ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!

ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೊಸದಾಗಿ ಬಿಡುಗಡೆ ಮಾಡಿರುವ 'ಫಾರಿನ್ ಮೀಡಿಯಾ ಫೆಸಿಲಿಟೇಶನ್ ಗೈಡ್‌ಲೈನ್ಸ್, 2026' ಅನ್ವಯ, ಇನ್ನು ಮುಂದೆ ವಿದೇಶಿ ಪತ್ರಕರ್ತರು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪ್ರಮುಖ ನಗರಗಳಿಂದ ಹೊರಗೆ ಪ್ರಯಾಣಿಸುವಂತಿಲ್ಲ.
AI photo
ಎಐ ಸೃಷ್ಟಿತ ಚಿತ್ರ
Updated on

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಪತ್ರಕರ್ತರು ಮತ್ತು ವಿದೇಶಿ ಮಾಧ್ಯಮ ಸಂಸ್ಥೆಗಳ ಮೇಲೆ ಅತ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಹೇರಿದ್ದು, ದೇಶದಲ್ಲಿ ದೊಡ್ಡ ಮಟ್ಟದ ಮಾಧ್ಯಮ ಸೆನ್ಸಾರ್‌ಶಿಪ್ ಜಾರಿಗೆ ತಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪ್ರತಿಭಟನೆಗಳ ಮೇಲೆ ಸರ್ಕಾರ ಮತ್ತು ಸೇನೆ ನಡೆಸಿದ ದಮನ ಕ್ರಮಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪಾಕಿಸ್ತಾನ ಸರ್ಕಾರ ವಿದೇಶಿ ಮಾಧ್ಯಮಗಳ ಚಟುವಟಿಕೆಗಳ ಮೇಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.

ಪಾಕಿಸ್ತಾನ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೊಸದಾಗಿ ಬಿಡುಗಡೆ ಮಾಡಿರುವ 'ಫಾರಿನ್ ಮೀಡಿಯಾ ಫೆಸಿಲಿಟೇಶನ್ ಗೈಡ್‌ಲೈನ್ಸ್, 2026' ಅನ್ವಯ, ಇನ್ನು ಮುಂದೆ ವಿದೇಶಿ ಪತ್ರಕರ್ತರು ಸರ್ಕಾರದ ಪೂರ್ವಾನುಮತಿ ಇಲ್ಲದೆ ಪ್ರಮುಖ ನಗರಗಳಿಂದ ಹೊರಗೆ ಪ್ರಯಾಣಿಸುವಂತಿಲ್ಲ.

ಇಸ್ಲಾಮಾಬಾದ್‌, ಲಾಹೋರ್‌ ಮತ್ತು ಕರಾಚಿ ನಗರಗಳನ್ನು ಹೊರತುಪಡಿಸಿ ದೇಶದ ಬೇರೆ ಯಾವುದೇ ಪ್ರದೇಶದಲ್ಲಿ ವರದಿ ಮಾಡಲು ವಿದೇಶಿ ಪತ್ರಕರ್ತರು ಸರ್ಕಾರದಿಂದ ಪೂರ್ವಾನುಮತಿ (ಎನ್‌ಒಸಿ) ಪಡೆಯುವುದು ಕಡ್ಡಾಯಗೊಳಿಸಲಾಗಿದೆ.

ಮಾನ್ಯತೆ ಪಡೆದಿರುವ ವಿದೇಶಿ ಪತ್ರಕರ್ತರು ಅಧಿಕೃತ ವರದಿಗಾರಿಕೆ, ಚಿತ್ರೀಕರಣ ಅಥವಾ ಯಾವುದೇ ವೃತ್ತಿಪರ ಕಾರ್ಯಕ್ಕಾಗಿ ಮೂರು ಪ್ರಮುಖ ನಗರಗಳ ಹೊರಗೆ ತೆರಳಬೇಕಾದರೆ ಸಚಿವಾಲಯದ ಇಪಿ ವಿಂಗ್ (External Publicity Wing) ನಿಂದ ಮುಂಚಿತವಾಗಿ ಎನ್‌ಒಸಿ ಪಡೆಯಬೇಕಾಗಿದೆ.

