ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ದಕ್ಷಿಣ ಕನ್ನಡ ರಾಜ್ಯದ GDP ಗೆ 2ನೇ ಅತಿ ಹೆಚ್ಚು ಕೊಡುಗೆ ನೀಡುವ ಜಿಲ್ಲೆ; ಪ್ರಾದೇಶಿಕ ಅಭಿವೃದ್ಧಿಗೆ 6,000 ಕೋಟಿ ರೂ. ಹೂಡಿಕೆ ಗುರಿ; ಪ್ರಿಯಾಂಕ್ ಖರ್ಗೆ; Video

ಮಂಗಳೂರಿನಲ್ಲಿ ಡೆಲಾಯ್ಟ್ ಸಂಸ್ಥೆಯ ಭಾರತದ 27ನೇ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಪ್ರದೇಶದಲ್ಲಿ ಹೂಡಿಕೆ ಮಾಡುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವರಿರುವ ಪ್ರದೇಶದಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ಯಮ ವಲಯದ ಪ್ರಮುಖರಿಗೆ ಕರೆ ನೀಡಿದರು.

ಪ್ರಿಯಾಂಕ್ ಖರ್ಗೆ
Sumana Upadhyaya
Updated On : 26 Nov 2026, 11:27 am

ಮಂಗಳೂರು: ಬೆಂಗಳೂರು ಕರ್ನಾಟಕದ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ, ರಾಜ್ಯ ಸರ್ಕಾರ ಕರಾವಳಿ ಭಾಗದತ್ತಲೂ ಬಹುರಾಷ್ಟ್ರೀಯ ಮತ್ತು ಇತರ ಪ್ರಮುಖ ಕಂಪೆನಿಗಳು ಗಮನಹರಿಸಬೇಕೆಂದು ಬಯಸಿದೆ. ಸುಸ್ಥಾಪಿತ ಶಿಕ್ಷಣ ಸಂಸ್ಥೆಗಳು, ನುರಿತ ಉದ್ಯೋಗಿಗಳು ಹಾಗೂ ಉತ್ತಮ ಜೀವನಮಟ್ಟ ಹೊಂದಿರುವ ಮಂಗಳೂರನ್ನು ಆರ್ಥಿಕ ಬೆಳವಣಿಗೆಯ ಮತ್ತೊಂದು ಪ್ರಮುಖ ಕೇಂದ್ರವಾಗಿ ರೂಪಿಸಲು ಸರ್ಕಾರ ಉದ್ದೇಶಿಸಿದೆ.

ಮಂಗಳೂರಿನಲ್ಲಿ ಡೆಲಾಯ್ಟ್ ಸಂಸ್ಥೆಯ ಭಾರತದ 27ನೇ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಈ ಪ್ರದೇಶದಲ್ಲಿ ಹೂಡಿಕೆ ಮಾಡುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವರಿರುವ ಪ್ರದೇಶದಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ಯಮ ವಲಯದ ಪ್ರಮುಖರಿಗೆ ಕರೆ ನೀಡಿದರು.

Also Read

ಸ್ವಾವಲಂಬನೆಗೆ ದಾರಿಯಾಯ್ತು 'ಗೃಹಲಕ್ಷ್ಮಿ ಯೋಜನೆ' ಹಣ: ಜವಳಿ ಉದ್ಯಮ ಆರಂಭಿಸಿದ ಮಂಗಳೂರು ಮೂಲದ ಮಹಿಳೆ!

ಬೆಂಗಳೂರು ನಂತರ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ಜಿಡಿಪಿಗೆ ಎರಡನೇ ಅತಿ ಹೆಚ್ಚು ಕೊಡುಗೆ ನೀಡುವ ಜಿಲ್ಲೆಯಾಗಿದೆ. ರಾಜ್ಯದ ಒಟ್ಟು ಜಿಡಿಪಿಯಲ್ಲಿ ಜಿಲ್ಲೆಯ ಪಾಲು ಶೇ. 5.3ರಷ್ಟಿದೆ. ಈ ಭಾಗದ ಆರ್ಥಿಕ ಸಾಮರ್ಥ್ಯ ಮತ್ತು ಪ್ರತಿಭಾನ್ವಿತ ಮಾನವ ಸಂಪನ್ಮೂಲವು ರಾಜ್ಯದ ಮುಂದಿನ ಹಂತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Advertisement

