ಬೆಂಗಳೂರು: ಅಕ್ರಮ ಆರೋಪಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಕರ್ನಾಟಕ ಲೋಕಸೇವಾ ಆಯೋಗ (KPSC), ಗೆಜೆಟೆಡ್ ಪ್ರೊಬೇಷನರಿ (KAS) ಪೂರ್ವಭಾವಿ ಪರೀಕ್ಷೆ ಮುಗಿದ ಕೇವಲ 24 ಗಂಟೆಗಳ ಒಳಗೆ ಅಭ್ಯರ್ಥಿಗಳ ಸ್ಕ್ಯಾನ್ ಮಾಡಿದ OMR ಪ್ರತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಭಾನುವಾರ ಸಂಜೆ 4 ಗಂಟೆಗೆ ಪರೀಕ್ಷೆ ಮುಕ್ತಾಯಗೊಂಡಿದ್ದು, ಸೋಮವಾರ ಬೆಳಿಗ್ಗೆಯೇ ಸ್ಕ್ಯಾನ್ ಪ್ರತಿಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಆದರೆ, ಲಿಂಕ್ ಬಿಡುಗಡೆಯಾದ ಬೆನ್ನಲ್ಲೇ ಲಕ್ಷಾಂತರ ಅಭ್ಯರ್ಥಿಗಳು ಏಕಕಾಲಕ್ಕೆ ಮುಗಿಬಿದ್ದ ಕಾರಣ ಕೆಪಿಎಸ್‌ಸಿ ವೆಬ್‌ಸೈಟ್ ಸರ್ವರ್ ಕ್ರ್ಯಾಶ್ ಆಗಿ ಅಭ್ಯರ್ಥಿಗಳು ಪರದಾಡುವಂತಾಯಿತು. ಸಂಜೆ ವೇಳೆಗೆ ಸೇವೆ ಮತ್ತೆ ಲಭ್ಯವಾಯಿತು.
ಇತ್ತೀಚೆಗೆ KPSCಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ OMR ಉತ್ತರ ಪತ್ರಿಕೆಗಳನ್ನು ತಿದ್ದಿರುವುದು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಭದ್ರತೆ ಮತ್ತು ಕಾರ್ಯಾಚರಣೆಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತು. ಅದರ ಭಾಗವಾಗಿಯೇ ಪರೀಕ್ಷೆ ಮುಗಿದ ಮರುದಿನವೇ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಪ್ರಕಟಿಸಲಾಗಿದೆ.
ಈ ಕುರಿತು ಮಾತನಾಡಿದ KPSC ಕಾರ್ಯದರ್ಶಿ ಕೆ. ಜ್ಯೋತಿ ಅವರು, OMR ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಲಾಗಿದೆ. ಉತ್ತರ ಕೀ ಪ್ರಕಟಿಸಿದ ಬಳಿಕ ಅವುಗಳ ಮೌಲ್ಯಮಾಪನ ನಡೆಸಲಾಗುತ್ತದೆ. ಉತ್ತರ ಪತ್ರಿಕೆಗಳನ್ನು ತಿದ್ದಲಾಗಿದೆ ಎಂಬ ಆಕ್ಷೇಪಗಳು ಮುಂದೆ ಕೇಳಿಬರಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ.
ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ 12 ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ 12 ಸ್ಕ್ಯಾನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು” ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಮ್ಮ OMR ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಕೆಳಗಿನ ಲಿಂಕ್ ಮೂಲಕ ಪರಿಶೀಲಿಸಬಹುದು: https://kpsc.karnataka.gov.in/OmrPortal/