ಬೆಂಗಳೂರು: ಕರ್ನಾಟಕ ಸರ್ಕಾರವು ಸಾರಿಗೆ ಸಂಸ್ಥೆಗಳ ಆರ್ಥಿಕ ನಷ್ಟ ಸರಿದೂಗಿಸಲು BMTC ಮತ್ತು KSRTC ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿದ್ದು, ದೈನಂದಿನ ಪ್ರಯಾಣಿಕರಿಗೆ ದೊಡ್ಡ ಆರ್ಥಿಕ ಹೊಡೆತ ಬಿದ್ದಿದೆ. ಇದರ ನಡುವೆಯೇ, ಬಿಎಂಟಿಸಿಯ ದೈನಂದಿನ ಹಾಗೂ ಮಾಸಿಕ ಪಾಸ್ ದರಗಳನ್ನು ಶೇ. 20 ರಿಂದ 25 ರಷ್ಟು ಸರ್ಕಾರ ಹೆಚ್ಚಿಸಿತ್ತು. ಈ ಬೆನ್ನಲ್ಲೇ, ಕೆಎಸ್ಆರ್ಟಿಸಿ ಮಾಸಿಕ ಪಾಸ್ ದರಗಳನ್ನು ಕೂಡ ಸರಾಸರಿ ಶೇಕಡಾ 23 ರಷ್ಟು ಭಾರಿ ಏರಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ವೇಗದೂತ ಮತ್ತು ತಡೆರಹಿತ ಬಸ್ಗಳ ಪಾಸ್:
ದೂರದ ಊರುಗಳಿಗೆ ವೇಗದೂತ ಬಸ್ಗಳ ಮೂಲಕ ಪ್ರತಿದಿನ ಪ್ರಯಾಣಿಸುವವರಿಗಾಗಿ ಗರಿಷ್ಠ 20 ಹಂತಗಳವರೆಗೆ ಮಾಸಿಕ ಪಾಸ್ ನೀಡಲಾಗುತ್ತದೆ:
ಸಾಮಾನ್ಯ ಪ್ರಯಾಣಿಕರ ಕನಿಷ್ಠ ಪಾಸ್ ದರ (1ನೇ ಹಂತ): ₹520 ಇದ್ದದ್ದು ಈಗ ₹640 ಕ್ಕೆ ಏರಿಕೆಯಾಗಿದೆ.
ಹಿರಿಯ ನಾಗರಿಕರ ಕನಿಷ್ಠ ಪಾಸ್ ದರ (1ನೇ ಹಂತ): ₹465 ಇದ್ದದ್ದು ಈಗ ₹570 ಕ್ಕೆ ಹೆಚ್ಚಳವಾಗಿದೆ.
ಸಾಮಾನ್ಯ ಪ್ರಯಾಣಿಕರ ಗರಿಷ್ಠ ಪಾಸ್ ದರ (20ನೇ ಹಂತ): ₹3,220 ಇದ್ದದ್ದು ಈಗ ₹3,960 ಕ್ಕೆ ತಲುಪಿದೆ.
ಹಿರಿಯ ನಾಗರಿಕ ಗರಿಷ್ಠ ಪಾಸ್ ದರ (20ನೇ ಹಂತ): ₹2,900 ಇದ್ದದ್ದು ಈಗ ₹3,570 ಕ್ಕೆ ಏರಿದೆ.
ಸಾಮಾನ್ಯ (ಸಾಮಾನ್ಯ/ಗ್ರಾಮಾಂತರ) ಬಸ್ಗಳ ಪಾಸ್:
ಗ್ರಾಮೀಣ ಭಾಗದ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಒಟ್ಟು 10 ಹಂತಗಳವರೆಗೆ ಮಾಸಿಕ ಪಾಸ್ ಸೌಲಭ್ಯವಿದ್ದು, ಪರಿಷ್ಕೃತ ದರ ಹೀಗಿದೆ:
ಸಾಮಾನ್ಯ ಪ್ರಯಾಣಿಕರ ಕನಿಷ್ಠ ಪಾಸ್ ದರ: ₹460 ಇದ್ದದ್ದು ಈಗ ₹570 ಕ್ಕೆ ಏರಿಕೆಯಾಗಿದೆ.
ಹಿರಿಯ ನಾಗರಿಕರ ಕನಿಷ್ಠ ಪಾಸ್ ದರ: ₹415 ಇದ್ದದ್ದು ಈಗ ₹510 ಕ್ಕೆ ಹೆಚ್ಚಳವಾಗಿದೆ.
ಸಾಮಾನ್ಯ ಪ್ರಯಾಣಿಕರ ಗರಿಷ್ಠ ಪಾಸ್ ದರ: ₹2,070 ಇದ್ದದ್ದು ಈಗ ₹2,550 ಕ್ಕೆ ತಲುಪಿದೆ.
ಹಿರಿಯ ನಾಗರಿಕರ ಗರಿಷ್ಠ ಪಾಸ್ ದರ: ₹1,865 ಇದ್ದದ್ದು ಈಗ ₹2,290 ಕ್ಕೆ ಏರಿದೆ.
ಏತನ್ಮಧ್ಯೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕೂಡ ತನ್ನ ಪಾಸ್ ದರಗಳನ್ನು ಶೇ. 20 ರಿಂದ 25 ರಷ್ಟು ಹೆಚ್ಚಿಸಿದೆ. ಸಾಮಾನ್ಯ ದಿನದ ಪಾಸ್ ₹80 ರಿಂದ ₹100 ಕ್ಕೆ ಏರಿಕೆಯಾಗಿದ್ದರೆ, ಮಾಸಿಕ ಪಾಸ್ ₹1,200 ರಿಂದ ₹1,500 ಕ್ಕೆ ದುಬಾರಿಯಾಗಿದೆ.