ವಿಜಯಪುರ: ಕಾಂಗ್ರೆಸ್ ನ ಸಂಸತ್ ಸದಸ್ಯ ಟೀಶರ್ಟ್ ಹಾಕಿಕೊಂಡು ಸಂಸತ್ತಿಗೆ ಕಲಾಪಕ್ಕೆ ಬರುತ್ತಾರೆ, ಅವರಿಗೆ ನೀವು ಏನೂ ಹೇಳುವುದಿಲ್ಲ, ಟೀಕಿಸುವುದಿಲ್ಲ, ಆದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಟಲಿಗೆ ಹೋಗಿ ಅಲ್ಲಿನ ಪ್ರಧಾನ ಮಂತ್ರಿಗೆ ಚಾಕಲೇಟ್ ಗಿಫ್ಟ್ ನೀಡಿದರೆ ಟೀಕಿಸುತ್ತೀರಿ, ಇಂತಹ ಮನಸ್ಠಿತಿಗೆ ಏನು ಹೇಳಬೇಕು ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.
ವಿಜಯಪುರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿಗೆ ಟೀಶರ್ಟ್ ಹಾಕಿಕೊಂಡು ಹೋಗಬೇಡಿ ಎಂದು ಹೇಳಲು ಕಾಂಗ್ರೆಸ್ ನವರಿಗೆ ಧೈರ್ಯ ಇಲ್ಲ, ಮೋದಿಯವರ ಬಗ್ಗೆ ಏಕೆ ಪ್ರಶ್ನಿಸುತ್ತೀರಿ, ಮೋದಿಯವರಿಗೆ ತೊಂದರೆ ಕೊಡಬೇಕು ಎಂದು ಬಯಸಿದರೆ ಈ ಜನ್ಮದಲ್ಲಿ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.
ಅಂದು ಮೋದಿಯವರು ಜಗತ್ತಿನಲ್ಲಿ ಬಲಿಷ್ಠ ನಾಯಕನಾಗಿ ಬೆಳೆದಿದ್ದಾರೆ. ಅವರ ಪ್ರಸಿದ್ಧಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಧಾನಿಯವರು ಚಾಕಲೇಟ್ ಕೊಟ್ಟದ್ದರಲ್ಲಿ ಏನು ತಪ್ಪು, ನಮ್ಮ ಮಕ್ಕಳಿಗೆ ನಾವು ತಿನ್ನಲು, ಖುಷಿಪಡಿಸಲು ಚಾಕಲೇಟ್ ಕೊಡುತ್ತೇವೆ. ಒಂದು ದೇಶಕ್ಕೆ ಹೋದಾಗ ನಮ್ಮ ಪ್ರವೃತ್ತಿಯಂತೆ ಅಲ್ಲಿನ ಪ್ರಧಾನಿಗೆ ಚಾಕಲೇಟ್ ಕೊಟ್ಟಿದ್ದಾರೆ, ಅದರಲ್ಲಿ ಏನೂ ತಪ್ಪಿಲ್ಲ ಎಂದರು.