ನವೆಂಬರ್: ಸರಣಿ ಬೆಲೆ ಏರಿಕೆಗಳಿಂದ ಭಾರೀ ಟೀಕೆಗೆ ಒಳಗಾಗಿರುವ ರಾಜ್ಯ ಸರ್ಕಾರ ಈಗ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕೊಡಲು ಮುಂದಾಗಿದೆ.
ರಾಜ್ಯದಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಸರ್ಕಾರ ಅಂದುಕೊಂಡಂತೆ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆಯಾದರೆ, ಆಸ್ತಿಗಳ ಮೌಲ್ಯ ಶೇ.30 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆಸ್ತಿ ಮೌಲ್ಯ ಹೆಚ್ಚಾದರೆ ಜನತೆಗೆ ಖುಷಿಯ ವಿಚಾರವಲ್ಲವೇ? ಎಂದು ಹುಬ್ಬೇರಿಸಬೇಡಿ.
ಹೊಸದಾಗಿ ಮನೆ, ಸೈಟ್ ಅಥವಾ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ಯೋಜಿಸುತ್ತಿರುವವರಿಗೆ ಸರ್ಕಾರದ ಈ ನಡೆ ಆರ್ಥಿಕವಾಗಿ ಹೊರೆಯಾಗಲಿದೆ. ಹೆಚ್ಚಿದ ಮೌಲ್ಯಕ್ಕೆ ಅನುಗುಣವಾಗಿ ಹೆಚ್ಚಿನ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಈ ಹಿಂದೆ 2019 ಮತ್ತು 2023ರಲ್ಲಿ ಮಾರ್ಗಸೂಚಿ ಬೆಲೆ ಪರಿಷ್ಕರಣೆ ನಡೆದಿತ್ತು. ಕಳೆದ 3 ವರ್ಷಗಳಲ್ಲಿ ಎರಡನೇ ಬಾರಿಗೆ ಮಾರ್ಗಸೂಚಿ ಬೆಲೆ ಪರಿಷ್ಕರಣೆಯಾಗುತ್ತಿದೆ.
3 ವರ್ಷಗಳ ನಂತರ ಮತ್ತೊಮ್ಮೆ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಡಿಸೆಂಬರ್ 15 ಅಥವಾ ಜನವರಿ 1ರಿಂದ ಹೊಸ ಮಾರ್ಗಸೂಚಿ ಬೆಲೆಗಳು ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಸಾರ್ವಜನಿಕರಿಗೆ ಈ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಉಪನೋಂದಣಾಧಿಕಾರಿಗಳ ಕಚೇರಿಯ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಜನಸಾಮಾನ್ಯರಿಗೆ ಸಕಾರಾತ್ಮಕವಾಗಿರುವ ಒಂದು ಅಂಶ
ಈ ಕ್ರಮ ಒಂದು ಕಡೆ ರೈತರಿಗೆ ಭೂ ಸ್ವಾಧೀನದ ಸಂದರ್ಭದಲ್ಲಿ ಹೆಚ್ಚಿನ ಲಾಭ ತಂದುಕೊಟ್ಟರೆ, ಮತ್ತೊಂದು ಕಡೆ ಆಸ್ತಿ ಖರೀದಿದಾರರಿಗೆ ಹೆಚ್ಚುವರಿ ಆರ್ಥಿಕ ಹೊರೆಯನ್ನುಂಟು ಮಾಡಲಿದೆ.
ದ್ವಿಮುಖ ಪರಿಣಾಮ
ಈ ಮಾರ್ಗಸೂಚಿ ಬೆಲೆ ಹೆಚ್ಚಳವು ದ್ವಿಮುಖ ಪರಿಣಾಮಗಳನ್ನು ಬೀರಲಿದೆ. ಒಂದು ಕಡೆ, ಕೃಷಿ ಜಮೀನು ಹೊಂದಿರುವ ರೈತರಿಗೆ ಇದು ಅನುಕೂಲವಾಗಬಹುದು. ಏಕೆಂದರೆ ಸರ್ಕಾರವು ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ, ಪರಿಷ್ಕೃತ ಮಾರ್ಗಸೂಚಿ ಬೆಲೆಗಳನ್ನು ಆಧಾರವಾಗಿಟ್ಟುಕೊಂಡು ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಸಾಧ್ಯತೆಯಿದೆ.
ನಗರ ಪ್ರದೇಶಗಳಲ್ಲಿಯೂ ಸರ್ಕಾರಿ ಯೋಜನೆಗಳಿಗೆ ಭೂಮಿ ಪಡೆಯುವಾಗ ಇದೇ ನಿಯಮ ಅನ್ವಯವಾಗುತ್ತದೆ. ಪ್ರಸ್ತುತ, ಒಂದು ಲಕ್ಷ ರೂಪಾಯಿ ಮೌಲ್ಯಕ್ಕೆ ಸುಮಾರು 7,600 ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ.
ಆಸ್ತಿ ಖರೀದಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವವರಿಗೂ ಇದು ಪರಿಣಾಮ ಬೀರಲಿದೆ. ಮಾರುಕಟ್ಟೆ ಮೌಲ್ಯ ಹೆಚ್ಚಾದಂತೆ ಸಾಲದ ಮೊತ್ತವೂ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ, ಬ್ಯಾಂಕುಗಳು ಆಸ್ತಿಯ ಮೌಲ್ಯದ ಶೇ. 70-80 ರಷ್ಟು ಸಾಲ ನೀಡುತ್ತವೆ. ಮಾರ್ಗಸೂಚಿ ಬೆಲೆ ಹೆಚ್ಚಾದಾಗ, ಸಾಲ ಪಡೆಯುವ ಮೊತ್ತವೂ ಹೆಚ್ಚಾಗುತ್ತದೆ.