ್ರತಿ ಸಂಘಗಳಿಗೆ 15 ಸಾವಿರದಂತೆ 3.45 ಕೋಟಿ ರೂ.ಗಳನ್ನು ನೀಡಲಾಗುವುದು. ನಮ್ಮಲ್ಲಿ 1,27,644 ಹಾಲು ಉತ್ಪಾದಕರಿದ್ದು, ಅವರು ಈ ವರ್ಷ 59,39,78,492 ಲೀಟರ್ ಹಾಲು ನೀಡಿದ್ದಾರೆ.

ನಮ್ಮ ಒಕ್ಕೂಟದ ಇತಿಹಾಸದಲ್ಲಿ ಮೊದಲನ ಬಾರಿಗೆ ನಾವು ಅವರಿಗೆ ಪ್ರತಿ ಲೀಟರ್ ಗೆ 1 ರೂ. ನಂತೆ 59,39,78,492 ರೂ. ಅನ್ನು ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಿದ್ದೇವೆ. ಯುಗಾದಿ ಹಬ್ಬದ ಕೊಡುಗೆಯಾಗಿ ನಮ್ಮ ಆಡಳಿತ ಮಂಡಳಿ ಈ ನಿರ್ಧಾರ ಮಾಡಿದ್ದು, ಮಾ.31 ಅಥವಾ ಏ.10ರ ಒಳಗಾಗಿ ಅವರ ಖಾತೆಗೆ ಹಣ ಜಮೆ ಮಾಡಲಾಗುವುದು” ಎಂದು ತಿಳಿಸಿದರು.

“ಬೆಂಗಳೂರು ಹಾಲು ಒಕ್ಕೂಟದಲ್ಲಿ 24 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿ ಹೊಂದಿದ್ದು, ನಮ್ಮ ಮುಂದೆ ಮಾರುಕಟ್ಟೆ ಸವಾಲು ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ಲೀಟರ್ ಗೆ 4 ರೂ. ಹೆಚ್ಚಳ ಮಾಡಿದೆ. ಆದರೂ ಬೇರೆ ಹಾಲುಗಳಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವ ಹಾಲು ಎಂದರೆ ಅದು ನಂದಿನಿ ಮಾತ್ರ. ಇದು ಹೆಮ್ಮೆಯ ವಿಚಾರ.

ನಾವು ಸರ್ಕಾರದ ಆದೇಶಕ್ಕೆ ಕಟ್ಟುಬಿದ್ದು ಈ ಬೆಲೆ ಏರಿಕೆ ಹಣವನ್ನು ಗ್ರಾಹಕರಿಂದ ಪಡೆದು ರೈತರಿಗೆ ನೀಡುತ್ತಿದ್ದೇವೆ. ನಾವು 16-18 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಿದರೂ ಹಾಲು ಮಾರಾಟ ಮಾಡುತ್ತಿರುವುದು 10 ಲಕ್ಷ ಲೀಟರ್ ಮಾತ್ರ. ಕೆಎಂಎಫ್ ನಲ್ಲಿ 1.05 ಕೋಟಿ ಲೀಟರ್ ಹಾಲು ಸಂಗ್ರಹಿಸಿದರೂ ಮಾರಾಟ ಮಾಡುವುದು 48-50 ಲಕ್ಷ ಲೀಟರ್ ಮಾತ್ರ. ಉಳಿದ ಹಾಲನ್ನು ವಿವಿಧ ಪದಾರ್ಥಗಳ ಮೂಲಕ ಮಾರುತ್ತಿದ್ದೇವೆ.

ಹಾಲಿನ ಬೆಲೆಯಲ್ಲಿ ಹೆಚ್ಚಳವಾದ 4 ರೂ. ಮೊಸರು, ತುಪ್ಪ, ಬೆಣ್ಣೆ ಹಾಗೂ ಇತರೆ ಉತ್ಪನ್ನಗಳ ಬೆಲೆ ಏರಿಕೆ ಆಗಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಎಲ್ಲಾ ಹಾಲು ಒಕ್ಕೂಟ ಸಂಸ್ಥೆ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು. ನಮ್ಮ ಹೊಸ ಆಡಳಿತ ಮಂಡಳಿ ಬಂದ ಬಳಿಕ ನಮ್ಮ ಸಂಸ್ಥೆ 14.50 ಕೋಟಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಲು ಉತ್ಪಾದನೆ ಹೆಚ್ಚಾದಾಗ 2 ರೂ. ದರ ಕಡಿಮೆ ಮಾಡಿ ರೈತರಿಂದ ಸಂಗ್ರಹ ಮಾಡುವುದು ಒಖ್ಕೂಟಗಳ ವಾಡಿಕೆ. ಆದರೆ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ 14 ಕೋಟಿ ನಷ್ಟದಲ್ಲಿದ್ದರೂ ರೈತರಿಗೆ ದರ ಕಡಿಮೆ ಮಾಡಲಿಲ್ಲ. ನಮ್ಮ ಮುಂದೆ ಸಾಕಷ್ಟು ಸವಾಲುಗಳಿತ್ತು” ಎಂದು ವಿವರಿಸಿದರು.