ಈ ಹೊಸ ಮಾರ್ಗಸೂಚಿಗಳು ವಿದೇಶಿ ಮಾಧ್ಯಮಗಳ ಕಾರ್ಯಾಚರಣೆಗೆ ಹಲವು ಕಠಿಣ ನಿಯಮಗಳನ್ನು ವಿಧಿಸಿವೆ. ಪಾಕಿಸ್ತಾನದ ಯಾವುದೇ ಪ್ರಾಂತ್ಯ, ಗಡಿ ಪ್ರದೇಶ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ವರದಿ ಮಾಡಲು ಸರ್ಕಾರದ ಅನುಮತಿ ಇಲ್ಲದೆ ಅವಕಾಶ ಇರುವುದಿಲ್ಲ. ಆದರೆ, ವೈಯಕ್ತಿಕ ಪ್ರವಾಸದ ಉದ್ದೇಶದಿಂದ ಅಬೊಟ್ಟಾಬಾದ್‌ ಮತ್ತು ಮುರ್ರಿ ಬೆಟ್ಟದ ಪ್ರದೇಶಗಳಿಗೆ ತೆರಳಲು ಮಾತ್ರ ಸೀಮಿತ ವಿನಾಯಿತಿ ನೀಡಲಾಗಿದ್ದು, ಅದಕ್ಕೂ ಕನಿಷ್ಠ ಮೂರು ದಿನಗಳ ಮುಂಚಿತವಾಗಿ ಮಾಹಿತಿ ನೀಡಿ ಅನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.

AI photo
ಪಾಕಿಸ್ತಾನ: ಧುರಂಧರ್ ಶೈಲಿಯಲ್ಲಿ ಗುಂಡಿನ ದಾಳಿ; 30 ಭಯೋತ್ಪಾದಕರು ಹತ್ಯೆ; ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ; ವಿಡಿಯೋ ವೈರಲ್

ಈ ನಿಯಮಗಳು ಕೇವಲ ವಿದೇಶಿ ಪತ್ರಕರ್ತರಿಗೆ ಮಾತ್ರ ಸೀಮಿತವಾಗಿಲ್ಲ. ಮುದ್ರಣ, ದೂರದರ್ಶನ, ಡಿಜಿಟಲ್‌ ಮಾಧ್ಯಮ, ಆನ್‌ಲೈನ್‌ ಸುದ್ದಿ ವೇದಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಿಗೆ ಕೆಲಸ ಮಾಡುವ ಎಲ್ಲ ವಿದೇಶಿ ಮಾಧ್ಯಮ ಸಿಬ್ಬಂದಿ, ಮಾಧ್ಯಮ ಸಂಸ್ಥೆಗಳ ಮಾಲೀಕರು, ಸ್ವತಂತ್ರ ಪತ್ರಕರ್ತರು (ಫ್ರೀಲಾನ್ಸರ್‌ಗಳು), ಸ್ಥಳೀಯ ಸಹಾಯಕರು (ಫಿಕ್ಸರ್‌ಗಳು), ನಿರ್ಮಾಣ ತಂಡಗಳು ಮತ್ತು ಇತರೆ ಸಹಾಯಕ ಸಿಬ್ಬಂದಿಗೂ ಅನ್ವಯವಾಗಲಿವೆ.

ಇದರ ಜೊತೆಗೆ, ವಿದೇಶಿ ಮಾಧ್ಯಮಗಳಿಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿ ಮಾಹಿತಿ ಸಚಿವಾಲಯದ ಇಪಿ ವಿಂಗ್‌ ಡಿಜಿಟಲ್‌ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ವಿದೇಶಿ ಮಾಧ್ಯಮಗಳಿಗೆ ಕೆಲಸ ಮಾಡುವ ಪಾಕಿಸ್ತಾನಿ ನಾಗರಿಕರು, ಅವರು ಪಾಕಿಸ್ತಾನದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ತಮ್ಮ ಸಮೀಪದ ಪಾಕಿಸ್ತಾನ ರಾಯಭಾರ ಕಚೇರಿ, ಹೈಕಮಿಷನ್‌ ಅಥವಾ ಕಾನ್ಸುಲೇಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ.

