ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ರಾಜ್ಯದ ನಿರಾಶ್ರಿತರ ಕೇಂದ್ರಗಳಲ್ಲಿ ಹೊರರಾಜ್ಯದವರದ್ದೇ ಸಿಂಹಪಾಲು: 42% ವಲಸಿಗ ಭಿಕ್ಷುಕರ ಹೊರೆ ಹೊತ್ತ ಕರ್ನಾಟಕ, ನಿರ್ವಹಣೆಗೆ ರಾಜ್ಯ ಸರ್ಕಾರ ಹೈರಾಣ..!

ರಾಜ್ಯದಲ್ಲಿ ಭಿಕ್ಷಾಟನೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಪರಿಹಾರ ಸಮಿತಿ (ಸಿಆರ್‌ಸಿ) ಅಡಿಯಲ್ಲಿ 15 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಸಂಗ್ರಹ ಚಿತ್ರ
Manjula VN
Updated On : 25 Nov 2026, 8:12 am

ಬೆಂಗಳೂರು: ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದಲ್ಲಿ ಭಿಕ್ಷಾಟನೆ ಸಮಸ್ಯೆ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ರಾಜ್ಯದ 15 ಭಿಕ್ಷುಕರ ಪುನರ್ವಸತಿ ಕೇಂದ್ರಗಳಲ್ಲಿ ಸುಮಾರು 4 ಸಾವಿರ ಮಂದಿ ಆಶ್ರಯ ಪಡೆದಿದ್ದು, ಅವರಲ್ಲಿ ಶೇ.42ರಷ್ಟು ಮಂದಿ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಆದರೆ, ಈ ಕೇಂದ್ರಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದಿರುವುದರಿಂದ ಊಟ, ವಸತಿ, ಆರೋಗ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವುದೇ ದೊಡ್ಡ ಸವಾಲಾಗಿದೆ.

ರಾಜ್ಯದಲ್ಲಿ ಭಿಕ್ಷಾಟನೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಪರಿಹಾರ ಸಮಿತಿ (ಸಿಆರ್‌ಸಿ) ಅಡಿಯಲ್ಲಿ 15 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ, ವಿಶೇಷವಾಗಿ ನೆರೆಯ ರಾಜ್ಯಗಳಿಂದ ಬಂದಿರುವ ನಿವಾಸಿಗಳಿಗೆ ಆಹಾರ, ಆಶ್ರಯ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಮಿತಿ ಪರದಾಡುತ್ತಿದೆ.

ಕೇಂದ್ರ ಪರಿಹಾರ ಸಮಿತಿಯು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿರುವ ಅಂಕಿಅಂಶಗಳ ಪ್ರಕಾರ, ಈ 15 ಪುನರ್ವಸತಿ ಕೇಂದ್ರಗಳಲ್ಲಿ ಪ್ರಸ್ತುತ 3,781 ಮಂದಿ ಆಶ್ರಯ ಪಡೆದಿದ್ದಾರೆ. ಈ ಪೈಕಿ 1,562 ಮಂದಿ ಕರ್ನಾಟಕದ ಹೊರಗಿನವರು. 2026ರ ಅಕ್ಟೋಬರ್ 31ರ ಮಾಹಿತಿಯಂತೆ ತಮಿಳುನಾಡಿನ 224 ಮಂದಿ, ಕೇರಳದ 50 ಮಂದಿ, ಆಂಧ್ರಪ್ರದೇಶದ 211 ಮಂದಿ ಹಾಗೂ ಮಹಾರಾಷ್ಟ್ರದ 151 ಮಂದಿ ಕೇಂದ್ರಗಳಲ್ಲಿದ್ದಾರೆ. ಉಳಿದವರು ಉತ್ತರ ಭಾರತ ಸೇರಿದಂತೆ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆಂದು ತಿಳಿದುಬಂದಿದೆ.

Advertisement

Advertisement

ನೆರೆಯ ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ಬಳ್ಳಾರಿ, ಮೈಸೂರು, ದಕ್ಷಿಣ ಕನ್ನಡ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳ ಪುನರ್ವಸತಿ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಹೊರರಾಜ್ಯದ ನಿವಾಸಿಗಳಿದ್ದಾರೆ.

