ಬೆಂಗಳೂರು: ಜನಪ್ರಿಯ ಇ-ಕಾಮರ್ಸ್ ಕಂಪನಿಯ ಹೆಸರಿನಲ್ಲಿ ನಕಲಿ ಲಕ್ಕಿ ಡ್ರಾ ಬಹುಮಾನದ ಆಮಿಷವೊಡ್ಡಿ ಸೈಬರ್ ವಂಚಕರು ದಂಪತಿಯಿಂದ ಬರೋಬ್ಬರಿ ₹12.48 ಲಕ್ಷ ಹಣ ಲಪಟಾಯಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
₹14.41 ಲಕ್ಷ ಮೌಲ್ಯದ ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿ ಈ ವಂಚನೆ ಮಾಡಲಾಗಿದೆ. ನಗರದ 25 ವರ್ಷದ ಮಹಿಳೆ ಹಾಗೂ ಅವರ ಪತಿ ವಂಚನೆಗೆ ಒಳಗಾಗಿದ್ದಾರೆ. ಈ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲೆಯ ಸಿಇಎನ್ (CEN) ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆಗೆ 2026ರ ಸೆಪ್ಟೆಂಬರ್‌ನಲ್ಲಿ ಅಂಚೆ ಮೂಲಕ ಪತ್ರವೊಂದು ಬಂದಿತ್ತು. ಜನಪ್ರಿಯ ಇ-ಕಾಮರ್ಸ್ ಕಂಪನಿಯ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಲಕ್ಕಿ ಡ್ರಾದಲ್ಲಿ ನಿಮ್ಮನ್ನು ಅದೃಷ್ಟಶಾಲಿ ಗ್ರಾಹಕರಾಗಿ ಆಯ್ಕೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
ಪತ್ರದೊಂದಿಗೆ ಸ್ಕ್ರ್ಯಾಚ್ ಕಾರ್ಡ್ ಕೂಡ ಕಳುಹಿಸಲಾಗಿತ್ತು. ಕಾರ್ಡ್‌ನ್ನು ಸ್ಕ್ರ್ಯಾಚ್ ಮಾಡಿದಾಗ ₹14.41 ಲಕ್ಷ ಮೌಲ್ಯದ ಮೊದಲ ಬಹುಮಾನ ಗೆದ್ದಿರುವುದಾಗಿ ತಿಳಿದುಬಂದಿತ್ತು. ಬಹುಮಾನ ಪಡೆಯಲು ಗುರುತಿನ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಮಾಡಿಸಿಕೊಳ್ಳಬೇಕು ಹಾಗೂ ಅನ್ವಯವಾಗುವ ತೆರಿಗೆ ಪಾವತಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಜಿಎಸ್‌ಟಿ, ಆರ್‌ಬಿಐ ಶುಲ್ಕದ ಹೆಸರಿನಲ್ಲಿ ಹಣ ವಸೂಲಿ
ಪತ್ರದಲ್ಲಿದ್ದ ಮೊಬೈಲ್ ಸಂಖ್ಯೆಗಳಿಗೆ ಮಹಿಳೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವಂಚಕರು ಸ್ಕ್ರ್ಯಾಚ್ ಕಾರ್ಡ್, ಪತ್ರ, ಲಕೋಟೆ ಹಾಗೂ ಗುರುತಿನ ಚೀಟಿಯ ಫೋಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವಂತೆ ಸೂಚಿಸಿದ್ದಾರೆ. ಮಹಿಳೆಯೂ ಅವರು ಕೇಳಿದ ದಾಖಲೆಗಳನ್ನು ಕಳುಹಿಸಿದ್ದಾರೆ.
ಬಳಿಕ ಬಹುಮಾನದ ಹಣ ಬಿಡುಗಡೆ ಮಾಡಲು ತೆರಿಗೆ ಪಾವತಿಸಬೇಕು ಎಂದು ವಂಚಕರು ಹೇಳಿದ್ದಾರೆ. ಇದನ್ನು ನಂಬಿದ ದಂಪತಿಯಿಂದ ಹಂತ ಹಂತವಾಗಿ ಹಣ ಪಡೆದಿದ್ದಾರೆ. ಜಿಎಸ್‌ಟಿ, ಪ್ರೊಸೆಸಿಂಗ್ ಶುಲ್ಕ, ಆರ್‌ಬಿಐ ಶುಲ್ಕ ಹಾಗೂ ಇತರ ತೆರಿಗೆಗಳ ಹೆಸರಿನಲ್ಲಿ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಸೆಪ್ಟೆಂಬರ್ 4ರಿಂದ ಅಕ್ಟೋಬರ್ 8, 2026ರ ಅವಧಿಯಲ್ಲಿ ದಂಪತಿ ಒಟ್ಟು ₹12,48,335 ಹಣವನ್ನು ವಿವಿಧ ಬ್ಯಾಂಕ್ ವಹಿವಾಟುಗಳ ಮೂಲಕ ವರ್ಗಾಯಿಸಿದ್ದಾರೆ. ಆದರೆ, ಹಣ ಪಡೆದ ಬಳಿಕವೂ ಬಹುಮಾನದ ಹಣ ಕೈ ಸೇರದಿದ್ದಾಗ ತಾವು ವಂಚನೆಗೆ ಒಳಗಾಗಿರುವುದು ದಂಪತಿಗೆ ಅರಿವಾಗಿದೆ. ತಕ್ಷಣ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಬೆಂಗಳೂರು ದಕ್ಷಿಣ ಜಿಲ್ಲೆಯ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.