ಮೈಸೂರು: ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆಯ ಹೆಲಿಕಾಪ್ಟರ್ ರಿಪೇರಿ ಬಳಿಕ ನಿರ್ಗಮಿಸಿದೆ.
ನಿನ್ನೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಪ್ರಧಾನಿ ಮೋದಿ ಅವರು ಲಲಿತಮಹಲ್ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಈ ವೇಳೆ ಒಂದು ಹೆಲಿಕಾಪ್ಟರ್‌ನಲ್ಲಿ ಮೋದಿ ಆಗಮಿಸಿದ್ದರು. ಪ್ರಧಾನಿ ಮೋದಿ ಅವರ ಬೆಂಗಾವಲಿಗೆ ಒಟ್ಟು ಎರಡು ಹೆಲಿಕಾಪ್ಟರ್‌ಗಳಿದ್ದವು.
ಪ್ರಧಾನಿ ಮೋದಿ ಲ್ಯಾಂಡಿಂಗ್ ಆದ ನಂತರ ಟೇಕ್ ಆಫ್ ಆಗಬೇಕಿದ್ದ 3 ಹೆಲಿಕಾಪ್ಟರ್‌ಗಳಲ್ಲಿ 2 ಹೆಲಿಕಾಪ್ಟರ್‌ಗಳು ಟೇಕ್ ಆಫ್ ಆಗಿದ್ದವು. ಆದರೆ .ಇಂಡಿಯನ್ ಏರ್ ಫೋರ್ಸ್‌ಗೆ ಸೇರಿದ ಒಂದು ಹೆಲಿಕಾಪ್ಟರ್ ನ್ನು ತಾಂತ್ರಿಕ ದೋಷದಿಂದ ಮೈಸೂರಿನ ಲಲಿತ್ ಮಹಲ್ ಬಳಿಯ ಜಯಚಾಮರಾಜ ಒಡೆಯರ್ ಹೆಲಿಪ್ಯಾಡ್ ನಲ್ಲಿಯೇ ನಿಲ್ಲಿಸಲಾಗಿತ್ತು.
ಬೆಂಗಳೂರಿನಿಂದ ಮೈಸೂರಿಗೆ ಬಂದ ಬಳಿಕ ಈ ವಿಶೇಷ ಹೆಲಿಕಾಪ್ಟರ್ ಮತ್ತೆ ಹಾರಲೇ ಇಲ್ಲ. ನಿಂತಲ್ಲೇ ನಿಂತುಬಿಟ್ಟಿತು. ಮೈಸೂರು ಸ್ಥಳೀಯ ಪೊಲೀಸರು ಹೆಲಿಪ್ಯಾಡ್ ಸುತ್ತಮುತ್ತಲಿನ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಅಲ್ಲಿ ನಿಲ್ಲಿಸಲಾದ ಹೆಲಿಕಾಪ್ಟರ್‌ಗೆ ಭದ್ರತೆ ಒದಗಿಸಿದ್ದರು. ಈ ವ್ಯವಸ್ಥೆಗಳ ಭಾಗವಾಗಿ ಮೈಸೂರು ನಗರ ಪಾಲಿಕೆಯ ಸಿಬ್ಬಂದಿಯನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಈ ಮಧ್ಯೆ ನಿನ್ನೆಯಿಂದಲೂ ನಿಂತಿದ್ದ ಹೆಲಿಕಾಪ್ಟರ್ ಅನ್ನು ಅಧಿಕಾರಿಗಳು ರಿಪೇರಿ ಮಾಡಿದರು. ಕೆಟ್ಟು ನಿಂತಿದ್ದ ಹೆಲಿಕಾಪ್ಟರ್ ಅನ್ನು ಪೈಲಟ್ ಇಂದು ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.