ಬೆಂಗಳೂರು: ರೈತರು ಎರಡೇಟು ಹೊಡೆದರೂ, ನನ್ನ ಬಟ್ಟೆ ಹರಿದರೂ ಬಿಡದಿ ಟೌನ್‌ಶಿಪ್ ಮಾಡಿಯೇ ಸಿದ್ದ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬಿಡದಿ ಟೌನ್‌ಶಿಪ್‌ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ವಿರೋಧಕ್ಕೆ ಸಂಬಂಧಪಟ್ಟಂತೆ ನಿನ್ನೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳದಾಗ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಮಾಡಿದ್ದ ಯೋಜನೆಯನ್ನೇ ನಾವು ಮುಂದುವರಿಸುತ್ತಿದ್ದೇವೆ. ಅಗತ್ಯವಿಲ್ಲ ಎಂದಾಗಿದ್ದರೆ ಕುಮಾರಸ್ವಾಮಿ ಏಕೆ ಭೂಮಿಯನ್ನು ಡಿನೋಟಿಫೈ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಬಟ್ಟೆ ಹರಿದರೂ ಬಿಡಲ್ಲ
ಯೋಜನೆಗೆ ಭೂಮಿ ಬಿಟ್ಟುಕೊಡುವಂತೆ ನಾನೇ ಖುದ್ದಾಗಿ ರೈತರ ಮನವೊಲಿಸುತ್ತೇನೆ. ಸಮಯ, ದಿನಾಂಕ ಗೊತ್ತುಪಡಿಸಿ ರೈತರ ಮುಂದೆ ಹೋಗುತ್ತೇನೆ. ರೈತರು ನನಗೆ ಎರಡೇಟು ಹೊಡೆಯಬಹುದು ಅಷ್ಟೇ ತಾನೇ? ಬಟ್ಟೆ ಹರಿಯಬಹುದು, ಕಲ್ಲೆಸೆಯಬಹುದು, ಧಿಕ್ಕಾರ ಹಾಕಬಹುದು. ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನ ಎಂದು ಡಿಸಿಎಂ ಹೇಳಿದರು.
ಮುಂದಿನ ದಿನಗಳಲ್ಲಿ ಈ ರೈತರು ಮತ್ತು ಅವರ ಮಕ್ಕಳ ಭವಿಷ್ಯ ಮುಖ್ಯ. ಮುಂದಿನ 20 ವರ್ಷಗಳ ನಂತರ ಬಿಡದಿ ಮತ್ತು ಬೆಂಗಳೂರು ದಕ್ಷಿಣದ ಜನರು ನನ್ನ ಕೆಲಸವನ್ನು ನೆನಪಿಸಿಕೊಳ್ಳುತ್ತಾರೆ. ಭೂಮಿಯನ್ನು ಡಿನೋಟಿಫೈ ಮಾಡಲು ನಾನಂತೂ ತಯಾರಿಲ್ಲ ಎಂದು ತಿಳಿಸಿದರು.
ಭೂ ಗ್ಯಾರಂಟಿ
ಜನಸಾಮಾನ್ಯರು ಸಂಪಾದಿಸಿದ ಆಸ್ತಿಗಳಿಗೆ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ಆರನೇ ಗ್ಯಾರಂಟಿಯಾಗಿ 'ಭೂಮಿ ಗ್ಯಾರಂಟಿ' ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಜನರ ಮನೆ ಬಾಗಿಲಿಗೆ ಇ-ಖಾತೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. 'ಬಿ' ಯಿಂದ 'ಎ' ಖಾತೆಗೆ ಬದಲಾವಣೆ ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.