ತನ್ನ ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಂದುಶೇಖರ್ ಮನೆ  
ರಾಜ್ಯ

ಕಿರುಚಾಟ ಇಲ್ಲ, ಅನುಮಾನ ಬರುವ ಚಟುವಟಿಕೆಗಳಿಲ್ಲ: ಬೆಂಗಳೂರಿನ ರಾಜಾಜಿನಗರದಲ್ಲಿ 7 ಮಂದಿ ಹತ್ಯೆ ಸುದ್ದಿ ಕೇಳಿ ಬೆಚ್ಚಿಬಿದ್ದ ಸ್ಥಳೀಯರು !

ಇಂದುಶೇಖರ್ ವಾಸವಿದ್ದ ಕಟ್ಟಡದಲ್ಲಿನ ಬಾಡಿಗೆದಾರರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಜೊತೆ ಮಾತನಾಡಿ, ಆತನ ವರ್ತನೆಯಿಂದಾಗಿ ಬಿಲ್ಡಿಂಗ್ ನ ಇತರ ಬಾಡಿಗೆದಾರರು ಆತನೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರು: ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಕ್ಯಾಬ್ ಡ್ರೈವರ್ ಇಂದುಶೇಖರ್ ಒರಟು ಸ್ವಭಾವದ, ಸದಾ ಜಗಳವಾಡುವ ವ್ಯಕ್ತಿಯಾಗಿದ್ದ. ಸ್ಥಳೀಯರೊಂದಿಗೆ ಆಗಾಗ್ಗೆ ಜಗಳಕ್ಕೆ ಇಳಿಯುತ್ತಿದ್ದ ಆತ, ಸಣ್ಣಪುಟ್ಟ ವಿಚಾರಗಳಿಗೂ ಬೆದರಿಕೆ ಹಾಕಿ ಗಲಾಟೆ ಸೃಷ್ಟಿಸುತ್ತಿದ್ದ ಎಂದು ನೆರೆಹೊರೆಯವರು ಹೇಳುತ್ತಾರೆ.

ಇಂದುಶೇಖರ್ ವಾಸವಿದ್ದ ಕಟ್ಟಡದಲ್ಲಿನ ಬಾಡಿಗೆದಾರರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಜೊತೆ ಮಾತನಾಡಿ, ಆತನ ವರ್ತನೆಯಿಂದಾಗಿ ಬಿಲ್ಡಿಂಗ್ ನ ಇತರ ಬಾಡಿಗೆದಾರರು ಆತನೊಂದಿಗೆ ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

ಪಾರ್ಕಿಂಗ್ ವಿಚಾರ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಆತ ಆಗಾಗ್ಗೆ ಜಗಳವಾಡುತ್ತಿದ್ದ. ಜನರನ್ನು ಅವಾಚ್ಯವಾಗಿ ನಿಂದಿಸಿ, ಸ್ಥಳೀಯವಾಗಿ ಅಶಾಂತಿ ಸೃಷ್ಟಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸುವ ಮೂಲಕ ಈಗ ನಾವು ನೆರೆಹೊರೆಯವರು ಸ್ವಲ್ಪ ಶಾಂತಿಯಿಂದ ಬದುಕಬಹುದು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ. ಇಂದುಶೇಖರ್ ಪತ್ನಿ ಮತ್ತು ಮಗಳ ವರ್ತನೆಯೂ ಅಷ್ಟೇ ಒರಟಾಗಿತ್ತು ಎಂದು ನೆರೆಹೊರೆಯವರು ಆರೋಪಿಸುತ್ತಾರೆ.

ಇಂದುಶೇಖರ್ ಯಾರೊಂದಿಗಾದರೂ ಜಗಳವಾಡಿದಾಗಲೆಲ್ಲ ಆತನ ಮಗಳು ಮೊಬೈಲ್‌ನಲ್ಲಿ ಘಟನೆಯನ್ನು ಚಿತ್ರೀಕರಿಸುತ್ತಿದ್ದಳು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ತಾನು ಮಾಧ್ಯಮದವನು ಎಂದು ಹೇಳಿಕೊಂಡು ಆತ ಜನರಿಗೆ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸುತ್ತಾರೆ.

ಮತ್ತೊಬ್ಬ ಬಾಡಿಗೆದಾರರ ಪ್ರಕಾರ, ಇಂದುಶೇಖರ್ ಕಟ್ಟಡದ ಮಾಲೀಕರ ಮಗನೊಂದಿಗೆ ಸ್ನೇಹದಿಂದಿದ್ದ. ಆದರೆ, ಎರಡನೇ ಮಹಡಿಯಲ್ಲಿ ನವೀಕರಣ ಕಾಮಗಾರಿ ನಡೆಸುವ ನೆಪದಲ್ಲಿ ಕೆಲವು ದಾಖಲೆಗಳಿಗೆ ಕಟ್ಟಡದ ಮಾಲೀಕರ ಸಹಿ ಪಡೆದಿದ್ದ ಎನ್ನಲಾಗಿದೆ. ಈ ಕಾಮಗಾರಿಗೆ ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಅನುಮತಿ ಅಗತ್ಯವಿದೆ ಎಂದು ಆತ ಹೇಳಿದ್ದ. ಇದಾದ ಬಳಿಕ ಇಬ್ಬರ ನಡುವೆ ವಿವಾದ ಉಂಟಾಗಿದ್ದು, ಸದ್ಯ ಈ ಸಂಬಂಧದ ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಬಾಡಿಗೆದಾರರು ತಿಳಿಸಿದ್ದಾರೆ.

ಹತ್ಯೆಗಳ ಬಗ್ಗೆ ತಿಳಿದಿರಲಿಲ್ಲ, ಆಘಾತಕ್ಕೊಳಗಾದ ನೆರೆಹೊರೆಯವರು

ರಾಜಾಜಿನಗರದ 5ನೇ ಬ್ಲಾಕ್‌ನಲ್ಲಿರುವ ಕಮರ್ಷಿಯಲ್ ಬಿಲ್ಡಿಂಗ್ ನ ಎರಡನೇ ಮಹಡಿಯಲ್ಲಿನ ಇಂದುಶೇಖರ್ ಮನೆಯಲ್ಲಿ ಏಳು ಮಂದಿಯ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಆದರೆ, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುವವರೆಗೂ ತಮಗೆ ಈ ಹತ್ಯೆಗಳ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಮತ್ತು ಸುತ್ತಮುತ್ತ ಅಂಗಡಿಯವರು ಹೇಳುತ್ತಾರೆ. ಕಟ್ಟಡದಲ್ಲಿ ಜನರ ಕಿರುಚಾಟ ಅಥವಾ ಅಸಹಜ ಚಟುವಟಿಕೆಗಳೂ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳುತ್ತಾರೆ.

ಕಟ್ಟಡದ ನೆಲಮಹಡಿಯಲ್ಲಿ ಐದು ಅಂಗಡಿಗಳಿದ್ದು, ಮೊದಲ ಮಹಡಿಯಲ್ಲಿ ರಾಜಕೀಯ ಪಕ್ಷವೊಂದರ ಕಚೇರಿಯಿದೆ. ಕಳೆದ 14 ವರ್ಷಗಳಿಂದ ಇಂದುಶೇಖರ್ ತನ್ನ ಕುಟುಂಬದೊಂದಿಗೆ ಎರಡನೇ ಮಹಡಿಯಲ್ಲಿ ವಾಸವಾಗಿದ್ದ. ಕಟ್ಟಡದ ಸುತ್ತಮುತ್ತ ಹಲವು ವಾಣಿಜ್ಯ ಮಳಿಗೆಗಳಿವೆ.

ಕಳೆದ ಎರಡು ದಿನಗಳಿಂದ ಪೊಲೀಸರು ಕಟ್ಟಡಕ್ಕೆ ಭೇಟಿ ನೀಡಿ ಇಂದುಶೇಖರ್ ಬಗ್ಗೆ ವಿಚಾರಣೆ ನಡೆಸಿದ್ದರು ಎಂದು ಬಾಡಿಗೆದಾರರೊಬ್ಬರು ತಿಳಿಸಿದ್ದಾರೆ. ಆದರೆ, ಹತ್ಯೆಗಳ ಬಗ್ಗೆ ನಿವಾಸಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ತಮ್ಮ ಕಟ್ಟಡದಲ್ಲೇ ಇಂತಹ ಭೀಕರ ಹತ್ಯೆಗಳು ನಡೆದಿವೆ ಎಂಬ ವಿಷಯ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

India-EU: ಪ್ರಧಾನಿ ಮೋದಿ ಭೇಟಿ ಮುನ್ನ ಸಂಶೋಧನೆ, ನಾವೀನ್ಯತೆ ಕಾರ್ಯಕ್ರಮ ಸಂಬಂಧಿಸಿದ ಮಾತುಕತೆ ಪೂರ್ಣ

IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಯುಪಿ ಪಿಸಿಎಸ್ ಅಧಿಕಾರಿ 'ಅನುಪಮಾ ರಾಗ್' ರಾಜೀನಾಮೆ: ರಾಜಕೀಯ ಪ್ರವೇಶದ ಸುಳಿವು! Video

ಡಿಸೆಂಬರ್ 2 ಬೆಳಗಾವಿ ಅಧಿವೇಶನಕ್ಕೆ ಮುನ್ನ ಮಹಿಳೆಗೆ ಸಚಿವ ಸ್ಥಾನ: ಸಿಎಂ ಡಿಕೆ ಶಿವಕುಮಾರ್; Video

'ನನ್ನ ತಲೆಯೊಳಗಿನ ಧ್ವನಿಗಳು ಟ್ರಂಪ್‌ ಕೊಲ್ಲುವಂತೆ ಹೇಳಿದವು: ಶ್ವೇತಭವನದ ಬಳಿ 3 ಗನ್ ಗಳೊಂದಿಗೆ ಬಂಧಿಸಲ್ಪಟ್ಟ ವೆನೆಜುವೆಲಾದ ವ್ಯಕ್ತಿ ಸ್ಫೋಟಕ ಹೇಳಿಕೆ!

ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ! Video ಸಂದೇಶದಲ್ಲಿ ಹೇಳಿದ್ದು ಏನು?