ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಅಪಘಾತ ತಡೆಗೆ ರಾಜ್ಯ ಸರ್ಕಾರ ಹೆಜ್ಜೆ: ರಸ್ತೆಗಳಲ್ಲಿ AI ಸ್ಮಾರ್ಟ್ ಕ್ಯಾಮೆರಾಗಳ ಕಣ್ಗಾವಲು!

ರಾಜ್ಯದ ಆಯ್ದ 87 ಅಪಘಾತ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಸಂಗ್ರಹ ಚಿತ್ರ
Manjula VN
Updated On : 24 Nov 2026, 8:48 am

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕಲು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆಹಚ್ಚಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದ ಆಯ್ದ 87 ಅಪಘಾತ ವಲಯಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 24ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುತಿಸಿರುವ 87 ಸ್ಥಳಗಳ ಪೈಕಿ ಈಗಾಗಲೇ 27 ಕಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 20 ಸ್ಥಳಗಳಲ್ಲಿ ಇ-ಚಲನ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ 6,500 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

Advertisement

Advertisement

ಉಳಿದ 60 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುತಿಸಿರುವ ಅಪಘಾತ ಸಂಭವಿಸುವ ಅಪಾಯಕಾರಿ ಸ್ಥಳಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿಯ ಸುಧಾರಣಾ ಕಾಮಗಾರಿಗಳನ್ನೂ ತ್ವರಿತಗೊಳಿಸಲಾಗುತ್ತಿದೆ ಎಂದರು.

Also Read

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ Japan ಮಾದರಿ ಪರಿಹಾರ; ರಾಜ್ಯದಲ್ಲಿ ವಿಶೇಷ ಟ್ಯಾಕ್ಸಿ ಪರಿಚಯಿಸಲು ಡಿಕೆಶಿ ಚಿಂತನೆ..!

ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದರೂ, ಪ್ರತಿ 10 ಸಾವಿರ ವಾಹನಗಳಿಗೆ ಸಂಭವಿಸುವ ಅಪಘಾತಗಳ ಪ್ರಮಾಣ ಶೇ 27ರಷ್ಟು ಇಳಿಕೆಯಾಗಿದೆ. 2018ರಲ್ಲಿ ಈ ಪ್ರಮಾಣ 17.28ರಷ್ಟಿದ್ದರೆ, 2025ರಲ್ಲಿ 12.56ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಸಾವಿನ ಪ್ರಮಾಣವೂ ಶೇ 21ರಷ್ಟು ಇಳಿಕೆಯಾಗಿದ್ದು, 4.55ರಿಂದ 3.59ಕ್ಕೆ ತಗ್ಗಿದೆ ಎಂದು ವಿವರಿಸಿದರು.

2026ರ ಜನವರಿಯಿಂದ ಅಕ್ಟೋಬರ್‌ವರೆಗೆ ರಾಜ್ಯದಲ್ಲಿ 37,443 ರಸ್ತೆ ಅಪಘಾತಗಳು ಸಂಭವಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ 220ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ರಾಹತ್ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಗಳಡಿ ಅಪಘಾತದ ಸಂತ್ರಸ್ತರು ₹2.5 ಲಕ್ಷದವರೆಗೆ ನಗದುರಹಿತ ಚಿಕಿತ್ಸೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಗಳಡಿ 3,445 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ನೋಂದಣಿಯಾಗಿವೆ.

ಇದಲ್ಲದೆ, 100 ಹೊಸ ಮೂಲಭೂತ ಜೀವ ರಕ್ಷಕ ಆಂಬುಲೆನ್ಸ್‌ಗಳ ಖರೀದಿ ಪ್ರಕ್ರಿಯೆಯನ್ನೂ ಸರ್ಕಾರ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಅವುಗಳನ್ನು ಸೇವೆಗೆ ನಿಯೋಜಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement