ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಉಪಲೋಕಾಯಕ್ತ ನೆರವು: ಇಬ್ಬರು ಹೆಣ್ಣು ಮಕ್ಕಳ ವಿಧವೆ ತಾಯಿಗೆ 7 ವರ್ಷಗಳ ನಂತರ LIC ಪರಿಹಾರ ಹಣ!

ಹಾವೇರಿ ಜಿಲ್ಲೆಯ ಕಾಣೆಬೆನ್ನೂರಿನ ನೇಯ್ಗೆ ಕೆಲಸಗಾರರಾಗಿದ್ದ ಗೋಪಾಲ ಐರಾನಿ ಅವರು 2020ರಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರ ಪತ್ನಿ ರೇಣುಕಾ ಗೋಪಾಲ ಐರಾನಿ ಅವರು, ಭಾರತೀಯ ಜೀವ ವಿಮಾ ನಿಗಮದಿಂದ ವಿಮಾ ಹಣವನ್ನು ಪಡೆಯಲು ಹಲವು ಕಚೇರಿಗಳಿಗೆ ಅಲೆದಾಡಬೇಕಾಯಿತು

2 ಲಕ್ಷ ರು ಚೆಕ್ ವಿತರಿಸಿದ ಉಪ ಲೋಕಾಯುಕ್ತ ಬಿ. ವೀರಪ್ಪ
Shilpa D
Updated On : 28 Nov 2026, 11:05 am

ಹಾವೇರಿ: ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿರುವ 47 ವರ್ಷದ ವಿಧವೆಯೊಬ್ಬರ ಸುಮಾರು ಏಳು ವರ್ಷಗಳ ಸುದೀರ್ಘ ಹೋರಾಟದ ನಂತರ, ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (KSTIDC) 2 ಲಕ್ಷ ರೂಪಾಯಿಗಳ ವಿಮಾ ಪರಿಹಾರ ಪಡೆದಿದ್ದಾರೆ.

ಹಾವೇರಿ ಜಿಲ್ಲೆಯ ಕಾಣೆಬೆನ್ನೂರಿನ ನೇಯ್ಗೆ ಕೆಲಸಗಾರರಾಗಿದ್ದ ಗೋಪಾಲ ಐರಾನಿ ಅವರು 2020ರಲ್ಲಿ ಅನಾರೋಗ್ಯದಿಂದ ನಿಧನರಾದರು. ಅವರ ಪತ್ನಿ ರೇಣುಕಾ ಗೋಪಾಲ ಐರಾನಿ ಅವರು, ಭಾರತೀಯ ಜೀವ ವಿಮಾ ನಿಗಮದಿಂದ ವಿಮಾ ಹಣವನ್ನು ಪಡೆಯಲು ಹಲವು ಕಚೇರಿಗಳಿಗೆ ಅಲೆದಾಡಬೇಕಾಯಿತು. ಸಂಕಷ್ಟದಲ್ಲಿದ್ದ ರೇಣುಕಾ ಅವರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನೆರವಿಗೆ ಬಂದರು.

ಅಧಿಕಾರಿಗಳು ತಮ್ಮ ಮನವಿಯನ್ನು ತಿರಸ್ಕರಿಸಿದ ನಂತರ, ಹಾವೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ತಾನು ಉಪ ಲೋಕಾಯುಕ್ತರನ್ನು ಸಂಪರ್ಕಿಸಿದ್ದಾಗಿ ರೇಣುಕಾ 'ಟಿಎನ್‌ಐಇ' ಪತ್ರಿಕೆಗೆ ತಿಳಿಸಿದರು. ಅವರ ಇಬ್ಬರು ಮಕ್ಕಳಲ್ಲಿ ಒಬ್ಬರು ದೂರಶಿಕ್ಷಣದ ಮೂಲಕ ಎಂ.ಕಾಂ ಓದುತ್ತಿದ್ದರೆ, ಇನ್ನೊಬ್ಬರು ಬಿ.ಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

Advertisement

Advertisement

ರೇಣುಕಾ ಅವರ ಸಂಕಷ್ಟವನ್ನು ಪರಿಗಣಿಸಿದ ನ್ಯಾಯಮೂರ್ತಿ ವೀರಪ್ಪ ಅವರು, 2024 ಮತ್ತು ಜೂನ್ 2026ರ ನಡುವಿನ ಅವಧಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿ, ಕೇಂದ್ರ ಜವಳಿ ಸಚಿವಾಲಯ, ಲೋಕಪಾಲ, ಮುಖ್ಯಮಂತ್ರಿಗಳು, ರಾಜ್ಯ ಜವಳಿ ಸಚಿವರು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್‌ಐಸಿ ಸಂಸ್ಥೆಗೆ ಪತ್ರ ಬರೆದು ಈ ವಿಷಯದತ್ತ ಅವರ ಗಮನ ಸೆಳೆದರು.

Also Read

ಉಪ ತಹಶೀಲ್ದಾರ್‌ಗೆ ಶಾಕ್: ಲಂಚ ಪಡೆಯುತ್ತಿದ್ದಾಗಲೇ ಕಚೇರಿಗೆ ನುಗ್ಗಿ ರೆಡ್‌ಹ್ಯಾಂಡ್ ಆಗಿ ಹಿಡಿದ ಲೋಕಾಯುಕ್ತ!

ಮೃತ ನೌಕರರು ರಾಜ್ಯ ಸರ್ಕಾರಕ್ಕೆ ಸೇರಿದವರಾಗಿದ್ದರಿಂದ, ಈ ಸಮಸ್ಯೆಯನ್ನು ಲೋಕಾಯುಕ್ತ ಸಂಸ್ಥೆಯೇ ಪರಿಹರಿಸಬಹುದು ಎಂದು ಲೋಕಪಾಲರು ತಿಳಿಸಿದರು.

ಅಂತಿಮವಾಗಿ, ಅಕ್ಟೋಬರ್ 13, 2026ರಂದು, ಕರ್ನಾಟಕ ಲೋಕಾಯುಕ್ತ ಕಾಯಿದೆಯ ಸೆಕ್ಷನ್ 12(3)ರ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದಾಗಿ ನ್ಯಾಯಮೂರ್ತಿ ವೀರಪ್ಪ ಅವರು ಕೆಎಸ್‌ಟಿಐಡಿಸಿ (KSTIDC) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದರ ಪರಿಣಾಮವಾಗಿ ವಿಮಾ ಹಣ ಬಿಡುಗಡೆಯಾಯಿತು.

ನವೆಂಬರ್ 17ರಂದು ಕೆಎಸ್‌ಟಿಐಡಿಸಿ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ ತಳವಾರ ಮತ್ತು ಉಪ ನಿರ್ದೇಶಕ ಸುರೇಶ್ ಕುಮಾರ್ ಅವರು ರೇಣುಕಾ ಅವರ ಹೆಸರಿನಲ್ಲಿ 2 ಲಕ್ಷ ರೂಪಾಯಿಗಳ ಚೆಕ್ ನೀಡಿದರು ಎಂದು ನ್ಯಾಯಮೂರ್ತಿ ವೀರಪ್ಪ ತಿಳಿಸಿದರು.

ರೇಣುಕಾ ಅವರಿಗೆ ಬಡ್ಡಿಯನ್ನು ಪಾವತಿಸುವಂತೆಯೂ, ಹಾಗೂ ಅವರ ಪತಿಯ ಮರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಏನಾದರೂ ಪರಿಹಾರ ದೊರೆತರೆ, ಈ ಮೊತ್ತವನ್ನು ಸರಿಹೊಂದಿಸುವಂತೆಯೂ ನ್ಯಾಯಮೂರ್ತಿ ವೀರಪ್ಪ ಅವರು ಕೆಎಸ್‌ಟಿಐಡಿಸಿ ಸಂಸ್ಥೆಗೆ ನಿರ್ದೇಶನ ನೀಡಿದರು.

ಫೋಟೋಕಾಪಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ರೇಣುಕಾ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಹಣವು ತಮ್ಮ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಲಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement