ಬೆಂಗಳೂರು: ಮಹಾನಗರಿ ಬೆಂಗಳೂರಿನಲ್ಲಿ ಕೆಲಸಗಾರರು ಅಂದ್ರೆ ಅಸಡ್ಡೆ, ದೌಲತ್ತು ತೋರುವವರೇ ಹೆಚ್ಚು. ಅದರಲ್ಲೂ ಪೌರ ಕಾರ್ಮಿಕರು ಅಂದ್ರೆ ತೀರಾ ನಿಕೃಷ್ಟವಾಗಿ ನೋಡ್ತಾರೆ. ಅವರು ಮನೆ ಹತ್ತಿರ ಬಂದ್ರೆ, ದರಿದ್ರ ಲಕ್ಷ್ಮಿ ಮನೆಗೆ ಬಂದು ಬಿಡ್ತಾಳೆ ಅನ್ನುವ ಮನೋಭಾವವುಳ್ಳ ಜನರೇ ಅಧಿಕ.
ಇದಕ್ಕೆ ಅಪವಾದ ಎಂಬಂತೆ ನಗರದ ಮಹಿಳೆಯೊಬ್ಬರು ತಮ್ಮ ನೆರೆಹೊರೆಯ ಜನರು, ಪೌರ ಕಾರ್ಮಿಕರು ಹಾಗೂ ಪ್ರಾಣಿಗಳಿಗೆ ಅನೇಕ ವರ್ಷಗಳಿಂದ ಸದ್ದಿಲ್ಲದೆ ನೆರವು ನೀಡುತ್ತಾ ಬಂದಿದ್ದು, ಆನ್‌ಲೈನ್‌ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಜಗದೀಶ್ ನಡನಳ್ಳಿ ಹಂಚಿಕೊಂಡ ಈ ಹೃದಯಸ್ಪರ್ಶಿ ವೀಡಿಯೊದಲ್ಲಿ, ಮಹಿಳೆಯೊಬ್ಬರು ತಮ್ಮ ದಿನಚರಿಯ ಭಾಗವಾಗಿ ಟೀ ಮತ್ತು ಬಿಸ್ಕತ್ತುಗಳನ್ನು ಪೌರ ಕಾರ್ಮಿಕನಿಗೆ ನೀಡುತ್ತಿರುವುದನ್ನು ಸೆರೆಯಾಗಿದೆ. ಸಮವಸ್ತ್ರದೊಂದಿಗೆ ಮಹಿಳೆ ಬಳಿಗೆ ಬರುವ ಪೌರ ಕಾರ್ಮಿಕ, ಅವರೊಂದಿಗೆ ಮಾತನಾಡುತ್ತಾ ಟೀ ಹಾಗೂ ಬಿಸ್ಕತ್ ಪಡೆದು ಖುಷಿಯಿಂದ ಹೋಗುವ ವಿಡಿಯೋ ಇದಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ತೋರಿಕೆ, ಪ್ರಚಾರಕ್ಕಾಗಿ ಕೆಲವರು ಬಡ, ವೃದ್ಧ ನಾಗರಿಕರು, ಆಟೋ ಚಾಲಕರು ಮತ್ತು ರಸ್ತೆಬದಿಯ ಮಾರಾಟಗಾರರಿಗೆ ಸಹಾಯ ಮಾಡುವ ವೀಡಿಯೊಗಳನ್ನು ಹಾಕಿರುತ್ತಾರೆ. ಆದರೆ, ಯಾವುದೇ ಪ್ರಚಾರ ಅಥವಾ ಹಣ ಸಂಪಾದಿಸುವ ಉದ್ದೇಶವಿಲ್ಲದೆ, ಕೇವಲ ತನ್ನ ಆತ್ಮ ತೃಪ್ತಿಗಾಗಿ ಬೀದಿಬದಿಯಲ್ಲಿರುವ ಜನರಿಗೆ ಹಲವು ವರ್ಷಗಳಿಂದ ಸಹಾಯ ಮಾಡುತ್ತಿರುವ ಮಹಿಳೆ ಬಗ್ಗೆ ಬರೆಯಲು ಬಯಸುತ್ತೇನೆ ಎಂದು ಜಗದೀಶ್ ಇನ್ಸಾಟಾದಲ್ಲಿ ಬರೆದುಕೊಂಡಿದ್ದಾರೆ. ಆ ಮಹಿಳೆಯ ಔದಾರ್ಯ ಚಹಾ ನೀಡುವುದಕ್ಕಿಂತ ಹೆಚ್ಚಿನದು ಎಂದು ಜಗದೀಶ್ ಹೇಳಿದ್ದಾರೆ.