Advertisement

ಬೆಂಗಳೂರು ಹೊರತಾದ ಕರ್ನಾಟಕ (ಬಿಯಾಂಡ್ ಬೆಂಗಳೂರು) ಯೋಜನೆಯ ಮೂಲಕ ಪ್ರತಿಭೆಗಳು ಈಗಾಗಲೇ ಇರುವ ಸ್ಥಳಗಳಿಗೇ ಉದ್ಯೋಗಾವಕಾಶಗಳನ್ನು ಕೊಂಡೊಯ್ಯುವುದು ನಮ್ಮ ಉದ್ದೇಶ. ಪ್ರತಿಭೆಗಳು ಬೆಂಗಳೂರಿಗೆ ಬರುವಂತೆ ನಿರೀಕ್ಷಿಸುವುದಕ್ಕಿಂತ, ಅವರಿರುವ ಪ್ರದೇಶಗಳಲ್ಲೇ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಮಂಗಳೂರಿನಲ್ಲಿ ಕಚೇರಿ ಸ್ಥಾಪಿಸುವ ಡೆಲಾಯ್ಟ್ ಸಂಸ್ಥೆಯ ನಿರ್ಧಾರವನ್ನು ಶ್ಲಾಘಿಸಿದ ಅವರು, ರಾಜ್ಯ ಸರ್ಕಾರದ ಪ್ರಾದೇಶಿಕ ಅಭಿವೃದ್ಧಿ ಕಾರ್ಯಸೂಚಿಗೆ ಬೆಂಬಲ ನೀಡಿದ್ದಕ್ಕಾಗಿ ರೋಮಲ್ ಶೆಟ್ಟಿ ಮತ್ತು ಸಂಸ್ಥೆಯ ತಂಡಕ್ಕೆ ಧನ್ಯವಾದ ಅರ್ಪಿಸಿದರು.

Also Read

ಬಾಲಕನ ಸಾವು ತಂದ ನೋವು; 10 ಲಕ್ಷ ರೂ. ಸಂಗ್ರಹಿಸಿ ಗ್ರಾಮಕ್ಕೆ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ ಬೆಳ್ತಂಗಡಿಯ ಯುವಕರು !

ಬೆಂಗಳೂರಿನಾಚೆಗೂ ಬೆಳವಣಿಗೆಗೆ ಉತ್ತೇಜನ

ರಾಜ್ಯದ ವಿವಿಧ ಪ್ರದೇಶಗಳ ಸಾಮರ್ಥ್ಯವನ್ನು ಬಳಸಿಕೊಂಡು ಹಲವು ಆರ್ಥಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ 'ಬಿಯಾಂಡ್ ಬೆಂಗಳೂರು' ಕಾರ್ಯತಂತ್ರದ ಉದ್ದೇಶವಾಗಿದೆ.

ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ನಡೆದ ಇತ್ತೀಚಿನ ಕರ್ನಾಟಕ ಸಚಿವ ಸಂಪುಟ ಸಭೆಯ ಬಗ್ಗೆಯೂ ಖರ್ಗೆ ಪ್ರಸ್ತಾಪಿಸಿದರು. ಈ ಸಭೆಯಲ್ಲಿ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದ ಬೆಳವಣಿಗೆಯ ಅವಕಾಶಗಳನ್ನು ಗುರುತಿಸಲಾಗಿದ್ದು, ಸುಮಾರು 6,000 ಕೋಟಿ ರೂ. ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡುವ ಬದ್ಧತೆ ವ್ಯಕ್ತಪಡಿಸಲಾಗಿದೆ ಎಂದರು.

ಪ್ರಾದೇಶಿಕ ಸಾಮರ್ಥ್ಯಗಳನ್ನು ಗುರುತಿಸುವುದು, ಹೂಡಿಕೆ ಆಕರ್ಷಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಮೇಲೆ ಗಮನಹರಿಸುವ ಸ್ಥಳೀಯ ಆರ್ಥಿಕತೆ ವೇಗವರ್ಧನೆ ಕಾರ್ಯಕ್ರಮ (LEAP) ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಮಂಗಳೂರಿನಲ್ಲಿ ನುರಿತ ಪ್ರತಿಭೆಗಳ ಸಮೂಹವಿದ್ದು, ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳೂ ಇವೆ. ಇಲ್ಲಿನ ಉತ್ತಮ ಜೀವನಮಟ್ಟವು ಕಂಪನಿಗಳಿಗೆ ಉದ್ಯೋಗಿಗಳನ್ನು ಆಕರ್ಷಿಸಲು ಮತ್ತು ಅವರನ್ನು ಉಳಿಸಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.

ಇದಕ್ಕೆ ಉದಾಹರಣೆಯಾಗಿ ಸಾಫ್ಟ್‌ವೇರ್ ಸಂಸ್ಥೆ ಇಜಿ (EG)ಯ ಡೆನ್ಮಾರ್ಕ್ ತಂಡದ ಸದಸ್ಯರು ಬೆಳಗ್ಗೆ ಸಹಿಹಿತ್ಲು ಕಡಲತೀರದಲ್ಲಿ ಸರ್ಫಿಂಗ್ ಮಾಡಿ ಬಳಿಕ ಕೆಲಸಕ್ಕೆ ತೆರಳುವ ವಿಚಾರವನ್ನು ಉಲ್ಲೇಖಿಸಿದರು. ಇಂತಹ ಅನುಕೂಲಗಳು ಮಂಗಳೂರನ್ನು ಉದ್ಯಮಗಳಿಗೆ ಆಕರ್ಷಕ ತಾಣವನ್ನಾಗಿ ರೂಪಿಸಲು ನೆರವಾಗಲಿವೆ ಎಂದರು.

ಕರ್ನಾಟಕದಾದ್ಯಂತ ಹೆಚ್ಚಿನ ಉದ್ಯೋಗ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದರಿಂದ ದೇಶದ ವಿವಿಧ ಭಾಗಗಳಿಂದ ವಲಸಿಗರನ್ನು ಆಕರ್ಷಿಸುತ್ತಿರುವ ಬೆಂಗಳೂರಿನ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬಹುದು ಎಂದು ಹೇಳಿದರು.

ಶಿಕ್ಷಣ ಮತ್ತು ಉದ್ಯಮ ವಲಯದ ನಡುವೆ ಸಂಪರ್ಕ

ಕಂಪನಿಗಳನ್ನು ಆಕರ್ಷಿಸುವುದು ಯೋಜನೆಯ ಒಂದು ಭಾಗ ಮಾತ್ರ. ಉದ್ಯೋಗದಾತರು ನಿರೀಕ್ಷಿಸುವ ಕೌಶಲಗಳನ್ನು ಪದವೀಧರರು ಹೊಂದುವಂತೆ ಮಾಡಲು ಉದ್ಯಮ ವಲಯ ಮತ್ತು ಶಿಕ್ಷಣ ಸಂಸ್ಥೆಗಳು ಪರಸ್ಪರ ಕೈಜೋಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಪಠ್ಯಕ್ರಮ ರೂಪಿಸುವುದು ಹಾಗೂ ಹೊಸ ಉದ್ಯೋಗಾವಕಾಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಡೆಲಾಯ್ಟ್‌ನಂತಹ ಕಂಪನಿಗಳು ಸಹಕರಿಸಬೇಕು ಎಂದು ಕರೆ ನೀಡಿದರು.

ಮಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಡೆಲಾಯ್ಟ್‌ನಂತಹ ಕಂಪನಿಯಲ್ಲಿ ಕೆಲಸ ಮಾಡಲು ಅಗತ್ಯವಾದ ಕೌಶಲಗಳನ್ನು ಹೊಂದಿರಬಾರದೇ ಎಂದು ಪ್ರಶ್ನಿಸಿದ ಅವರು, ಈ ನಿಟ್ಟಿನಲ್ಲಿ ಉದ್ಯಮ ವಲಯ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಲು ಉತ್ತಮ ಅವಕಾಶವಿದೆ ಎಂದರು.

