ಸಂಗ್ರಹ ಚಿತ್ರ online desk
ರಾಜ್ಯ

ವಾಲ್ಮೀಕಿ ನಿಗಮ ಹಗರಣ: ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ED, 6 ಆರೋಪಿಗಳಿಗೆ ಕೋರ್ಟ್ ಸಮನ್ಸ್..!

ನಿಗಮದ ಕಲ್ಯಾಣ ನಿಧಿಯ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ನಕಲಿ ಕಂಪನಿಗಳ ಮೂಲಕ ಹೇಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಸಂಪೂರ್ಣ ಜಾಲವನ್ನು ಇ.ಡಿ ಅಧಿಕಾರಿಗಳು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಬೆಂಗಳೂರು: ಬಹುಚರ್ಚಿತ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (KMVSTDC) ಬಹುಕೋಟಿ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ಮತ್ತಷ್ಟು ಚುರುಕುಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸಲ್ಲಿಸಿರುವ ಪೂರಕ ದೋಷಾರೋಪ ಪಟ್ಟಿಯನ್ನು (Supplementary Prosecution Complaint) ಪರಿಗಣಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಪ್ರಕರಣದ ಆರು ಮಂದಿ ಹೊಸ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.

ಇ.ಡಿ ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ನಲ್ಲಿ ಪಿತ್ತಲ ಶ್ರೀನಿವಾಸ, ಗಾಮಿನಿ ಚಿನ್ನ ರಾಜು, ವೆಲ್ಮ ಸುರೇಶ್, ಜಿ. ಜಗದೀಶ್, ಪ್ಯಾರಾಟೋಪಿಯಾ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರತಿನಿಧಿ ಮುಕುಂಗಾ ಮೊಶಿಲ್ಲುಂಗ್ ಮೇರಿಂಗ್ ಹಾಗೂ ಮುಕುಂಗಾ ಮೊಶಿಲ್ಲುಂಗ್ ಮೇರಿಂಗ್ ಅವರನ್ನು ಕ್ರಮವಾಗಿ 26ರಿಂದ 31ನೇ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ನಿಗಮದ ಕಲ್ಯಾಣ ನಿಧಿಯ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ನಕಲಿ ಕಂಪನಿಗಳ ಮೂಲಕ ಹೇಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಸಂಪೂರ್ಣ ಜಾಲವನ್ನು ಇ.ಡಿ ಅಧಿಕಾರಿಗಳು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಪೂರಕ ವಿಚಾರಣಾ ದೂರಿನಲ್ಲಿ ಸಲ್ಲಿಸಿರುವ ದಾಖಲೆಗಳು ಮತ್ತು ಮಾಹಿತಿಗಳನ್ನು ಪರಿಶೀಲಿಸಿದಾಗ, 26ರಿಂದ 31ನೇ ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಕಂಡುಬಂದಿವೆ” ಎಂದು ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗಾಗಿ ಇರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ಆದೇಶದಲ್ಲಿ ತಿಳಿಸಿದ್ದಾರೆ.

2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 44(1)(ಬಿ) ಮತ್ತು 45(1) ಅಡಿಯಲ್ಲಿ ಇ.ಡಿ. ದಾಖಲಿಸಿರುವ ಮೂಲ ದೂರಿನಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 25 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇದೀಗ ಹೆಚ್ಚುವರಿ ಸಾಕ್ಷ್ಯಾಧಾರಗಳನ್ನು ಆಧರಿಸಿ ಪೂರಕ ದೂರು ಸಲ್ಲಿಸಲಾಗಿದೆ.

ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ, ಎರಡನೇ ಆರೋಪಿ ಸತ್ಯನಾರಾಯಣ ವರ್ಮಾ ಅವರ ಲೆಕ್ಕಪತ್ರಗಳನ್ನು ನಿರ್ವಹಿಸುತ್ತಿದ್ದ ಪಿತ್ತಲ ಶ್ರೀನಿವಾಸ ಅವರ ಬಳಿ ನಿಗಮದಿಂದ ಅಕ್ರಮವಾಗಿ ವರ್ಗಾಯಿಸಲಾದ 93 ಲಕ್ಷ ರೂಪಾಯಿ ಪತ್ತೆಯಾಗಿದೆ. ಅವರ ವೈಯಕ್ತಿಕ ಖಾತೆ ಹಾಗೂ ಸ್ನೇಹಿತರೊಬ್ಬರ ಬ್ಯಾಂಕ್ ಖಾತೆಯಿಂದ ಈ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ.

ವರ್ಮಾ ಅವರು 27ನೇ ಆರೋಪಿ ಗಾಮಿನಿ ಚಿನ್ನ ರಾಜು ಅವರಿಗೆ ಸೇರಿದ ಸರಣ್ಯ ಬುಲಿಯನ್ಸ್ ಮೂಲಕ ಚಿನ್ನಾಭರಣ ತಯಾರಿಸಿ, ತಮ್ಮ ಜಿಎನ್ ಇಂಡಸ್ಟ್ರೀಸ್ ಹೆಸರಿನಲ್ಲಿ ಬಿಲ್ ನೀಡುವಂತೆ ಸೂಚಿಸಿದ್ದರು. ಆದರೆ, ಚಿನ್ನಾಭರಣಗಳನ್ನು ವಾಸ್ತವವಾಗಿ ವಿತರಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ.

ಆದಾಗ್ಯೂ, 2024ರ ಏಪ್ರಿಲ್ 18ರಂದು ವರ್ಮಾ ಅವರಿಂದ ಸರಣ್ಯ ಬುಲಿಯನ್ಸ್ ಖಾತೆಗೆ ಎರಡು ಕೋಟಿ ರೂಪಾಯಿ ವರ್ಗಾವಣೆಯಾಗಿದೆ. ಅಲ್ಲದೆ, ಚಿನ್ನ ರಾಜು ತಮ್ಮ ಗ್ರಾಹಕರ ಗುರುತಿನ ಪರಿಶೀಲನೆಗೆ ಸಂಬಂಧಿಸಿದ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಿರಲಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

28ನೇ ಆರೋಪಿ ವೆಲ್ಮಾ ಸುರೇಶ್ ಅವರ ಮಗನ ಉನ್ನತ ಶಿಕ್ಷಣಕ್ಕಾಗಿ ಅಮೆರಿಕದ ವೀಸಾ ಪಡೆಯಲು ಸುಮಾರು 45 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಅಗತ್ಯವಿತ್ತು. ಈ ಮೊತ್ತವನ್ನು ಇತರ ಮೂಲಗಳಿಂದ ಹೊಂದಿಸಿಕೊಂಡಿದ್ದ ಅವರು, ನಗದನ್ನು ಪರಿವರ್ತಿಸಲು 19ನೇ ಆರೋಪಿ ಜಿ. ಕಿಶೋರ್ ರೆಡ್ಡಿ ಅವರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ.

ಆದರೆ, ಈ ವಹಿವಾಟು ನಡೆದಿರುವುದಕ್ಕೆ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಆದಾಗ್ಯೂ, ಹಗರಣದ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಬಳಸಿಕೊಂಡಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಿಂದ 45 ಲಕ್ಷ ರೂಪಾಯಿ ವೆಲ್ಮಾ ಅವರ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಈ ಖಾತೆಯನ್ನು ಕಿಶೋರ್ ರೆಡ್ಡಿ ಅವರ ಸೂಚನೆಯಂತೆ ನಿರ್ವಹಿಸಲಾಗುತ್ತಿತ್ತು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಖ್ಯ ಆರೋಪಿಗಳ ಪರವಾಗಿ ಹಣದ ಹರಿವನ್ನು ನಿರ್ವಹಿಸುತ್ತಿದ್ದ ಎನ್ನಲಾದ 29ನೇ ಆರೋಪಿ ಜಿ. ಜಗದೀಶ್, ಹಗರಣದಲ್ಲಿ 40 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದರು ಎಂದು ಆರೋಪಿಸಲಾಗಿದೆ.

