Cauvery-Vaigai-Gundar ನದಿ ಜೋಡಣೆ ಯೋಜನೆ: ತಮಿಳುನಾಡು ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ
ರಾಜ್ಯದಿಂದ ಹರಿದುಹೋಗುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಮಿಳುನಾಡು ಏಕಪಕ್ಷೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ, ಯೋಜನೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ.
ಬೆಂಗಳೂರು/ನವದೆಹಲಿ: ತಮಿಳುನಾಡು ಕೈಗೆತ್ತಿಕೊಂಡಿರುವ 'ಕಾವೇರಿ–ವೈಗೈ–ಗುಂಡಾರ್(CVG) ನದಿ ಜೋಡಣೆ ಯೋಜನೆ'ಯ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಕೋರಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹೊಸ ಮಧ್ಯಂತರ ಅರ್ಜಿ ಸಲ್ಲಿಸಿದೆ. '
ರಾಜ್ಯದಿಂದ ಹರಿದುಹೋಗುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಮಿಳುನಾಡು ಏಕಪಕ್ಷೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ, ಯೋಜನೆಯ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ತಮಿಳುನಾಡು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದೆ.
2021ರಲ್ಲಿ ಸಲ್ಲಿಸಿದ್ದ ಮೂಲ ಅರ್ಜಿಯ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಕರ್ನಾಟಕ ಈ ಹೊಸ ಮನವಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
ಡಿಸೆಂಬರ್ 10ರಿಂದ 12ರ ನಡುವಿನ ಅವಧಿಯಲ್ಲಿ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಹಿರಿಯ ವಕೀಲ ಮೋಹನ್ ವಿ. ಕಟಾರ್ಕಿ ಮತ್ತು ರಾಜ್ಯದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು ಅರ್ಜಿಯನ್ನು ಸಿದ್ಧಪಡಿಸಿದ್ದು, ವಕೀಲ ನಿಶಾಂತ್ ಪಾಟೀಲ್ ಮೂಲಕ ಸಲ್ಲಿಸಲಾಗಿದೆ.
2021ರ ಜನವರಿ 5ರಂದು ತಮಿಳುನಾಡು ಈ ಯೋಜನೆಗೆ ತಾತ್ವಿಕ ಅನುಮತಿ ಮತ್ತು ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಕೋರಿ ಅರ್ಜಿ ಸಲ್ಲಿಸಿತ್ತು ಎಂದು ಕರ್ನಾಟಕ ತಿಳಿಸಿದೆ. ಈ ಹಿಂದೆ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 2025ರ ಜನವರಿ 20ರಂದು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿತ್ತು. ಕೇಂದ್ರ ಸರ್ಕಾರವು ಯೋಜನೆಗೆ ಯಾವುದೇ ಅನುಮತಿ ನೀಡಿಲ್ಲ ಮತ್ತು ಮಧ್ಯಂತರ ಪರಿಹಾರದ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಹಿನ್ನೆಲೆಯಲ್ಲಿ ಆ ಅರ್ಜಿ ವಿಲೇವಾರಿಯಾಗಿತ್ತು.
ಆದರೆ, 2024ರ ಆಗಸ್ಟ್ 1ರಂದು ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ ನೀಡಿದ್ದ ಆದೇಶವನ್ನು ಪರಿಶೀಲಿಸಿದ ಬಳಿಕ ಪರಿಸ್ಥಿತಿ ಬದಲಾಗಿರುವುದು ಗಮನಕ್ಕೆ ಬಂದಿದೆ ಎಂದು ಕರ್ನಾಟಕ ಹೇಳಿದೆ.
ಆ ಆದೇಶದಲ್ಲಿ ಉಲ್ಲೇಖವಾಗಿದ್ದ ತಮಿಳುನಾಡು ಸರ್ಕಾರದ ಸ್ಥಿತಿಗತಿ ವರದಿಯ ಪ್ರಕಾರ, ಮೊದಲ ಹಂತದ ಕೆಲವು ಕಾಮಗಾರಿಗಳು 2021ರ ಜನವರಿ 21ರಿಂದಲೇ ನಡೆಯುತ್ತಿವೆ ಎಂದು ತಿಳಿಸಲಾಗಿದೆ.
ಕರ್ನಾಟಕದ ಪ್ರಕಾರ, ಮೊದಲ ಹಂತದ ಹಲವು ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಕಾಮಗಾರಿಗಳಿಗಾಗಿ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಸಂಗತಿಗಳನ್ನು ತಮಿಳುನಾಡು ಈ ಹಿಂದೆ ಸುಪ್ರೀಂ ಕೋರ್ಟ್ನ ಗಮನಕ್ಕೆ ತಂದಿರಲಿಲ್ಲ ಎಂದು ಕರ್ನಾಟಕ ಆರೋಪಿಸಿದೆ.
ಕೇಂದ್ರ ಸರ್ಕಾರದ ಅನುಮತಿ ಇಲ್ಲದೆ ತಮಿಳುನಾಡು ಈ ಯೋಜನೆಯ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂಬುದು ಕರ್ನಾಟಕದ ವಾದವಾಗಿದೆ. ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ 2025ರ ಮಾರ್ಚ್ 10 ಮತ್ತು ಸೆಪ್ಟೆಂಬರ್ 9ರಂದು ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಕಾಮಗಾರಿಗಳು ಮುಂದುವರಿದಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಯೋಜನೆಗೆ ಮೆಟ್ಟೂರು ಅಣೆಕಟ್ಟಿನಲ್ಲಿ ಶೇ. 50ರಷ್ಟು ವಿಶ್ವಾಸಾರ್ಹತೆಯ ಆಧಾರದಲ್ಲಿ ಸುಮಾರು 8.60 ಟಿಎಂಸಿ ಅಡಿ ಹೆಚ್ಚುವರಿ ನೀರು ಲಭ್ಯವಾಗಲಿದೆ ಎಂದು ತಮಿಳುನಾಡು ಅಂದಾಜಿಸಿದೆ. ಆದರೆ, ಕರ್ನಾಟಕದ ಪ್ರದೇಶದಿಂದ ಹರಿದುಬರುವ ಹೆಚ್ಚುವರಿ ನೀರನ್ನು ತಮಿಳುನಾಡು ಏಕಪಕ್ಷೀಯವಾಗಿ ಬಳಸಿಕೊಂಡರೆ, ಭವಿಷ್ಯದಲ್ಲಿ ಅದನ್ನೇ ಆಧಾರವಾಗಿಟ್ಟುಕೊಂಡು ನೀರಿನ ಹಂಚಿಕೆಯಲ್ಲಿ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಇದರಿಂದ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗಬಹುದು ಎಂಬ ಆತಂಕವನ್ನು ರಾಜ್ಯ ವ್ಯಕ್ತಪಡಿಸಿದೆ.
ಮೊದಲ, ಎರಡನೇ ಮತ್ತು ಮೂರನೇ ಹಂತದ ಕಾಮಗಾರಿಗಳಿಗೆ ತಡೆ ನೀಡುವುದರ ಜೊತೆಗೆ, ಮೊದಲ ಹಂತದಲ್ಲಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳನ್ನು ತೆರವುಗೊಳಿಸುವಂತೆಯೂ ಕರ್ನಾಟಕ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಅಲ್ಲದೆ, ಯೋಜನೆಗೆ ತಾತ್ವಿಕ ಅನುಮತಿ ನೀಡುವ ಅಥವಾ ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಘೋಷಿಸುವ ಸಂಬಂಧ ತಮಿಳುನಾಡಿನ 2021ರ ಮನವಿಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಬೇಕೆಂದು ಕೋರಿದೆ.