ಅಡುಗೆಗೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಡೆಯುವ ಉದ್ದೇಶದಿಂದ ಹೊಸ ಮೊಬೈಲ್ ಆ್ಯಪ್ ನ್ನು ಮೂರು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಹೊಟೇಲ್ ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಅಡುಗೆ ಎಣ್ಣೆಯ ಬಳಕೆಯ ಮೇಲೆ ನಿಗಾ ಇಡುವುದು ಈ ಆ್ಯಪ್ನ ಉದ್ದೇಶವಾಗಿದೆ. ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮರುಬಳಕೆ ಮಾಡಿದ ಎಣ್ಣೆ ಆರೋಗ್ಯಕ್ಕೆ ಅಪಾಯಕಾರಿ. ಆರೋಗ್ಯ ಸಚಿವನಾಗಿ ಆಸ್ಪತ್ರೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ನನ್ನ ಗುರಿ. ಜನರು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಬೇಕು, ಇನ್ನು 10 ವರ್ಷಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಮಾಡುವುದು, ಜನರ ಆರೋಗ್ಯ ಸುಧಾರಿಸುವುದೇ ನನ್ನ ಗುರಿ ಎಂದು ಹೇಳಿದರು.
ಎಣ್ಣೆ ಖರೀದಿ ಮತ್ತು ಬಳಕೆಗೆ ಸಂಬಂಧಿಸಿದ ದತ್ತಾಂಶವನ್ನು ಸಂಗ್ರಹಿಸಿ, ಅದರ ಮೇಲೆ ನಿಗಾ ಇಡುವುದು ಈ ಆ್ಯಪ್ನ ಉದ್ದೇಶವಾಗಿದೆ. ಪ್ರಾಯೋಗಿಕ ಯೋಜನೆಯನ್ನು ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ ಸೇರಿದಂತೆ ನಾಲ್ಕು ನಗರಗಳಲ್ಲಿ ಆರಂಭಿಸಲಾಗುತ್ತದೆ ಎಂದರು.