ಮುಖ್ಯಮಂತ್ರಿ ಸಿದ್ದರಾಮಯ್ಯ 
ರಾಜ್ಯ

ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ರಾಜ್ಯದ ಆಡಳಿತ ಸಮರ್ಪಕವಾಗಿ ನಡೆಯಲು ಇಲಾಖಾ ಕಾರ್ಯದರ್ಶಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಸಂವಿಧಾನದ ಆಶಯಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾದುದು ಎಲ್ಲಾ ಕಾರ್ಯದರ್ಶಿಗಳ ಕರ್ತವ್ಯವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಸುಮಾರು ಶೇ.5ರವರೆಗೆ ಕಡಿಮೆಯಾಗುವ ಸಾಧ್ಯತೆ ಇದ್ದು, ಕುಡಿಯುವ ನೀರಿನ ಸರಬರಾಜಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಶನಿವಾರ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಎಲ್ಲಾ ಇಲಾಖೆಗಳ ಉನ್ನತಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.

ಈ ವರ್ಷ ಮಳೆ ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು. ತಮ್ಮ ಉಸ್ತುವಾರಿಯಲ್ಲಿನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂದು ಹೇಳಿದರು.

ರಾಜ್ಯದ ಆಡಳಿತ ಸಮರ್ಪಕವಾಗಿ ನಡೆಯಲು ಇಲಾಖಾ ಕಾರ್ಯದರ್ಶಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಸಂವಿಧಾನದ ಆಶಯಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾದುದು ಎಲ್ಲಾ ಕಾರ್ಯದರ್ಶಿಗಳ ಕರ್ತವ್ಯವಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾರ್ಯವನ್ನು ಮಾಡಬಾರದು. ವಲ್ಲಭಬಾಯ್ ಪಟೇಲ್ ಅವರು ʻಕಾರ್ಯದರ್ಶಿಗಳು ನಿರ್ಭಯವಾಗಿ ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂತ್ರಿಗಳಿಗೆ ತಿಳಿಸಬೇಕು. ಮಂತ್ರಿ ಅಸಮಾಧಾನಗೊಳ್ಳುತ್ತಾರೆ ಎಂದು ಸತ್ಯ ಹೇಳುವುದರಿಂದ ಹಿಂಜರಿಯಬಾರದುʼ ಎಂದು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಇದರಂತೆ ಹಿರಿಯ ಅಧಿಕಾರಿಗಳು ನಿಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ, ಸ್ವತಂತ್ರವಾಗಿ, ಸತ್ಯವಾಗಿ ಹೇಳಿ.

ಅಧಿಕಾರಿಗಳು ಯಾವತ್ತೂ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಬಾರದು & ಸರ್ಕಾರವನ್ನು ತಪ್ಪು ಹಾದಿಗೆ ಎಳೆಯಬಾರದು. ನಮ್ಮ ನಿಲುವುಗಳು, ತೀರ್ಮಾನಗಳು ಯಾವತ್ತೂ ಜನಪರವಾಗಿರಬೇಕು. ಅಧಿಕಾರಿಗಳು 30-35 ವರ್ಷಗಳ ಕಾಲ ಆಡಳಿತ ವ್ಯವಸ್ಥೆಯಲ್ಲಿದ್ದರೆ, ಜನಪ್ರತಿನಿಧಿಗಳು ಕೇವಲ 5 ವರ್ಷಗಳ ಕಾಲ ಮಾತ್ರ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ.

ಬಜೆಟ್ ನಲ್ಲಿ ಮಾಡಿರುವ ಘೋಷಣೆಗಳನ್ನು ಜಾರಿಗೊಳಿಸುವ ಕಾರ್ಯ ಅಧಿಕಾರಿಗಳದ್ದು, ಕಳೆದ ವರ್ಷದ ಬಜೆಟ್‌ನ 15 ಘೋಷಣೆಗಳ ಜಾರಿ ಇನ್ನೂ ಆಗಿಲ್ಲ. ಇದಕ್ಕೆ ಯಾರು ಹೊಣೆ? ಈ ವರ್ಷದ ಬಜೆಟ್‌ನಲ್ಲಿ 218 ಹೊಸ ಘೋಷಣೆಗಳು ಸೇರಿದಂತೆ ಒಟ್ಟಾರೆ 565 ಘೋಷಣೆಗಳನ್ನು ಮಾಡಿದ್ದೇವೆ. ಬಜೆಟ್‌ನ ಎಲ್ಲಾ ಘೋಷಣೆಗಳನ್ನು ಅದೇ ವರ್ಷ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬಜೆಟ್ ಘೋಷಣೆಗಳು ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳದೆ ಇರಬಾರದು. ಅನುಷ್ಠಾನದಲ್ಲಿನ ಪ್ರಾಯೋಗಿಕ ತೊಡಕುಗಳನ್ನು ನೇರವಾಗಿ ನನ್ನ ಅಥವಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.