ಮಂಗಳೂರಿನಲ್ಲಿ ಆರೋಗ್ಯ ವಿಜ್ಞಾನ ಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ಉತ್ಕೃಷ್ಟತಾ ಕೇಂದ್ರ (Centre of Excellence) ಸ್ಥಾಪಿಸುವ ಸಾಧ್ಯತೆಯನ್ನೂ ಪರಿಶೀಲಿಸುವಂತೆ ಸಚಿವರು ಸಲಹೆ ನೀಡಿದರು. ಈ ಪ್ರದೇಶದಲ್ಲಿ ಈಗಾಗಲೇ ಉತ್ತಮ ಆರೋಗ್ಯ ಸೇವಾ ವ್ಯವಸ್ಥೆ ಇರುವುದನ್ನು ಅವರು ಉಲ್ಲೇಖಿಸಿದರು.

ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶಗಳು

ರಾಜ್ಯದ ELEVATE ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸುವಂತೆ ಪ್ರಿಯಾಂಕ್ ಖರ್ಗೆ ಈ ಭಾಗದ ಉದ್ಯಮಿಗಳಿಗೆ ಉತ್ತೇಜನ ನೀಡಿದರು. ಈ ಯೋಜನೆಯಡಿ ಅರ್ಹ ಸ್ಟಾರ್ಟ್‌ಅಪ್‌ಗಳಿಗೆ ಗರಿಷ್ಠ 1 ಕೋಟಿ ರೂಪಾಯಿವರೆಗೆ ಈಕ್ವಿಟಿ ಪಾಲು ನೀಡದೆ ಅನುದಾನ ಒದಗಿಸಲಾಗುತ್ತದೆ.

ಸಾರ್ವಜನಿಕ ವಲಯದ ಸಮಸ್ಯೆಗಳಿಗೆ, ವಿಶೇಷವಾಗಿ ನಗರ ಸಾರಿಗೆ ವ್ಯವಸ್ಥೆಗೆ ಪರಿಹಾರ ಕಂಡುಕೊಳ್ಳುವ ಸ್ಟಾರ್ಟ್‌ಅಪ್‌ಗಳು ಸರ್ಕಾರದೊಂದಿಗೆ ತಮ್ಮ ಪರಿಹಾರಗಳನ್ನು ಪರೀಕ್ಷಿಸಲು ಅವಕಾಶ ನೀಡುವ ಕರ್ನಾಟಕದ ನಿಯಂತ್ರಣ ಸ್ಯಾಂಡ್‌ಬಾಕ್ಸ್ ಉಪಕ್ರಮದ ಬಗ್ಗೆಯೂ ಅವರು ವಿವರಿಸಿದರು. ಯಶಸ್ವಿ ಪ್ರಾಯೋಗಿಕ ಯೋಜನೆಗಳನ್ನು ರಾಜ್ಯಾದ್ಯಂತ ವಿಸ್ತರಿಸುವುದರ ಜತೆಗೆ ಇತರ ರಾಜ್ಯಗಳಿಗೂ ಕೊಂಡೊಯ್ಯಬಹುದು ಎಂದರು.

ಈ ಕಾರ್ಯಕ್ರಮದಲ್ಲಿ ಇದುವರೆಗೆ 16 ಸ್ಟಾರ್ಟ್‌ಅಪ್‌ಗಳು ನೋಂದಾಯಿಸಿಕೊಂಡಿದ್ದು, ಈ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಕರ್ನಾಟಕದ ಮುಂದಿನ ಹಂತದ ಬೆಳವಣಿಗೆ ಕೇವಲ ಬೆಂಗಳೂರಿಗೆ ಸೀಮಿತವಾಗಬೇಕಿಲ್ಲ ಎಂಬ ಸಂದೇಶವನ್ನು ಸರ್ಕಾರ ಉದ್ಯಮ ವಲಯಕ್ಕೆ ನೀಡಿದೆ. ಮಂಗಳೂರಿನಂತಹ ನಗರಗಳಲ್ಲಿ ಹೂಡಿಕೆ, ಕೌಶಲ ಅಭಿವೃದ್ಧಿ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ರಾಜ್ಯದಾದ್ಯಂತ ಹಲವು ಪ್ರಾದೇಶಿಕ ಆರ್ಥಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಆಶಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement