ಬೆಳಗಾವಿ: ತನ್ನ ಪ್ರೇಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ 24 ವರ್ಷದ ಮಗನನ್ನೇ ಕೊಲೆ ಮಾಡಲು ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ ಆರೋಪದ ಮೇಲೆ ಬೆಂಗಳೂರಿನ ಮಹಿಳೆ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯ ಪ್ರಿಯಕರ ಕಾರು ಚಾಲಕನಾಗಿದ್ದು, ಕೊಲೆ ಪ್ರಕರಣದಲ್ಲಿ ಆತನ ಸಹಚರರೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅಪ್ರಾಪ್ತನೊಬ್ಬನನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಮೀನ ನಾರಾಯಣ (44), ರಾಕೇಶ್ ಜಮುಣಿ (34), ಸಚಿನ್ ಕಾಂಬಳೆ, ಮನೋಜ್ ಕಾಂಬಳೆ, ತಮ್ಮಣ್ಣ ಕಾಂಬಳೆ ಮತ್ತು ಏಕನಾಥ್ ಕಾಂಬಳೆ ಎಂದು ಗುರುತಿಸಲಾಗಿದೆ. ರಾಕೇಶ್‌ನ ಸಹೋದರಿಯ ಮಗ ಎನ್ನಲಾದ ಅಪ್ರಾಪ್ತನನ್ನೂ ವಶಕ್ಕೆ ಪಡೆಯಲಾಗಿದೆ.
ಮೀನಾ ತನ್ನ ಪ್ರಿಯಕರ ರಾಕೇಶ್ ಜೊತೆ ಸೇರಿ ಮಗ ವಿಜಯ್ ನಾರಾಯಣನ ಕೊಲೆಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ.
ಪದೇಪದೇ ಇವರಿಬ್ಬರ ಸಂಬಂಧದ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಕುಟುಂಬದ ಆಸ್ತಿಗಳಿಗೆ ತಾನೊಬ್ಬಳೇ ಕಾನೂನುಬದ್ಧ ವಾರಸುದಾರಳಾಗಬೇಕು ಹಾಗೂ ಪ್ರಿಯಕರನನ್ನು ಮದುವೆಯಾಗಬೇಕು ಎಂಬ ಉದ್ದೇಶದಿಂದ ಮೀನಾ ಈ ಕೃತ್ಯಕ್ಕೆ ಮುಂದಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೀನಾ ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. ಆಕೆಯ ಪತಿ ನಾರಾಯಣ್ ಸುಮಾರು ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ಬೆಂಗಳೂರಿನಲ್ಲಿದ್ದ ಕುಟುಂಬದ ಮೂರು ಮನೆಗಳು ಮೀನಾ ಮತ್ತು ವಿಜಯ್ ಹೆಸರಿಗೆ ವರ್ಗಾವಣೆಯಾಗಿದ್ದವು. ಈ ಮನೆಗಳಿಂದ ಸಾಕಷ್ಟು ಬಾಡಿಗೆ ಬರುತ್ತಿತ್ತು ಎನ್ನಲಾಗಿದೆ. ಆದರೆ, ತಾಯಿಯ ಪ್ರೇಮ ಸಂಬಂಧದ ಬಗ್ಗೆ ವಿಜಯ್ ಅಸಮಾಧಾನ ಹೊಂದಿದ್ದ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ತೇರಣೆ ಗ್ರಾಮದ ನಿವಾಸಿಯಾಗಿರುವ ರಾಕೇಶ್, ನವೆಂಬರ್ 1ರಂದು ಬೆಳಗಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ತೋರಿಸುವುದಾಗಿ ಹೇಳಿ ವಿಜಯ್‌ನನ್ನು ಕಾರಿನಲ್ಲಿ ಬೆಳಗಾವಿಗೆ ಕರೆತಂದಿದ್ದ. ಅಲ್ಲಿನ ರಾಜ್ಯೋತ್ಸವ ಸಂಭ್ರಮವನ್ನು ಕಣ್ತುಂಬಿಕೊಳ್ಳುವುದು ಉತ್ತಮ ಅನುಭವವಾಗಲಿದೆ ಎಂದು ನಂಬಿಸಿದ್ದ.
ಇಬ್ಬರೂ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ರಾತ್ರಿ ಮದ್ಯಪಾನ ಮಾಡಿದ್ದರು. ನಂತರ ರಾಕೇಶ್ ಮತ್ತು ಆತನ ಸಹಚರರು ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ವಿಜಯ್‌ಗೆ ಕುಡಿಸಿದ್ದಾರೆ. ಆತ ಪ್ರಜ್ಞೆ ಕಳೆದುಕೊಂಡ ಬಳಿಕ ಕಾರಿನಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮೃತದೇಹವನ್ನು ರಾಷ್ಟ್ರೀಯ ಹೆದ್ದಾರಿ 48ರ ಕೆಎಲ್‌ಇ ಛತ್ರಿ ಸಮೀಪದ ಸರ್ವಿಸ್ ರಸ್ತೆಯ ಚರಂಡಿಗೆ ಎಸೆದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.
ನವೆಂಬರ್ 3ರಂದು ಗುರುತು ಪತ್ತೆಯಾಗದ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮಾಲ್ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ನವೆಂಬರ್ 4ರಂದು ಮೀನಾ ಮೃತದೇಹವನ್ನು ತನ್ನ ಮಗ ವಿಜಯ್ ಎಂದು ಗುರುತಿಸಿದ್ದಳು. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ತಾಯಿ ಮೀನಾ ಮತ್ತು ಆಕೆಯ ಪ್ರಿಯಕರ ರಾಕೇಶ್ ಒಳಗೊಂಡಿರುವ ಕೊಲೆ ಸಂಚಿನ ಸುಳಿವು ಸಿಕ್ಕಿದೆ. ಪ್ರಕರಣದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಮಾಲ್ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.