ಬೆಂಗಳೂರು: ಬೆಂಗಳೂರು-ತಮಿಳುನಾಡಿನ ಗಡಿಭಾಗವಾದ ಹೊಸೂರಿನ ಸಿಪ್ಕಾಟ್ ಬಳಿ ಶುಕ್ರವಾರ ಕಾರ್ಖಾನೆಯ ಕಟ್ಟಡ ಕಾಮಗಾರಿ ವೇಳೆ ಘೋರ ದುರಂತ ಸಂಭವಿಸಿದ್ದು, ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಅವಘಡದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಕುಮರೇಶನ್(39), ಮೈಕೆಲ್(26) ಮತ್ತು ಶ್ರೀನಿವಾಸನ್(26) ಎಂದು ಗುರುತಿಸಲಾಗಿದೆ.
ಬಾಲಾಜಿ ಗೇರ್ಸ್ ಹೆಸರಿನ ಖಾಸಗಿ ಕಾರ್ಖಾನೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಕಾರ್ಮಿಕರು ಮೋಲ್ಡ್ಗೆ ಕಾಂಕ್ರೀಟ್ ಹಾಕುತ್ತಿದ್ದ ವೇಳೆ ಸೆಂಟ್ರಿಂಗ್ಗೆ ಹಾಕಿದ್ದ ಮರದ ದಿಮ್ಮಿಗಳು ಏಕಾಏಕಿ ಕುಸಿದಿವೆ. ಪರಿಣಾಮ ಕಟ್ಟಡದ ಅವಶೇಷಗಳಡಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ದಿನೇಶ್, ಎಸ್ಪಿ ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಮಗಾರಿ ವೇಳೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಅವಶೇಷಗಳ ಅಡಿ ಸಿಲುಕಿದ್ದ ಕಾರ್ಮಿಕರ ಮೃತದೇಹಗಳನ್ನು ಕ್ರೇನ್ ಬಳಸಿ ಹೊರಕ್ಕೆ ತೆಗೆಯಲಾಗಿದೆ.
ಕಾಂಕ್ರೀಟ್ನ ಭಾರವನ್ನು ತಡೆದುಕೊಳ್ಳಲು ಅಗತ್ಯವಾದ ಕಂಬಗಳು ಅಥವಾ ಸೂಕ್ತ ಯೋಜನೆ ಇರಲಿಲ್ಲ ಎಂದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಹೀಗಾಗಿ, ಕಟ್ಟಡದ ವಿನ್ಯಾಸ ರೂಪಿಸಿದ ಎಂಜಿನಿಯರ್ ಸೇರಿದಂತೆ ಕಾಮಗಾರಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊಸೂರು ಉಪ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.