ಈ ಹಣದಲ್ಲಿ 38 ಲಕ್ಷ ರೂಪಾಯಿ ನೀಡಿ ಟೊಯೊಟಾ ಇನ್ನೋವಾ ಕಾರು ಖರೀದಿಸಿದ್ದರು. 13ನೇ ಆರೋಪಿ ತಮಟಂ ತೇಜಾ ಅವರಿಗೆ ಸೇರಿದ ರಾಮ್ ಕಾರ್ತಿಕ್ ಪ್ರಾಜೆಕ್ಟ್ಸ್ ಸಂಸ್ಥೆಯ ಬ್ಯಾಂಕ್ ಖಾತೆಯಿಂದ ಕಾರು ಖರೀದಿಯ ಹಣ ಪಾವತಿಯಾಗಿತ್ತು.

30ನೇ ಆರೋಪಿ ಪರಟೋಪಿಯಾ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಬ್ಯಾಂಕ್ ಖಾತೆಯ ಅಧಿಕೃತ ಸಹಿ ಅಧಿಕಾರಿಯಾಗಿರುವ ಮುಕುಂಗಾ ಮೊಶಿಲ್ಲುಂಗ್ ಮೇರಿಂಗ್ ಅವರನ್ನು 31ನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಬಳಸಿಕೊಂಡಿದ್ದ ಸಂಸ್ಥೆಗಳಲ್ಲಿ ಒಂದಾದ ಜಾಲಿಯಂಟ್ ಟ್ರೈನಿಂಗ್ ಆ್ಯಂಡ್ ಕನ್ಸಲ್ಟಿಂಗ್ ಸರ್ವೀಸಸ್‌ನ ಖಾತೆಯಿಂದ ಪರಟೋಪಿಯಾ ಸಂಸ್ಥೆಯ ಖಾತೆಗೆ 1.50 ಕೋಟಿ ರೂಪಾಯಿ ವರ್ಗಾವಣೆಯಾಗಿತ್ತು. ಈ ಪೈಕಿ ಒಂದು ಕೋಟಿ ರೂಪಾಯಿಯನ್ನು ಮೂರನೇ ಆರೋಪಿ ಎಟಕಾರಿ ಸತ್ಯನಾರಾಯಣ ಅವರ ಪತ್ನಿ ಅಲ್ಲಾಡಿ ರಜಿತಾ ಅವರಿಗೆ ವರ್ಗಾಯಿಸಲಾಗಿತ್ತು ಎಂದು ಇ.ಡಿ. ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎನ್‌ವಿಡಿಯಾದ ಮಾಜಿ CEO ಜೆನ್ಸನ್ ಹುವಾಂಗ್‌ಗೆ ಮತ್ತೊಬ್ಬ ಮಹಿಳಾ ಉದ್ಯೋಗಿ ಜೊತೆ ಸಂಬಂಧ: ರಾಯಿಟರ್ಸ್ ವರದಿ

BJP ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಗೆ ಬ್ರೇಕ್; 2022ರ ಹಿಂದಿನ ಸ್ಥಿತಿಗೆ ತರಲು 'ಕೈ' ಸರ್ಕಾರ ಮುಂದು..!

ಹಾವೇರಿ: IAF helicopter ತುರ್ತು ಲ್ಯಾಂಡಿಂಗ್: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಏಪ್ರಿಲ್ 20ರಿಂದ 'Invest Karnataka 2027': ಏರೋಸ್ಪೇಸ್-ರಕ್ಷಣಾ ವಲಯಕ್ಕೆ ಬಂಪರ್; 2026-31ರ ನೂತನ ನೀತಿ ಅನಾವರಣ..!

Nvidia ನೂತನ CEO ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಡೊನಾಲ್ಡ್ ಟ್ರಂಪ್!