ಬೆಂಗಳೂರು: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇವಸ್ಥಾನದ ಧ್ವಜವು ಗಾಳಿಯ ದಿಕ್ಕಿಗೆ ವಿರುದ್ಧವಾಗಿ ಹಾರುತ್ತದೆ ಎಂಬ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಶತಮಾನಗಳಿಂದ ಭಕ್ತರಲ್ಲಿ ಕುತೂಹಲ ಮೂಡಿಸಿರುವ ಈ ವಿದ್ಯಮಾನದ ಕುರಿತು ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಾಗೂ ಆರ್‌ಜೆ ಪೃಥ್ವಿ ನೀಡಿರುವ ಹೇಳಿಕೆ ಇದೀಗ ಗಮನ ಸೆಳೆದಿದೆ.
ಜಗನ್ನಾಥ ದೇವಸ್ಥಾನದ ಗೋಪುರದ ಮೇಲಿರುವ ಧ್ವಜವು ಸಾಮಾನ್ಯವಾಗಿ ಗಾಳಿ ಬೀಸುವ ದಿಕ್ಕಿಗೆ ವಿರುದ್ಧವಾಗಿ ಹಾರುತ್ತದೆ ಎಂಬ ನಂಬಿಕೆ ಇದೆ. ಇದನ್ನು ಅನೇಕ ಭಕ್ತರು ದೈವಿಕ ಶಕ್ತಿ ಅಥವಾ ಪವಾಡ ಎಂದು ಪರಿಗಣಿಸುತ್ತಾರೆ. ಆದರೆ ಈ ವಿಚಾರದಲ್ಲಿ ಯಾವುದೇ ಪವಾಡವಿಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ ಎಂದು ಆರ್.ಜೆ. ಪೃಥ್ವಿ ಅಭಿಪ್ರಾಯಪಟ್ಟಿದ್ದಾರೆ.
ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತಿರುವಂತೆ ಕಾಣುವುದಕ್ಕೆ ವಾತಾವರಣದ ಚಲನೆ, ಗಾಳಿಯ ವೇಗ ಮತ್ತು ಗೋಪುರದ ಎತ್ತರದಲ್ಲಿ ಉಂಟಾಗುವ ಗಾಳಿಯ ಹರಿವಿನ ಬದಲಾವಣೆ ಕಾರಣವಾಗಿರಬಹುದು ಎಂಬುದು ವೈಜ್ಞಾನಿಕವಾಗಿ ನೀಡಬಹುದಾದ ವಿವರಣೆ.
ಎತ್ತರದ ಕಟ್ಟಡಗಳು ಅಥವಾ ಗೋಪುರಗಳ ಸುತ್ತ ಗಾಳಿಯ ಹರಿವು ಬದಲಾಗುವ ಸಾಧ್ಯತೆ ಇರುತ್ತದೆ. ಇದರಿಂದ ಧ್ವಜದ ಚಲನೆ ನೆಲಮಟ್ಟದಲ್ಲಿ ಕಾಣುವ ಗಾಳಿಯ ದಿಕ್ಕಿಗಿಂತ ಭಿನ್ನವಾಗಿ ಕಾಣಿಸಬಹುದು.
ಆರ್ ಜೆ ಪೃಥ್ವಿ ಹೇಳಿದ್ದೇನು?
ಪುರಿ ಜಗನ್ನಾಥ್ ದೇಗುಲದಲ್ಲಿ ಗಾಳಿಯ ವಿರುದ್ಧ ಧಿಕ್ಕಿನಲ್ಲಿ ಧ್ವಜ ಹಾರಾಡುವುದರದಲ್ಲಿ ಯಾವುದೇ ರೀತಿಯ ಪವಾಡವಿಲ್ಲ. ಬದಲಾಗಿ ಅದು ಸಂಪೂರ್ಣ ವಿಜ್ಞಾನವಾಗಿದ್ದು, ಗಾಳಿ ದೇಗುಲದ ಗೋಪುರಕ್ಕೆ ಬಡಿದು ದಿಕ್ಕು ಬದಲಿಸುತ್ತದೆ.
ಈ ವೇಳೆ ಧ್ವಜ ಕೂಡ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ ಎಂದು ಹೇಳಿದ್ದಾರೆ. ಮಾತ್ರವಲ್ಲದೇ ಈ ಕುರಿತ ಪ್ರಾತ್ಯಕ್ಷಿಕ ಕೂಡ ನೀಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ನೆಟ್ಟಿಗರ ತರಾಟೆ
ಇನ್ನು ಆರ್ ಜೆ ಪೃಥ್ವಿ ಹೇಳಿಕೆಗೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಗಾಳಿ ಗೋಪುರದ ಕೆಳಗಲ್ಲ.. ಗೋಪುರದ ಮೇಲೂ ಹಾರುತ್ತದೆ. ಆದರೂ ಏಕೆ ಧ್ವಜ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸನಾತನ ಧರ್ಮವನ್ನು ಪ್ರಶ್ನೆ ಮಾಡುವ ಮೊದಲು ನಿಮ್ಮನ್ನು ನೀವು ಪ್ರಶ್ನೆ ಮಾಡಿಕೊಳ್ಳಿ ಎಂದು ಕೆಲ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಜಗನ್ನಾಥ ದೇಗುಲದ ಈ ನಿಗೂಢತೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ದೃಷ್ಟಿಕೋನದ ನಡುವಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದೇವಸ್ಥಾನದ ವಿಶಿಷ್ಟ ಸಂಪ್ರದಾಯಗಳು, ಧ್ವಜಾರೋಹಣ ಪದ್ಧತಿ ಹಾಗೂ ಅಲ್ಲಿನ ಆಚರಣೆಗಳು ಭಕ್ತರಲ್ಲಿ ಇಂದಿಗೂ ವಿಶೇಷ ಆಸಕ್ತಿ ಮೂಡಿಸುತ್ತಿವೆ.
ಆದರೆ ಧ್ವಜವು ನಿಜವಾಗಿಯೂ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆಯೇ ಎಂಬುದನ್ನು ಖಚಿತಪಡಿಸಲು ಸ್ಥಳೀಯ ಗಾಳಿಯ ದಿಕ್ಕು ಮತ್ತು ವೇಗದ ಅಳತೆ ಸೇರಿದಂತೆ ವೈಜ್ಞಾನಿಕ ಅಧ್ಯಯನ ಅಗತ್ಯವಾಗಿದೆ. ಸದ್ಯ ಆರ್.ಜೆ. ಪೃಥ್ವಿ ಅವರ ಹೇಳಿಕೆ ಈ ಕುರಿತ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ.