ಬೆಂಗಳೂರು: ರಾಜ್ಯದಲ್ಲಿನ ಬರ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ರಾಜ್ಯ ಸರ್ಕಾರ, ಇದುವರೆಗೂ ಪ್ರಧಾನಿಯನ್ನಾಗಲಿ, ಗೃಹ ಸಚಿವರನ್ನಾಗಲಿ ಅಥವಾ ಸಂಬಂಧಿತ ಸಚಿವರನ್ನು ಭೇಟಿಯಾಗದೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಕಾಟಾಚಾರಕ್ಕೆ ಹೇಳುತ್ತಿದೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಶುಕ್ರವಾರ ತರಾಟೆಗೆ ತೆಗೆದುಕೊಂಡರು.
ನಗರದ ಭಾರತ್ ಹೆವಿ ಎಲೆಕ್ಟ್ರಿಕ್ (BHEL) ಕಾರ್ಖಾನೆ ಆವರಣದಲ್ಲಿ 71ನೇ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಕುಮಾರಸ್ವಾಮಿ, ಕೇಂದ್ರದ ಬಳಿಗೆ ಸರ್ವ ಪಕ್ಷ ನಿಯೋಗ ಕೊಂಡೊಯ್ಯುವ ರಾಜ್ಯ ಸರ್ಕಾರದ ಆಲೋಚನೆಯನ್ನು ಕಟುವಾಗಿ ಟೀಕಿಸಿದರು. ಸರ್ಕಾರ ಕಳೆದ ಎರಡು ತಿಂಗಳಿಂದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೇವಲ ಪತ್ರಗಳನ್ನು ಬರೆಯುವುದರಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು.
3,000 ಕೋಟಿಯಿಂದ ಆರಂಭಿಸಿ ಈಗ 26,000 ಕೋಟಿ ಪರಿಹಾರ ಕೇಳುತ್ತಿದ್ದಾರೆ. ಆದರೆ ಕನಿಷ್ಠ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳಾಗಲಿ, ಕಂದಾಯ ಅಥವಾ ಕೃಷಿ ಸಚಿವರಾಗಲಿ ಒಮ್ಮೆಯಾದರೂ ನವದೆಹಲಿಗೆ ತೆರಳಿ ಪ್ರಧಾನಿ ಅಥವಾ ಗೃಹ ಸಚಿವರನ್ನು ಖುದ್ದಾಗಿ ಭೇಟಿ ಮಾಡಿಲ್ಲ. ಕೇಂದ್ರದ ಮನವೊಲಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡದೆ ಈಗ ಸರ್ವ ಪಕ್ಷ ನಿಯೋಗದ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ರೈತರು ಸಂಕಷ್ಟದಲ್ಲಿದ್ದರು. ಆದರೆ ಆಗ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ, ರಾಜ್ಯದ ಜನತೆಯ ತೆರಿಗೆ ಹಣದಲ್ಲಿ 25,000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ ಎಂಬುದನ್ನು ಕೇಂದ್ರ ಸಚಿವರು ರಾಜ್ಯ ಸರ್ಕಾರಕ್ಕೆ ನೆನಪು ಮಾಡಿಕೊಟ್ಟರು. ಅಂದು ನಾನು ಖುದ್ದಾಗಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ಋುಣಮಕ್ತ ಕಾಯ್ದೆಗೆ ಅಂಕಿತ ಪಡೆದು ತಂದಿದ್ದೆ ಹಾಗೂ ಈಗಿನ ಉಪ ಮುಖ್ಯಮಂತ್ರಿಗಳು ಅಂದಿನ ತಮ್ಮ ಸರ್ಕಾರದಲ್ಲೇ ಇದ್ದರು ಎಂಬುದನ್ನು ನೆನಪಿಸಿದರು.
ಹಳ್ಳಿ ರೈತರ ಸಾಲ ಮನ್ನಾ ಮಾಡಿದ್ದೆ ಅದಕ್ಕೆ ನಾನು ಅವಿವೇಕಿ: ಇನ್ನೂ ತಮ್ಮನ್ನು ಹಳ್ಳಿ ಗುಗ್ಗು , ಅವಿವೇಕಿ ಎಂದು ಕರೆದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಹೌದು ನಾನು ಅವಿವೇಕಿ, ಅದಕ್ಕಾಗಿಯೇ ರೈತರ ಸಂಕಷ್ಟಕ್ಕೆ ಸ್ಪಂದಿಸಿ 25,000 ಕೋಟಿ ಸಾಲ ಮನ್ನಾ ಮಾಡಿದೆ. ನಾನು ಇವರಂತೆ ವಿವೇಕಿ ಆಗಿದ್ದರೆ, ಅದೇ 25,000 ಕೋಟಿ ಹಣವನ್ನು ರಸ್ತೆ ಮತ್ತಿತರ ಕಾಮಗಾರಿಗಳಿಗೆ ಸುರಿದು 30-40 ಪರ್ಸೆಂಟ್ ಕಮಿಷನ್ ಹೊಡೆಯುತ್ತಿದೆ ಎಂದು ಚಾಟಿ ಬೀಸಿದರು.
ಬುದ್ಧ, ಸಿದ್ದಾರ್ಥನ ಹೆಸರಿನಲ್ಲಿ ಲೂಟಿ: ತಾವು ರಾಜಕಾರಣದಲ್ಲಿ ಅಥವಾ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ರಿಯಲ್ ಎಸ್ಟೇಟ್ ದಂಧೆ ಮಾಡಿಲ್ಲ ಎಂದು ಸ್ಪಷ್ಪ ಪಡಿಸಿದ ಕುಮಾರಸ್ವಾಮಿ, ತಮ್ಮ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಂತೆ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು,
ರಾಜಕಾರಣಕ್ಕೆ ಬರುವ ಮುನ್ನವೇ ಚಿತ್ರರಂಗದಲ್ಲಿದ್ದಾಗ ಬಿಡದಿ ಬಳಿ 45 ಎಕರೆ ಜಮೀನು ಖರೀದಿಸಿದ್ದೆ. ಆದರೆ ಇವರು ಸಿದ್ದಾರ್ಥ ಟ್ರಸ್ಟ್ ಹೆಸರಿನಲ್ಲಿ ಏರೋಸ್ಪೆಸ್ ಪಾರ್ಕ್ ಹಾಗೂ ಕಲಬುರಗಿಯಲ್ಲಿ ಸ್ಮಾರಕ ಮಾಡುತ್ತೇವೆ ಎಂದು ಸರ್ಕಾರಿ ಜಮೀನು ಕಬಳಿಸಿದ್ದಾರೆ. ಹೀಗಾಗಿ ನನ್ನ ಬಗ್ಗೆ ಮಾತನಾಡುವ ಮುನ್ನ ನೈತಿಕತೆ ಕಲಿಯಿರಿ ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.