“ನಮ್ಮ ಒಕ್ಕೂಟದಲ್ಲಿ ಸಂಗ್ರಹಿಸುವ ಹಾಲಿನಲ್ಲಿ 65% ಅನ್ನು ಮಾತ್ರ ಮಾರಾಟ ಮಾಡಿದ್ದು, ಉಳಿದ ಹಾಲನ್ನು ಉತ್ಪನ್ನಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಬೇರೆಯವರ ಜತೆ ಸ್ಪರ್ಧೆಗಾಗಿ ತಂದಿರುವ ವಿವಿಧ ಹಾಲುಗಳಾದ ಟೋನ್ಡ್ ಮಿಲ್ಕ್, ಸಮೃದ್ಧಿ, ಶುಭಂ ಹಾಲುಗಳಲ್ಲಿ 1 ರೂ, 20 ಪೈಸೆ, 2 ರೂ. ನಷ್ಟು ನಷ್ಟವಿದೆ. ಹೊಟೇಲ್ ಗಳಿಗೆ ಮಾರುವ 6 ಲೀಟರ್ ಪ್ಯಾಕೆಟ್ ಮೂಲಕ ಪ್ರತಿ ಲೀಟರ್ ಗೆ 1.60 ರೂ. ನಷ್ಟವಾಗುತ್ತದೆ. ಇದನ್ನು ನಾವು ಸರ್ಕಾರಕ್ಕೆ ಹೇಳಿದರೆ, ಸರ್ಕಾರವೂ ಒಪ್ಪಲ್ಲ, ನೀವು ಒಪ್ಪುವ ಸ್ಥಿತಿಯಲ್ಲಿ ಇಲ್ಲ. ಆದರೂ ಇದು ರೈತರ ಸಂಸ್ಥೆಯಾಗಿರುವುದರಿಂದ ರೈತರಿಗೆ ಗೌರವ ಉಳಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ” ಎಂದರು.

ಸೆಸ್ ದರ ಹೆಚ್ಚಳ ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದೀರಾ ಎಂದು ಕೇಳಿದಾಗ, “ನಮ್ಮ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಲ್ಲಿ ನೀಡಲಾಗುವ ಹಾಲಿನ ಪುಡಿ ಜತೆಗೆ ಸರ್ಕಾರ ರಾಗಿ ಮಾಲ್ಟ್ ನೀಡುತ್ತಿದೆ. ಈ ಪ್ರಕ್ರಕ್ರೆಯಲ್ಲಿ ಹಾಲಿನ ಪುಡಿಯ ಸ್ವಲ್ಪ ಪ್ರಮಾಣ ಮತ್ತೆ ಮಾರುಕಟ್ಟೆಗೆ ಬೇರೆ ರೂಪದಲ್ಲಿ ಬರುತ್ತಿವೆ. ಅವುಗಳನ್ನು ತಡೆಯಲು ರಾಗಿ ಮಾಲ್ಟ್ ಪುಡಿಯನ್ನು ನಾವೇ ಮಿಶ್ರಣ ಮಾಡಿ ಕೊಡಬೇಕಾಗಿದೆ. ಸ್ಥಳೀಯ ಬೇಕರಿಗಳಲ್ಲಿ ಬಿಸ್ಕೆಟ್ ಮಾಡಲು ಹಾಲಿನ ಪುಡಿ ಬೇಕಾಗುತ್ತದೆ.

ಸ್ಥಳೀಯ ಮಟ್ಟದಲ್ಲಿ ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪುಡಿಯನ್ನು ಈ ಬೇಕರಿಗೆ 2 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಸೋರಿಕೆಯಿಂದ ನಮ್ಮ ಉತ್ಪನ್ನಗಳಿಗೆ ಹೊಡೆತ ಬೀಳಲಿದೆ. ಹೀಗಾಗಿ ರಾಗಿ ಮಾಲ್ಟ್ ಹಾಗೂ ಹಾಲಿನ ಪುಡಿಯನ್ನು ಪ್ರತ್ಯೇಕವಾಗಿ ನೀಡುವ ಬದಲು, ನಾವೇ ಮಿಶ್ರಣ ಮಾಡಿ ನೀಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆಗ ಸೋರಿಕೆಯಾಗುವ ಹಾಲಿನ ಪುಡಿಯನ್ನು ತಡೆಯಬಹುದು. ನಮ್ಮ ಒಕ್ಕೂಟದಿಂದ ವಾರ್ಷಿಕವಾಗಿ ಈ ಯೋಜನೆಗಾಗಿಯೇ 7,400 ಟನ್ ಹಾಲಿನ ಪುಡಿ ನೀಡುತ್ತಿದ್ದೇವೆ. ಇದಕ್ಕಾಗಿ ನಿತ್ಯ 75 ಸಾವಿರ ಲೀ. ಹಾಲು ಬಳಕೆ ಮಾಡಲಾಗುತ್ತಿದೆ” ಎಂದು ವಿವರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಕ್ಕಳ ಸಾವಿಗೆ ಪ್ರತೀಕಾರ: ಇಸ್ರೇಲ್-ಅಮೆರಿಕ, ಗಲ್ಫ್ ದೇಶಗಳ ಮೇಲೆ ದಾಳಿ ನಿಲ್ಲಲ್ಲ; ಇರಾನ್ ಹೊಸ ಸರ್ವೋಚ್ಛ ನಾಯಕ ವಾರ್ನಿಂಗ್!

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ನಮ್ಮ ಶಕ್ತಿ ಇರಾನ್ ನಿರ್ನಾಮಕ್ಕೆ ಮೀಸಲು, ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಗಳಿಗೆ ಬೆಂಗಾವಲು ನೀಡಲ್ಲ: ಅಮೆರಿಕ

ಮಾರ್ಚ್ 16 ರಂದು ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಘೋಷಣೆ ಸಾಧ್ಯತೆ

SCROLL FOR NEXT