ಆ ಪ್ರದೇಶಕ್ಕೆ ಭೇಟಿ ನೀಡುವ ಪೌರ ಕಾರ್ಮಿಕರಿಗೆ ಮಹಿಳೆ ನಿಯಮಿತವಾಗಿ ಕಾಫಿ, ಬ್ರೆಡ್, ಬಿಸ್ಕತ್ತು ಮತ್ತು ಬಾಳೆಹಣ್ಣುಗಳನ್ನು ನೀಡುತ್ತಾ ಬಂದಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ತಿಂಡಿಗಳು ಮತ್ತು ಉಪಯುಕ್ತ ವಸ್ತುಗಳನ್ನು ಸಹ ನೀಡುತ್ತಿದ್ದರು.
ಬೀದಿ ನಾಯಿಗಳು ಮತ್ತು ಬೆಕ್ಕುಗಳಿಗಾಗಿ ಅವರು ತಮ್ಮ ಮನೆಯ ಹೊರಗೆ ಹಾಲು, ಅಕ್ಕಿ ಮತ್ತು ಆಹಾರದ ಬಟ್ಟಲುಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕಾಗಿಯೇ ನಾಯಿಗಳು ಅವರ ಮನೆ ಬಳಿ ಕಾಯುತ್ತಿರುತ್ತವೆ. ಟೆರೇಸ್ ಮೇಲೆ ಪಕ್ಷಿಗಳಿಗೆ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ನೀರನ್ನು ಸಹ ಇಟ್ಟಿದ್ದಾರೆ ಎಂದು ಜಗದೀಶ್ ಬರೆದುಕೊಂಡಿದ್ದಾರೆ.
ಪ್ರತಿದಿನ ಇತರರಿಗೆ ಸಹಾಯ ಮಾಡುವ ಇಂತಹ ಮಹಿಳೆಯನ್ನು ನೋಡಿಲ್ಲ. ಪ್ರಚಾರವನ್ನು ನಿರೀಕ್ಷಿಸದೆ ಸದ್ದಿಲ್ಲದೇ ಈ ಕಾರ್ಯವನ್ನು ಮಾಡುವ ಮಹಿಳೆ ಮಹಾನ್ ತಾಯಿಯಂತೆ ಭಾಸವಾಗುತ್ತಾರೆ ಎಂದು ಜಗದೀಶ್ ಹೇಳಿದ್ದಾರೆ. ಈ ವೀಡಿಯೊಗೆ ನೆಟ್ಟಿಗರು ಫಿದಾ ಆಗಿದ್ದು, ಮಹಿಳೆಯ ಔದಾರ್ಯ ಹಾಗೂ ಈ ವಿಷಯವನ್ನು ಹಂಚಿಕೊಂಡ ಜಗದೀಶ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ತುಂಬಾ ಸುಂದರವಾಗಿ ಬರೆಯಲ್ಪಟ್ಟಿದೆ. ನಿಮ್ಮ ದಯೆಯ ಮಾತುಗಳು ಮತ್ತು ಚಿಂತನಶೀಲ ಅವಲೋಕನದಿಂದ ಪುಳಕಿತನಾಗಿದ್ದೇನೆ ಎಂದು ಬಳಕೆದಾರನೊಬ್ಬ ಬರೆದಿದ್ದಾರೆ. ಆಕೆಯ ಜೀವನದಲ್ಲಿ ಎಲ್ಲಾವೂ ಒಳ್ಳೇಯದಾಗಲಿ ಎಂದು ಬಯಸುತ್ತೇನೆ" ಎಂದು ಮತ್ತೋರ್ವ ಬರೆದುಕೊಂಡಿದ್ದಾರೆ.