ಸಂಗ್ರಹ ಚಿತ್ರ 
ರಾಜ್ಯ

ರೈಲ್ವೆ ಸೇತುವೆ ವಿಸ್ತರಣೆ ಕಾಮಗಾರಿ: ಹೆಣ್ಣೂರು-ಬಾಗಲೂರು ರಸ್ತೆ 33 ದಿನ ಬಂದ್ ಸಾಧ್ಯತೆ, ಸ್ಥಳೀಯರ ಆಕ್ರೋಶ..!

ರೈಲ್ವೆ ಸೇತುವೆ ಸಂಖ್ಯೆ 535ರ ಅಗಲೀಕರಣ ಕಾಮಗಾರಿಗಾಗಿ ನವೆಂಬರ್ 28ರಿಂದ ಡಿಸೆಂಬರ್ 30ರವರೆಗೆ ರಸ್ತೆಯ ಒಂದು ಭಾಗವನ್ನು ಬಂದ್ ಮಾಡಲು ರೈಲ್ವೆ ಇಲಾಖೆ ಮನವಿ ಮಾಡಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯ ಒಂದು ಭಾಗವನ್ನು ನವೆಂಬರ್ 28 ರಿಂದ ಡಿಸೆಂಬರ್ 30, 2026 ರವರೆಗೆ ಒಟ್ಟು 33 ದಿನಗಳ ಕಾಲ ಮುಚ್ಚುವಂತೆ ನೈಋತ್ಯ ರೈಲ್ವೆ (SWR) ಬೆಂಗಳೂರು ಸಂಚಾರ ಪೊಲೀಸರಿಗೆ (BTP) ಪ್ರಸ್ತಾವನೆ ಸಲ್ಲಿಸಿದೆ.

ರೈಲ್ವೆ ಇಲಾಖೆಯ ಈ ನಿರ್ಧಾರಕ್ಕೆ ನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲ್ವೆ ಸೇತುವೆ ಸಂಖ್ಯೆ 535ರ ಅಗಲೀಕರಣ ಕಾಮಗಾರಿಗಾಗಿ ನವೆಂಬರ್ 28ರಿಂದ ಡಿಸೆಂಬರ್ 30ರವರೆಗೆ ರಸ್ತೆಯ ಒಂದು ಭಾಗವನ್ನು ಬಂದ್ ಮಾಡಲು ರೈಲ್ವೆ ಇಲಾಖೆ ಮನವಿ ಮಾಡಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಯ ಅಗಲವನ್ನು ಈಗಿರುವ 9.5 ಮೀಟರ್‌ನಿಂದ 18 ಮೀಟರ್‌ಗೆ ಹೆಚ್ಚಿಸಲಾಗುತ್ತದೆ.

ರಸ್ತೆ ಬಂದ್ ಮಾಡಲು ಬೆಂಗಳೂರು ಸಂಚಾರ ಪೊಲೀಸರಿಂದ ಇನ್ನೂ ಅನುಮತಿ ದೊರೆತಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಈ ನಡುವೆ, ರಸ್ತೆ ಅಗಲೀಕರಣದ ಪ್ರಸ್ತಾವನೆಯನ್ನು ಸ್ವಾಗತಿಸಿರುವ ಸ್ಥಳೀಯರು, ಕಾಮಗಾರಿ ನಡೆಯುವ ಅವಧಿಯಲ್ಲಿ ಸಂಚಾರಕ್ಕೆ ಉಂಟಾಗುವ ಅಡಚಣೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ಕೆಲಸಕ್ಕೆ ತೆರಳಲು ಇದೇ ರಸ್ತೆಯನ್ನು ಬಳಸುವ ಕ್ಯಾಲಸನಹಳ್ಳಿಯ ನಿವಾಸಿ ನಾಥನ್ ಟಿ. ಅವರು ಮಾತನಾಡಿ, ಈ ರಸ್ತೆ ಸದಾ ಸಂಚಾರ ದಟ್ಟಣೆಯ ಪ್ರಮುಖ ಕೇಂದ್ರವಾಗಿದೆ. ರಸ್ತೆ ಅಗಲೀಕರಣ ಉತ್ತಮ ನಿರ್ಧಾರ. ಆದರೆ, ಈ ಮಾರ್ಗ ಬಂದ್ ಆಗಿರುವ ಅವಧಿಯಲ್ಲಿ ವಾಹನ ಸವಾರರಿಗೆ ಪರ್ಯಾಯ ರಸ್ತೆ ಅಥವಾ ಮಾರ್ಗ ಕಲ್ಪಿಸಬೇಕು. ನನ್ನ ತಿಳಿವಳಿಕೆಯಂತೆ ತಣಿಸಂದ್ರ ಮುಖ್ಯರಸ್ತೆ ಮಾತ್ರ ಪರ್ಯಾಯ ಮಾರ್ಗವಾಗಿದೆ.

ಈಗಾಗಲೇ ಅಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಹೆಚ್ಚುವರಿ ವಾಹನಗಳ ಸಂಚಾರವನ್ನು ನಿಭಾಯಿಸಲು ಸಾಧ್ಯವಿಲ್ಲ. ಕಾಮಗಾರಿ ಸ್ಥಳವನ್ನು ಬದಿಗೊತ್ತಿ ಸಾಗುವ ತಾತ್ಕಾಲಿಕ ರಸ್ತೆಯ ನಿರ್ಮಾಣದ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದ್ದಾರೆ.