ಈ ಪುನರ್ವಸತಿ ಕೇಂದ್ರಗಳಿಗೆ ಸುಮಾರು 240 ಕೋಟಿ ರೂ. ಅನುದಾನ ಬಾಕಿ ಉಳಿದಿದೆ. ಭಿಕ್ಷಾಟನೆ ನಿರ್ಮೂಲನಾ ಸೆಸ್‌ನ್ನೇ ನಾವು ಸಂಪೂರ್ಣವಾಗಿ ಅವಲಂಬಿಸಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ.3ರಷ್ಟನ್ನು ಈ ಸೆಸ್ ರೂಪದಲ್ಲಿ ನೀಡಬೇಕು. ಆದರೆ, ಈ ಸಂಸ್ಥೆಗಳಿಂದ ಸುಮಾರು 240 ಕೋಟಿ ರೂ. ಸೆಸ್ ಬಾಕಿ ಬಿಡುಗಡೆಯಾಗಬೇಕಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಲಭ್ಯವಿರುವ ಸೀಮಿತ ಅನುದಾನದಲ್ಲೇ 15 ಕೇಂದ್ರಗಳ ನಿವಾಸಿಗಳಿಗೆ ಆಹಾರ, ಆರೋಗ್ಯ ಸೇವೆ, ಸ್ವಚ್ಛತೆ, ವಸತಿ, ಪುನರ್ವಸತಿ ಕಾರ್ಯಕ್ರಮಗಳು ಹಾಗೂ ಸಿಬ್ಬಂದಿಯ ವೇತನವನ್ನು ನಿರ್ವಹಿಸಬೇಕಾಗಿದೆ. ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ನಿವಾಸಿಗೂ ಕೇಂದ್ರ ಪರಿಹಾರ ಸಮಿತಿಯು 75 ರೂ. ಪ್ರೋತ್ಸಾಹಧನ ನೀಡುತ್ತಿದೆ.

ಕೆಲವರಿಗೆ ಆರೋಗ್ಯ ಸಮಸ್ಯೆ ಮತ್ತು ಅಪೌಷ್ಟಿಕತೆ ಇರುವುದರಿಂದ ಮೊಟ್ಟೆ ಹಾಗೂ ಬಾಳೆಹಣ್ಣುಗಳನ್ನೂ ನೀಡಲಾಗುತ್ತಿದೆ. ಈಗಾಗಲೇ ಸೀಮಿತ ಸಂಪನ್ಮೂಲಗಳೊಂದಿಗೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಇಲಾಖೆಯ ಮೂಲವೊಂದು ಹೇಳಿದೆ.

Also Read

ಸನ್ಯಾಸಿಯಾಗಿ ಮನೆಗೆ ಬಂದು ತಾಯಿಯ ಬಳಿಯೇ ಭಿಕ್ಷೆ ಬೇಡಿದ ಯೋಗಿ ಆದಿತ್ಯನಾಥ್: ಭಾವುಕ ಪತ್ರದಲ್ಲಿ ಅಪರೂಪದ ಕ್ಷಣ ನೆನಪು

ಹೊರರಾಜ್ಯಗಳಿಂದ ಬಂದಿರುವ 1,500ಕ್ಕೂ ಹೆಚ್ಚು ಮಂದಿಯ ಆರೈಕೆಯ ಹೊಣೆಯೂ ನಮ್ಮ ಮೇಲಿದೆ. ತಾಂತ್ರಿಕವಾಗಿ ಇವರು ನಮ್ಮ ಜವಾಬ್ದಾರಿಯ ವ್ಯಾಪ್ತಿಗೆ ಬರದಿರಬಹುದು. ಆದರೆ ಅವರನ್ನು ವಾಪಸ್ ಕಳುಹಿಸಲು ಸಾಧ್ಯವಿಲ್ಲ. ಅಗತ್ಯವಿರುವ ಎಲ್ಲರಿಗೂ ಆರೈಕೆ ಮತ್ತು ಪುನರ್ವಸತಿ ಒದಗಿಸುವುದೇ ಕೇಂದ್ರ ಪರಿಹಾರ ಸಮಿತಿಯ ಉದ್ದೇಶ ಎಂದು ಮೂಲಗಳು ತಿಳಿಸಿವೆ.

ಹಣಕಾಸಿನ ಸಮಸ್ಯೆಯಷ್ಟೇ ಅಲ್ಲದೆ, ನೆರೆಯ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಭಿಕ್ಷಾಟನೆ ನಡೆಸುವವರನ್ನು ಗುರುತಿಸಿ ಪುನರ್ವಸತಿ ಕೇಂದ್ರಗಳಿಗೆ ಕರೆತರುವುದು ಕೂಡ ಅಧಿಕಾರಿಗಳಿಗೆ ಸವಾಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಜನರು ಭಿಕ್ಷಾಟನೆಗಾಗಿ ಕರ್ನಾಟಕಕ್ಕೆ ಬರುತ್ತಾರೆ. ಹಗಲಿನಲ್ಲಿ ಇಲ್ಲಿ ಭಿಕ್ಷೆ ಬೇಡಿ ರಾತ್ರಿ ತಮ್ಮ ಊರುಗಳಿಗೆ ಹಿಂದಿರುಗುತ್ತಾರೆ. ಹೀಗಾಗಿ ಅವರನ್ನು ಗುರುತಿಸಿ ವಶಕ್ಕೆ ಪಡೆಯುವುದು ಕಷ್ಟವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಲಕ್ರಮೇಣ ಭಿಕ್ಷಾಟನೆಯ ವಿಧಾನಗಳೂ ಬದಲಾಗಿವೆ. ಈಗ ಅನೇಕರು ಆಹಾರಕ್ಕಾಗಿ ಬೇಡುವ ಬದಲು ಹಣ ಪಡೆಯಲು ಕ್ಯೂಆರ್ ಕೋಡ್‌ಗಳನ್ನು ಬಳಸುತ್ತಿದ್ದಾರೆ. ಇನ್ನು ಕೆಲವರು ಪೆನ್ನು, ಹೂವುಗಳನ್ನು ಮಾರುವವರಂತೆ ನಟಿಸುತ್ತಾರೆ ಅಥವಾ ಜಾನುವಾರುಗಳನ್ನು ಜೊತೆಯಲ್ಲಿ ಕರೆತಂದು ಭಿಕ್ಷೆ ಬೇಡುತ್ತಾರೆ. ಅವರ ಜೀವನಶೈಲಿ ಹಾಗೂ ಸ್ವಂತ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ಹಿನ್ನೆಲೆ ಪರಿಶೀಲನೆ ನಡೆಸುವುದೂ ಕಷ್ಟವಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.

1944ರಲ್ಲಿ ಅಂದಿನ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಬಹದ್ದೂರ್ ಅವರು ರಾಜ್ಯದಲ್ಲಿ ಭಿಕ್ಷಾಟನೆ ತಡೆಯುವ ಉದ್ದೇಶದಿಂದ 300 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು. ಇದೇ ಜಮೀನಿನಲ್ಲಿ ಪ್ರಸ್ತುತ ಕೇಂದ್ರ ಪರಿಹಾರ ಸಮಿತಿಯ ಪುನರ್ವಸತಿ ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈಗ ಈ ಕೇಂದ್ರಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ.

ಇಂದೋರ್ ಜಿಲ್ಲೆ ತನ್ನನ್ನು ಭಿಕ್ಷಾಟನೆ ಮುಕ್ತ ಜಿಲ್ಲೆ ಎಂದು ಘೋಷಿಸಿಕೊಂಡಿದೆ. ಅದೇ ರೀತಿಯ ಸಾಧನೆ ಮಾಡುವ ಗುರಿ ನಮಗೂ ಇದೆ. ಆದರೆ ಹೊರರಾಜ್ಯಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರತ್ಯೇಕ ಸೌಲಭ್ಯವಿಲ್ಲದೆ ತೃತೀಯ ಲಿಂಗಿಗಳಿಗೆ ಆಶ್ರಯ ನೀಡಲು ತೊಡಕು

ಈ ನಡುವೆ ಇರುವ ಪುನರ್ವಸತಿ ಕೇಂದ್ರಗಳಲ್ಲಿ ತೃತೀಯ ಲಿಂಗಿಗಳಿಗೆ ಆಶ್ರಯ ಕಲ್ಪಿಸುವುದೂ ಅಧಿಕಾರಿಗಳಿಗೆ ಮತ್ತೊಂದು ಸವಾಲಾಗಿದೆ.

ಪ್ರತ್ಯೇಕ ವಸತಿ ಸೌಲಭ್ಯಗಳಿಲ್ಲದ ಕಾರಣ ಅವರನ್ನು ಇತರ ನಿವಾಸಿಗಳೊಂದಿಗೆ ಇರಿಸಲು ಸಾಧ್ಯವಾಗುತ್ತಿಲ್ಲ. ಅವರಲ್ಲಿ ಹಲವರು ಹೊರರಾಜ್ಯಗಳಿಂದ ಬಂದವರೇ ಆಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement