ಮೊಸಳೆ (ಸಂಗ್ರಹ ಚಿತ್ರ) 
ರಾಜ್ಯ

ಪತಿಯೊಂದಿಗೆ ಜಗಳ: ನದಿಗೆ ಹಾರಿದ ಮಹಿಳೆ ಮೇಲೆ ಮೊಸಳೆ ದಾಳಿ, ಸಾವಿನ ದವಡೆಯಿಂದ ಪವಾಡಸದೃಶ ಪಾರು..!

ಸಾವು ನಿಶ್ಚಿತ ಎನ್ನುವ ಸಂದರ್ಭದಲ್ಲಿ, ಮೊಸಳೆ ಕಚ್ಚಿದ ತೀವ್ರ ನೋವು ಮತ್ತು ಪ್ರಾಣಭಯದಿಂದ ರೇಖಾ ಅವರು ನದಿಯಲ್ಲಿ ಜೋರಾಗಿ ಕಿರುಚಾಡುತ್ತಾ ರಕ್ಷಣೆಗಾಗಿ ಕೈಕಾಲು ಬಡಿಯಲಾರಂಭಿಸಿದ್ದಾರೆ.

ಮಂಗಳೂರು: ಪತಿಯೊಂದಿಗಿನ ಜಗಳದಿಂದ ಮನನೊಂದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಮೊಸಳೆ ದಾಳಿಯ ನಡುವೆಯೂ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಬುಧವಾರ ನಡೆದಿದೆ.

38 ವರ್ಷದ ರೇಖಾ ಮೊಸಳೆಯ ದಾಳಿಗೆ ಒಳಗಾದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಬುಧವಾರ ರಾತ್ರಿ ರೇಖಾ ಅವರು ತಮ್ಮ ಕುಟುಂಬದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಪತಿಯೊಂದಿಗೆ ತೀವ್ರ ಜಗಳ ನಡೆದಿದ್ದು, ಇದರಿಂದ ತೀವ್ರ ಮನನೊಂದ ರೇಖಾ ತಡರಾತ್ರಿ ಕುಮಾರಧಾರ ಸೇತುವೆಯ ಮೇಲಿಂದ ನದಿಗೆ ಜಿಗಿದಿದ್ದಾರೆ. ಆದರೆ, ಅವರು ನೀರಿಗೆ ಬೀಳುತ್ತಿದ್ದಂತೆ ಅಲ್ಲೇ ಇದ್ದ ಮೊಸಳೆಯೊಂದು ಅವರ ಮೇಲೆ ದಾಳಿ ನಡೆಸಿ, ಕಚ್ಚಿದೆ.

ಸಾವು ನಿಶ್ಚಿತ ಎನ್ನುವ ಸಂದರ್ಭದಲ್ಲಿ, ಮೊಸಳೆ ಕಚ್ಚಿದ ತೀವ್ರ ನೋವು ಮತ್ತು ಪ್ರಾಣಭಯದಿಂದ ರೇಖಾ ಅವರು ನದಿಯಲ್ಲಿ ಜೋರಾಗಿ ಕಿರುಚಾಡುತ್ತಾ ರಕ್ಷಣೆಗಾಗಿ ಕೈಕಾಲು ಬಡಿಯಲಾರಂಭಿಸಿದ್ದಾರೆ.

ಮಹಿಳೆಯ ತೀವ್ರ ಕಿರುಚಾಟವು ನದಿಯ ಸಮೀಪದಲ್ಲೇ ಇದ್ದ ಲಾಡ್ಜ್ ಸಿಬ್ಬಂದಿಯ ಕಿವಿಗೆ ಬಿದ್ದಿದೆ. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ತಡಮಾಡದೆ ನದಿತೀರಕ್ಕೆ ಧಾವಿಸಿದ್ದಾರೆ. ತಕ್ಷಣವೇ ಕಾರ್ಯಾಚರಣೆ ನಡೆಸಿ, ಮೊಸಳೆಯನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ರೇಖಾ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ. ಮೊಸಳೆ ದಾಳಿಯಿಂದ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಮಹಿಳೆಯ ಮೇಲೆ ದಾಳಿ ನಡೆಸಿದ್ದು ಚಿಕ್ಕ ಮೊಸಳೆಯಾಗಿರುವ ಸಾಧ್ಯತೆಯಿದೆ. ಹೀಗಾಗಿ ಅವರು ಬದುಕುಳಿಯಲು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.

ರಕ್ಷಣೆಯ ಬಳಿಕ ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಕುಟುಂಬದವರೊಂದಿಗೆ ಮನೆಗೆ ಕಳುಹಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಯುದ್ಧ ಮತ್ತಷ್ಟು ಭೀಕರಗೊಳಿಸುವ ಸುಳಿವು, ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ

Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ

ಬೆಂಗಳೂರು ಟರ್ಫ್ ಕ್ಲಬ್‌ಗೆ 4 ಎಕರೆ ಜಮೀನು ಗುತ್ತಿಗೆ; ₹20 ಸಾವಿರ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸಚಿವ ಸಂಪುಟ ಅಸ್ತು!