ಬೆಂಗಳೂರು: ಮನೆಗೆ ಗ್ಯಾಸ್ ಸಿಲಿಂಡರ್ ಪೂರೈಸಲು ಬಂದಿದ್ದ ಡೆಲಿವರಿ ಬಾಯ್, ಸಿಲಿಂಡರ್ ಅನ್ನು ಹೊತ್ತು ತಂದು ಕೆಳಗಿಡುತ್ತಿದ್ದಂತೆಯೇ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಈ ದುರ್ಘಟನೆಯಲ್ಲಿ ಡೆಲಿವರಿ ಬಾಯ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಧಾನಿಯ ಮಲ್ಲೇಶ್ವರಂ ಪೊಲೀಸ್ ಠಾಣೆ (Malleshwaram Police Station) ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮನೆಗೆ ಬಂದಿದ್ದ ಗ್ಯಾಸ್ ಸಿಲಿಂಡರ್ ಅನ್ನು ಇಳಿಸಿ ಮನೆಯ ಬಾಗಿಲ ಬಳಿ ಇಡುವಾಗ ಈ ಅವಘಡ ಸಂಭವಿಸಿದೆ.
ಈ ಘಟನೆಯ ವಿಡಿಯೋ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೊಸ್ತಿಲ ಬಳಿ ಇದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ, ಸ್ಫೋಟ
ವೈರಲ್ ಆಗಿರುಲಮನೆಯ ಮಹಿಳೆಯೊಬ್ಬರು ಆಗತಾನೇ ಮನೆಯ ಮುಂಭಾಗದ ಹೊಸ್ತಿಲನ್ನು ತೊಳೆದು, ಪೂಜೆ ಮಾಡಿ ಹಣತೆ ದೀಪವನ್ನು ಹಚ್ಚಿಟ್ಟಿದ್ದರು. ಅದೇ ಸಮಯಕ್ಕೆ ಸರಿಯಾಗಿ ಆ ಮನೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಲು ಡೆಲಿವರಿ ಬಾಯ್ ಆಗಮಿಸಿದ್ದರು.
ಮನೆಯ ಹೊಸ್ತಿಲ ಮುಂದೆ ಉರಿಯುತ್ತಿದ್ದ ದೀಪವನ್ನು ಗಮನಿಸದ ಡೆಲಿವರಿ ಬಾಯ್, ತಾವು ಹೆಗಲ ಮೇಲೆ ಹೊತ್ತು ತಂದಿದ್ದ ಸಿಲಿಂಡರ್ ಅನ್ನು ತಂದು ಬಾಗಿಲ ಬಳಿ ಇಟ್ಟಿದ್ದಾರೆ. ಬಳಿಕ ಸಿಲಿಂಡರ್ ಗೆ ಅಳವಡಿಸಿದ್ದ ಸೀಲ್ ತೆಗೆಯುತ್ತಲೇ ಗ್ಯಾಸ್ ಸೋರಿಕೆಯಾಗಿದೆ.
ಇದೇ ಸಂದರ್ಭದಲ್ಲೇ ಸಿಲಿಂಡರ್ ಕೆಳಗಿಡುತ್ತಿದ್ದಂತೆಯೇ ಲೀಕ್ ಆಗಿದ್ದ ಅನಿಲವು ಹೊಸ್ತಿಲ ಮೇಲಿದ್ದ ದೀಪದ ಬೆಂಕಿಯ ಸ್ಪರ್ಶಕ್ಕೆ ಸಿಲುಕಿ, ಏಕಾಏಕಿ ಭಾರಿ ಪ್ರಮಾಣದ ಬೆಂಕಿ ಭುಗಿಲೆದ್ದು ಸ್ಫೋಟಗೊಂಡಿದೆ.
ಡೆಲಿವರಿ ಬಾಯ್ ಬಚಾವ್, ಸ್ಥಳಕ್ಕೆ ಪೊಲೀಸರ ಭೇಟಿ
ಸಿಲಿಂಡರ್‌ನಿಂದ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿ ಉರಿದಾಗ ತಕ್ಷಣವೇ ಜಾಗರೂಕರಾದ ಡೆಲಿವರಿ ಬಾಯ್ ಹಿಂದಕ್ಕೆ ಸರಿದಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಅವರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಬೆಂಕಿ ನಂದಿಸಲು ನೀರು ಹಾಕಿ ಯತ್ನಿ,ಸಿದರಾದರೂ ಅದು ಸಾಧ್ಯವಾಗಿಲ್ಲ.
ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಲ್ಲೇಶ್ವರಂ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ (Fire Brigade) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಗಾಯಗಳಾಗಲಿ ಅಥವಾ ಪ್ರಾಣಾಪಾಯವಾಗಲಿ ಸಂಭವಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪೂಜೆ ಅಥವಾ ದೀಪಾರಾಧನೆ ಮಾಡುವ ಸಂದರ್ಭಗಳಲ್ಲಿ ಗ್ಯಾಸ್ ಸಿಲಿಂಡರ್ ತರುವಾಗ ಸಾರ್ವಜನಿಕರು ಹಾಗೂ ಡೆಲಿವರಿ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.