ಹೊರಮಾವು ನಿವಾಸಿ ಪೀಟರ್ ಪ್ರೇಮ್‌ಸಿಂಗ್ ಅವರು ಮಾತನಾಡಿ, ಕಾಮಗಾರಿ ಅವಧಿಯಲ್ಲಿ ಕೊತ್ತನೂರು, ಹೊರಮಾವು ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ತಲುಪಲು ಎದುರಾಗುವ ತೊಂದರೆ ಮತ್ತು ಹೆಚ್ಚುವರಿ ಪ್ರಯಾಣದ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ 30 ನಿಮಿಷಗಳಲ್ಲಿ ತಲುಪಬಹುದಾದ ಸ್ಥಳಕ್ಕೆ, ಇತ್ತೀಚೆಗೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯಿಂದಾಗಿ ಒಂದೂವರೆ ಗಂಟೆ ಬೇಕಾಯಿತು. ಆಗ ಈ ರಸ್ತೆ ಬಂದ್ ಆಗಿರಲಿಲ್ಲ. ಈಗಾಗಲೇ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ಸುಗಮವಾಗಬಹುದು. ಆದರೆ, ಪರ್ಯಾಯ ಮಾರ್ಗಗಳು ಮತ್ತು ಸಂಚಾರ ಬದಲಾವಣೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ಮಲ್ಲಪ್ಪ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಹಾಗೂ ಸ್ಥಳೀಯ ನಿವಾಸಿ ಶ್ರೀಕಾಂತ್ ಮಾತನಾಡಿ, ಇದು ಮಹತ್ವದ ಮೂಲಸೌಕರ್ಯ ಯೋಜನೆಯಾದರೂ, ಸಂಚಾರ ನಿರ್ವಹಣೆಗೆ ಸೂಕ್ತ ಯೋಜನೆ ರೂಪಿಸದಿದ್ದರೆ 33 ದಿನಗಳ ರಸ್ತೆ ಬಂದ್‌ನಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಲಿದೆ.

ಹೆಣ್ಣೂರು, ಬಾಗಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವೆ ಪ್ರತಿದಿನ ಸಂಚರಿಸುವವರು, ಶಾಲಾ ಬಸ್‌ಗಳು, ಕಚೇರಿಗಳ ವಾಹನಗಳು ಹಾಗೂ ಸ್ಥಳೀಯ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರಬಹುದು. ಬಿಎಂಟಿಸಿ ಬಸ್‌ಗಳ ಮಾರ್ಗವನ್ನೂ ಬದಲಿಸಬೇಕಾಗಬಹುದು. ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ಹೇಳಿದ್ದಾರೆ.

ಯೋಜನೆಯಿಂದ ರಸ್ತೆಯ ಅಗಲ 9.5 ಮೀಟರ್‌ನಿಂದ 18 ಮೀಟರ್‌ಗೆ ಹೆಚ್ಚಲಿದ್ದು, ದೀರ್ಘಾವಧಿಯಲ್ಲಿ ವಾಹನ ಸಂಚಾರ ಸುಗಮವಾಗಲಿದೆ. ಆದರೆ, ಪರ್ಯಾಯ ಮಾರ್ಗಗಳು, ಬಸ್‌ಗಳ ಸಂಚಾರ ಬದಲಾವಣೆ, ತುರ್ತು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಹಾಗೂ ಕಾಮಗಾರಿ ಪೂರ್ಣಗೊಳಿಸುವ ನಿಗದಿತ ದಿನಾಂಕದ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬದಲಾಗುತ್ತಿರುವ ಭಾರತದ ಆರ್ಥಿಕ ಪಯಣಕ್ಕೆ ಹೊಸ ಕನ್ನಡಿ; ವಾಣಿಜ್ಯ ಪತ್ರಿಕೋದ್ಯಮಕ್ಕೆ The New Indian Express ಹೊಸ ಕೊಡುಗೆ, 'The Financial Standard' ಲೋಕಾರ್ಪಣೆ

'ಬರೀ ಮಾತು ಸಾಕು, ಒಪ್ಪಂದಕ್ಕೆ ಬನ್ನಿ; ಸವಾಲು ಹಾಕಿದರೆ ಸಮುದ್ರದ ತಳ ಸೇರುತ್ತೀರಿ': ಇರಾನ್ ಸಂಧಾನಕಾರರಿಗೆ ಟ್ರಂಪ್ ಎಚ್ಚರಿಕೆ, ಮಾತುಕತೆ ವಿಫಲವಾದರೆ ಮತ್ತೆ ದಾಳಿ..!

ಅಮೆರಿಕದಲ್ಲಿ ಬಂದೂಕು ಧಾರಿಗಳಿಂದ 2 ಪ್ರತ್ಯೇಕ ಗುಂಡಿನ ದಾಳಿ: ಓಹಿಯೋದಲ್ಲಿ ಮೂವರು ಬಲಿ, ಕ್ಯಾಲಿಫೋರ್ನಿಯಾದಲ್ಲಿ 9 ಜನರಿಗೆ ಗಾಯ..!

Asia Cup Rising Stars 2026: ಡಕೌಟ್ ಆದ ಹರ್ಷಿತ್ ರಾಣಾ ಕೆಣಕಿದ ಪಾಕ್ ಬೌಲರ್, ಮೈದಾನದಲ್ಲಿ ಮಾತಿನ ಚಕಮಕಿ, Video

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!