2026-27ನೇ ಸಾಲಿನ ಬಜೆಟ್ ನಲ್ಲಿನ ಘೋಷಣೆಗಳ ಪೈಕಿ ಕೇವಲ 5 ಘೋಷಣೆಗಳ ಬಗ್ಗೆ ಮಾತ್ರ ಸರ್ಕಾರಿ ಆದೇಶ ಮಾಡಲಾಗಿದೆ. ಮೇ ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು ಇಲ್ಲದಿದ್ದರೆ ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಎರಡು ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗಿದ್ದ 15,334 ಸ್ವೀಕೃತಿಗಳ ಪೈಕಿ 15,295 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ 45 ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದರು.

ಸಾರ್ವಜನಿಕ ಕುಂದುಕೊರತೆ (IPGRS)ಯಡಿ 3,27,052 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3,17,576 ವಿಲೇವಾರಿ ಮಾಡಲಾಗಿದೆ. 1,828 ಅರ್ಜಿಗಳ ವಿಲೇವಾರಿ ನಿಗದಿತ ಕಾಲಾವಧಿ ಮುಗಿದಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೆ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಇದಕ್ಕೆ ಅವಕಾಶ ಮಾಡಬಾರದು. ಇದೇ ರೀತಿ ಸಕಾಲ ಅಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಹ ಸಕಾಲದಲ್ಲಿಯೇ ವಿಲೇವಾರಿ ಮಾಡಬೇಕು. ನೇಮಕಾತಿಗೆ ಮಂಜೂರಾತಿ ನೀಡಲಾಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ವೃಂದದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ ಬಾಕಿಯಿರುವ 32,132 ಹುದ್ದೆಗಳಿವೆ. ಕೆಲವು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪರಿಷ್ಕರಣೆ ಬಾಕಿಯಿದ್ದು, ಇದನ್ನು ಆದಷ್ಟು ಬೇಗನೆ ಮುಗಿಸಬೇಕು ಎಂದು ಸೂಚನೆ ನೀಡಿದರು.

ವಿವಿಧ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿ 2025-26 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ರೂ. 22,768 ಕೋಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ರೂ.16,729 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದಿಂದ ರೂ.11,367 ಕೋಟಿ ಅನುದಾನ ಬಿಡುಗಡೆಗೆ ಬಾಕಿಯಿದೆ. ಈ ಅವಧಿಯಲ್ಲಿ ಒಟ್ಟಾರೆ ರೂ.42,222 ಕೋಟಿ ಲಭ್ಯ ಅನುದಾನವಿದ್ದು, ರೂ.38,236 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನವನ್ನು ನಿಗದಿತ ಅವಧಿಯ ಒಳಗಾಗಿ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು. ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ರೂ.2 ಕೋಟಿ ವರೆಗೆ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ಒಟ್ಟು ಸೇರಿಸಿ ಪ್ಯಾಕೇಜ್ ಮಾಡುವ ಮೂಲಕ ಮೀಸಲಾತಿ ತಪ್ಪಿಸಲು ಅವಕಾಶ ನೀಡಬಾರದು. ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿಂದ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಅವಕಾಶ ಮಾಡಬಾರದು.

ಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಮಾಡಲು ಹೋಗಬಾರದು, ಇದು ಸರ್ವಾಧಿಕಾರಕ್ಕೆ ಹಾದಿ ಮಾಡುತ್ತದೆʼ ಎಂದು ಅಂಬೇಡ್ಕರ್ ಅವರು ಎಚ್ಚರಿಕೆ ನೀಡಿದ್ದರು. ಅದರಂತೆ ನೀವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ. ಸಚಿವರಿಗೆ ಕಾನೂನಿನ ವ್ಯಾಪ್ತಿಯೊಳಗೆ ಸಲಹೆಗಳನ್ನು ನೀಡಿ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಕಾರ್ಯದರ್ಶಿಗಳ ಕಾರ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಆಡಳಿತವು ಇನ್ನಷ್ಟು ಚುರುಕುಗೊಳ್ಳಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟೆಹ್ರಾನ್ ಶಾಂತಿ ಪ್ರಸ್ತಾವನೆಗೆ ಒಪ್ಪದ ಟ್ರಂಪ್: ಇರಾನ್–ಅಮೆರಿಕ ಸಂಘರ್ಷ ಪುನರಾರಂಭ ಸಾಧ್ಯತೆ, ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ

US-Iran Peace Talks: ಇರಾನ್ ಪ್ರಸ್ತಾವನೆ ಸ್ವೀಕಾರಾರ್ಹವಾಗಿರುತ್ತದೆ ಎಂದೆನಿಸುತ್ತಿಲ್ಲ, ಮರುಪರಿಶೀಲಿಸುತ್ತೇನೆ; ಟ್ರಂಪ್

ಯುದ್ದ ಬಯಸಿದ್ದು ನಾವಲ್ಲ-ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ: ಇರಾನ್ ಸರ್ವೋಚ್ಛ ನಾಯಕನ ಪ್ರತಿನಿಧಿ

ಪಶ್ಚಿಮ ಬಂಗಾಳ: ಫಾಲ್ಟಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮೇ 21 ರಂದು ಮರು ಮತದಾನ; ಚುನಾವಣಾ ಆಯೋಗ ಆದೇಶ

IPL 2026: ಮುಂಬೈಗೆ ಮತ್ತೆ ಸೋಲು, 8 ವಿಕೆಟ್ ಗಳಿಂದ ಗೆದ್ದು ಬೀಗಿದ CSK!

SCROLL FOR NEXT