ಬೆಳಗಾವಿ: ಇಡೀ ಕರ್ನಾಟಕ ಸಡಗರದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೆ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ನಿಷೇಧ ಹಾಗೂ ಅನುಮತಿ ನಿರಾಕರಣೆಯ ನಡುವೆಯೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಾರ್ಯಕರ್ತರು ನವೆಂಬರ್ 1 ರಂದು ಕರಾಳ ದಿನ ಆಚರಿಸಿ ಪುಂಡಾಟಿಕೆ ನಡೆಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತ
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಂಇಎಸ್‌ನ ಕರಾಳ ದಿನಾಚರಣೆ ಮತ್ತು ರ‍್ಯಾಲಿಗೆ ಅಧಿಕೃತವಾಗಿ ಅನುಮತಿ ನಿರಾಕರಿಸಿತ್ತು. ಅಷ್ಟೇ ಅಲ್ಲದೆ, ಗಡಿಯಲ್ಲಿ ಉದ್ವೇಗ ಸೃಷ್ಟಿಯಾಗದಂತೆ ತಡೆಯಲು ನೆರೆಯ ಮಹಾರಾಷ್ಟ್ರದ ಶಿವಸೇನಾ ಹಾಗೂ ಎಂಇಎಸ್‌ನ ಪ್ರಮುಖ ನಾಯಕರು ಜಿಲ್ಲೆ ಪ್ರವೇಶಿಸದಂತೆ ನಿಷೇಧಾಜ್ಞೆ ಹೇರಲಾಗಿತ್ತು.
ಪೊಲೀಸರ ಮುಂದೆಯೇ ರ‍್ಯಾಲಿ, ಘೋಷಣೆ
ಈ ಎಲ್ಲಾ ಕಟ್ಟುನಿಟ್ಟಿನ ಆದೇಶಗಳನ್ನು ಮೀರಿ, ಎಂಇಎಸ್ ಕಾರ್ಯಕರ್ತರು ಬೆಳಗಾವಿಯ ಸಂಭಾಜಿ ಉದ್ಯಾನದ ಬಳಿ ಕಪ್ಪು ಬಟ್ಟೆ ಧರಿಸಿ ಒಟ್ಟುಗೂಡಿದರು. ಅಲ್ಲಿಂದ ಮರಾಠಾ ಮಂದಿರದವರೆಗೆ ಕರಾಳ ದಿನದ ಮೆರವಣಿಗೆ ನಡೆಸಿದ ಪುಂಡರು, ಪೊಲೀಸರ ಸಮ್ಮುಖದಲ್ಲೇ "ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು" ಎಂದು ನಾಡವಿರೋಧಿ ಘೋಷಣೆಗಳನ್ನು ಕೂಗಿದರು. ಏತನ್ಮಧ್ಯೆ, ಎಂಇಎಸ್ ಕಾರ್ಯಕರ್ತರ ಈ ಕೃತ್ಯವನ್ನು ಖಂಡಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಅವರ ರ‍್ಯಾಲಿಗೆ ನುಗ್ಗಲು ಯತ್ನಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಮುಂಜಾಗ್ರತಾ ಕ್ರಮವಾಗಿ ಗಡಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.