ಹೊಸ ನೀತಿಯಡಿ ಎರಡು ಹಂತದ ಮಾನ್ಯತಾ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಪಾಕಿಸ್ತಾನದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ವಿದೇಶಿ ಪತ್ರಕರ್ತರಿಗೆ ವಾರ್ಷಿಕ ಶಾಶ್ವತ ಮಾನ್ಯತೆ ನೀಡಲಾಗುತ್ತದೆ. ಇನ್ನು ಅಲ್ಪಾವಧಿಗೆ ಬರುವ ಪತ್ರಕರ್ತರಿಗೆ ಗರಿಷ್ಠ ಮೂರು ತಿಂಗಳ ಅವಧಿಯ ತಾತ್ಕಾಲಿಕ ಮಾನ್ಯತೆ ನೀಡಲಾಗುತ್ತದೆ. ನೋಂದಣಿ ಗುರುತಿನ ಚೀಟಿ ಸಾಮಾನ್ಯವಾಗಿ ಏಳು ಕೆಲಸದ ದಿನಗಳಲ್ಲಿ ಸಿಗಲಿದ್ದು, ಸಂಪೂರ್ಣ ಹಿನ್ನೆಲೆ ಪರಿಶೀಲನೆಯ ಬಳಿಕ ಅಧಿಕೃತ ಮಾನ್ಯತಾ ಚೀಟಿ ಪಡೆಯಲು ನಾಲ್ಕರಿಂದ ಆರು ವಾರಗಳು ಬೇಕಾಗಬಹುದು ಎಂದು ತಿಳಿಸಲಾಗಿದೆ.

ಮಾನ್ಯತೆ ಪಡೆದ ಪತ್ರಕರ್ತರಿಗೆ ಇಪಿ ವಿಂಗ್‌ ಪ್ರೆಸ್‌ ಅಕ್ರಿಡಿಟೇಶನ್‌ ಕಾರ್ಡ್‌ ನೀಡಲಾಗುತ್ತದೆ. ಈ ಕಾರ್ಡ್‌ ಮೂಲಕವೇ ಸರ್ಕಾರಿ ಕಚೇರಿಗಳು, ಪತ್ರಿಕಾಗೋಷ್ಠಿಗಳು ಹಾಗೂ ಅಧಿಕೃತ ಕಾರ್ಯಕ್ರಮಗಳಿಗೆ ಪ್ರವೇಶ ದೊರೆಯಲಿದೆ.

ಆದರೆ, ಈ ಹೊಸ ನಿಯಮಗಳ ಕುರಿತು ಪತ್ರಿಕಾ ಸ್ವಾತಂತ್ರ್ಯದ ಪರ ಹೋರಾಡುವ ಸಂಘಟನೆಗಳು ಮತ್ತು ರಾಜಕೀಯ ವಿಶ್ಲೇಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಪಿಒಕೆಯಲ್ಲಿ ನಡೆದ ಪ್ರತಿಭಟನೆಗಳ ವಿರುದ್ಧ ಸರ್ಕಾರ ಕೈಗೊಂಡ ದಮನ ಕ್ರಮವನ್ನು ಅಂತರರಾಷ್ಟ್ರೀಯ ಮಾಧ್ಯಮಗಳು ಬಹಿರಂಗಪಡಿಸಿದ ತಕ್ಷಣವೇ ಈ ನಿಯಮಗಳನ್ನು ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ವಿಶೇಷವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಬಲೂಚಿಸ್ತಾನ ಮತ್ತು ಖೈಬರ್ ಪಖ್ತುನ್ಖ್ವಾ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸ್ವತಂತ್ರ ವರದಿಗಾರಿಕೆಯನ್ನು ತಡೆಯುವ ಉದ್ದೇಶದಿಂದಲೇ ಎನ್‌ಒಸಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇನ್ನೊಂದೆಡೆ, ಪಾಕಿಸ್ತಾನ ಸರ್ಕಾರ ಮಾತ್ರ ಈ ಹೊಸ ನೀತಿಯು ವಿದೇಶಿ ಮಾಧ್ಯಮಗಳ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಹಾಗೂ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಿಗಾಗಿ ಏಕೀಕೃತ ವ್ಯವಸ್ಥೆಯನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದು ಸಮರ್ಥಿಸಿಕೊಂಡಿದೆ. ಆದರೆ, ಸರ್ಕಾರದ ಈ ವಾದವನ್ನು ಪತ್ರಿಕಾ ಹೋರಾಟಗಾರರು ಪ್ರಶ್ನಿಸುತ್ತಿದ್ದು, ಇದು ಮಾಹಿತಿ ಹರಿವಿನ ಮೇಲೆ ಮತ್ತಷ್ಟು ನಿಯಂತ್ರಣ ಸಾಧಿಸುವ ಪ್ರಯತ್ನ ಎಂದು ಟೀಕಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com