ಬೆಳಗಾವಿ: ಪೇದೆಯೊಬ್ಬರು ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಹಾರೋಗೇರಿ ಗ್ರಾಮದ ರಕ್ಷಿತಾ ಸರಿಕರ್(23) ಎಂದು ಗುರುತಿಸಲಾಗಿದ್ದು, ಪ್ರಿಯಕರ, ಕೇಂದ್ರ ಸಶಸ್ತ್ರ ಸೀಮಾ ಬಲದ ಪೇದೆ ಬಸಪ್ಪ ಸಾತನ್ನವಣ್ಣರ್ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
ರಕ್ಷಿತಾ ಮತ್ತು ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಕ್ಟೋಬರ್ 28ರಂದು ರಕ್ಷಿತಾಳನ್ನು ಸುತ್ತಾಡಲು ಅಂತ ಕರೆದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ, ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಕೊಲೆ ಬಳಿಕ ಪೇದೆ ಬಸಪ್ಪ ವಾಪಸ್ ಊರಿಗೆ ಬಂದಿದ್ದಾನೆ. ರಕ್ಷಿತಾ ಸಹೋದರನ ಜೊತೆ ಸೇರಿ ಹುಡುಕಾಟಕ್ಕೂ ಯತ್ನಿಸಿದ್ದಾನೆ. ಬಳಿಕ ರಕ್ಷಿತಾ ಸಹೋದರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾನೆ.
ಪ್ರಕರಣ ಸಂಬಂಧ ಹಾರೋಗೇರಿ ಪೊಲೀಸರು ಬಸಪ್ಪನ್ನು ಕರೆದು ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಮಾಡಿರೋದಾಗಿ ಬಸಪ್ಪ ಒಪ್ಪಿಕೊಂಡಿದ್ದಾನೆ. ಘಟನೆ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.