ಬೆಂಗಳೂರು: ರಾಜ್ಯ ಸರ್ಕಾರ ನಂದಿನಿ ಹಾಲು, ಮೊಸರು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರವನ್ನು ಕೂಡ ಇಂದು ಹೆಚ್ಚಿಸಿದೆ.
ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿಯಲ್ಲಿ ಗರಿಷ್ಠ 9 ರೂಪಾಯಿ ಹಾಗೂ ಬಿಎಂಟಿಸಿ ನಗರ ಬಸ್‌ಗಳಲ್ಲಿ ಗರಿಷ್ಠ 10 ರೂಪಾಯಿಗಳವರೆಗೆ ದರ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಇಂದು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ.
ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕನಿಷ್ಠ ಪ್ರಯಾಣ ದರ 6ರಿಂದ 10 ರೂಪಾಯಿಗೆ ಹೆಚ್ಚಳವಾಗಲಿದೆ. ಗರಿಷ್ಠ ದರ 35ರೂಪಾಯಿಗಳಿಂದ 45 ರೂಪಾಯಿಗೆ ಏರಿಕೆಯಾಗಲಿದೆ.
ಎಸಿ ವಜ್ರ ಬಸ್‌ಗಳ ಗರಿಷ್ಠ ಪ್ರಯಾಣ ದರ 75 ರೂಪಾಯಿಗಳಿಂದ 90 ರೂಪಾಯಿಗೆ ಹೆಚ್ಚಳವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳ ಗರಿಷ್ಠ ದರ 405ರೂಪಾಯಿಗಳಿಂದ 425 ರೂಪಾಯಿಗೆ ಏರಿಕೆಯಾಗಲಿದೆ.
" ಡೀಸೆಲ್ ದರ ಹೆಚ್ಚಳವಾಗಿದೆ, ನಮ್ಮ ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳು ನಷ್ಟದಲ್ಲಿವೆ. ನೆರೆಯ ತಮಿಳು ನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳೂ ನಮಗಿಂತ ಹೆಚ್ಚು ಬಸ್ ಪ್ರಯಾಣ ದರ ಹೆಚ್ಚಿಸಿವೆ. ಅಲ್ಲಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಸ್ ಪ್ರಯಾಣ ದರ ಕಡಿಮೆಯಾಗಿದೆ ಎಂದು ಡೀಸೆಲ್ ಬೆಲೆ ಏರಿಕೆಯನ್ನು ದರ ಪರಿಷ್ಕರಣೆಗೆ ಕಾರಣವಾಗಿ ಉಲ್ಲೇಖಿಸಿ ಸಚಿವ ಭೈರತಿ ಸುರೇಶ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳ ಪ್ರಯಾಣ ದರ ಹೆಚ್ಚಳವನ್ನು ಗರಿಷ್ಠ 9ಕ್ಕೆ ಸೀಮಿತಗೊಳಿಸಲಾಗಿದೆ. ರಾಜಹಂಸ ಮತ್ತು ಎಸಿ ಬಸ್‌ಗಳಂತಹ ಐಷಾರಾಮಿ ಸೇವೆಗಳ ದರ ನಿಗದಿಪಡಿಸುವಾಗ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ದರಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಸಾಮಾನ್ಯ ಸಾರಿಗೆ ಸೇವೆಗಳಲ್ಲಿ ಗರಿಷ್ಠ 9 ರೂಪಾಯಿಗಳಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅವಕಾಶವಿದ್ದು, ಹಂತ ಹಂತವಾಗಿ ದರ ಏರಿಕೆ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ದರ 81ರಿಂದ 100ಕ್ಕೆ ಏರಿಕೆ ಅಂದರೆ ಶೇ. 19ರಷ್ಟು ದರ ಹೆಚ್ಚಳವಾಗಲಿದೆ. ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ 4 ರೂಪಾಯಿಗಳಷ್ಟು ಹೆಚ್ಚಳವಾಗಲಿದೆ.
ರಾಜ್ಯ ಸರ್ಕಾರದ 'ಶಕ್ತಿ' ಯೋಜನೆಯಡಿ ಮಹಿಳೆಯರು ರಾಜ್ಯದೊಳಗೆ ಸರ್ಕಾರಿ ಸಾರಿಗೆ ನಿಗಮಗಳ ಐಷಾರಾಮಿಯಲ್ಲದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಈಗಾಗಲೇ ಜಾರಿಯಲ್ಲಿದೆ. ಉಚಿತ ಬಸ್ ಪ್ರಯಾಣದಿಂದ ನಿಗಮಗಳಿಗೆ ನಷ್ಟವಾಗುತ್ತಿಲ್ಲ, ಮಹಿಳೆಯರ ಟಿಕೆಟ್ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಡೀಸೆಲ್ ದರ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾದಾಗ ಮಾತ್ರ ಟಿಕೆಟ್ ದರ ಏರಿಸಲು ನಿಗಮಗಳಿಗೆ ಅವಕಾಶ ನೀಡಲಾಗಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು.