ಚಾಮರಾಜನಗರ: ಚಾಮರಾಜನಗರ ಗಡಿಭಾಗ ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿರುವ ವರನಟ ಡಾ.ರಾಜ್‌ಕುಮಾರ್ ಅವರ ಸಂಬಂಧಿ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮಂಗಮ್ಮ ಎಂಬುವರ ಮನೆಯ ಮುಂದೆ ಈ ಘಟನೆ ನಡೆದಿದ್ದು, ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಪುಡಿಪುಡಿಯಾಗಿವೆ. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ತಾಳವಾಡಿ ಪೊಲೀಸರು ಸ್ಥಳದಲ್ಲಿದ್ದ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು.
ಬಳಿಕ ಸ್ಪಷ್ಟನೆ ನೀಡಿರುವ ಪೊಲೀಸರು, ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಇದು ಕಚ್ಚಾ ಬಾಂಬ್ ಸ್ಫೋಟ ಅಲ್ಲ. ಕೆಲ ಯುವಕರು ನಿಗದಿತ ಸಮಯಕ್ಕಿಂತ ಹೆಚ್ಚು ಜೋರಾಗಿ ಪಟಾಕಿ ಸಿಡಿಸಿದ್ದರಿಂದ ಉಂಟಾದ ಕಂಪನಕ್ಕೆ ಗಾಜುಗಳು ಒಡೆದಿವೆ ಎಂದು ತಿಳಿಸಿದ್ದಾರೆ.
ಆದರೆ, ಪೊಲೀಸರ ಈ ಸ್ಪಷ್ಟನೆಯನ್ನು ಕುಟುಂಬಸ್ಥರು ಸಂಪೂರ್ಣವಾಗಿ ನಿರಾಕರಿಸಿ, ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ.
ಪೊಲೀಸರು ನೈಜ ಸಂಗತಿ ಏನೆಂಬುದನ್ನು ವಶಕ್ಕೆ ಪಡೆದಿದ್ದ ಯುವಕರಿಂದ ಬಾಯಿ ಬಿಡಿಸಿದ್ದಾರೆ. ಇಬ್ಬರು ಯುವಕರು ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಎರಡು ಆಟಂಬಾಂಬ್ ಪಟಾಕಿಗಳನ್ನು ಒಟ್ಟಿಗೆ ಸೇರಿಸಿ ಸಿಡಿಸಿದ್ದು, ಇದರಿಂದ ಹಾರಿದ ಕಿಡಿ ಪಕ್ಕದಲ್ಲಿದ್ದ ಆಟಂಬಾಂಬ್ ಪಟಾಕಿ ಬಾಕ್ಸ್ ಗೆ ಬಿದ್ದು ಒಟ್ಟಿಗೆ ಸ್ಫೋಟಗೊಂಡಿದೆ. ಈ ಸ್ಫೋಟದ ಕಂಪನದಿಂದಾಗಿಯೇ ಮನೆಯ ಗಾಜುಗಳು ಪುಡಿಯಾಗಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ತಾಳವಾಡಿ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.