ಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ; ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ಕೇಂದ್ರ ಗೃಹ ಸಚಿವಾಲಯ ಮತ್ತು ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ ನಿರ್ದೇಶನಗಳ ಮೇರೆಗೆ 10 ಮಂದಿಯನ್ನು ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ.
ಉಡುಪಿ: ಭಾರತದಲ್ಲಿ ಅನಧಿಕೃತವಾಗಿ ನೆಲೆಸಿದ್ದಕ್ಕಾಗಿ ಜೈಲು ಶಿಕ್ಷೆಯನ್ನು ಪೂರೈಸಿದ ಬಾಂಗ್ಲಾದೇಶದ ಹತ್ತು ಪ್ರಜೆಗಳನ್ನು ಅವರ ದೇಶಕ್ಕೆ ಕಳುಹಿಸುವ ಪ್ರಕ್ರಿಯೆಯ ಭಾಗವಾಗಿ ಕರ್ನಾಟಕ ಪೊಲೀಸರು ಪಶ್ಚಿಮ ಬಂಗಾಳದ ಮಾಲ್ಡಾಗೆ ಎಲ್ಲರನ್ನು ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಮತ್ತು ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ನೀಡಿದ ನಿರ್ದೇಶನಗಳ ಮೇರೆಗೆ 10 ಮಂದಿಯನ್ನು ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ.
ಈ ವ್ಯಕ್ತಿಗಳನ್ನು ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸುವ ಸಲುವಾಗಿ, ಮಾಲ್ಡಾದಲ್ಲಿರುವ ಗಡಿ ಭದ್ರತಾ ಪಡೆಯ (BSF) ಕಮಾಂಡೆಂಟ್ ಮತ್ತು ನೋಡಲ್ ಅಧಿಕಾರಿಯ ವಶಕ್ಕೆ ಒಪ್ಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ, ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಡಭಂಡೇಶ್ವರ ಬಸ್ ನಿಲ್ದಾಣದ ಬಳಿ ಈ 10 ವಿದೇಶಿ ಪ್ರಜೆಗಳು ಸಂಶಯಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು, ಅಕ್ಟೋಬರ್ 11, 2024 ರಂದು ಅವರನ್ನು ವಶಕ್ಕೆ ಪಡೆದಿದ್ದರು.
ನಂತರ ನಡೆಸಿದ ವಿಚಾರಣೆಗಳಲ್ಲಿ ಅವರು ಯಾವುದೇ ಅಧಿಕೃತ ದಾಖಲೆಗಳನ್ನು ಹೊಂದಿಲ್ಲದಿರುವುದು ದೃಢಪಟ್ಟಿತು; ಇದರ ಪರಿಣಾಮವಾಗಿ ಪ್ರಕರಣ ದಾಖಲಿಸಲಾಯಿತು ಮತ್ತು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲಾಯಿತು.
8 ಡಿಸೆಂಬರ್ 2025 ರಂದು, ಸ್ಥಳೀಯ ನ್ಯಾಯಾಲಯ ಈ 10 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿ, ಪ್ರತಿಯೊಬ್ಬರಿಗೂ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ₹10,000 ದಂಡ ವಿಧಿಸಿತು.
ಉಡುಪಿ ಜಿಲ್ಲಾ ಕಾರಾಗೃಹ ಮತ್ತು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ ಅವರು, ಈ ವರ್ಷದ ಅಕ್ಟೋಬರ್ 10 ರಂದು ತಮ್ಮ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದರು.
ಉಡುಪಿ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮೇಲ್ವಿಚಾರಣೆಯಲ್ಲಿ, ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ಪೊಲೀಸ್ ತಂಡ ನವೆಂಬರ್ 23 ರಂದು ಈ ವ್ಯಕ್ತಿಗಳೊಂದಿಗೆ ಉಡುಪಿಯಿಂದ ಹೊರಟಿತು.
ಹಸ್ತಾಂತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು, ಈ ಗುಂಪನ್ನು ಸದ್ಯ ರೈಲಿನ ಮೂಲಕ ಬೆಂಗಳೂರಿನಿಂದ ಮಾಲ್ಡಾಗೆ ಕರೆದೊಯ್ಯಲಾಗುತ್ತಿದೆ.