'ಇಂದು ದೆಹಲಿಗೆ ಹೋಗ್ತಿದ್ದೇನೆ, ಕ್ಷೇತ್ರ ಪುನರ್ವಿಂಗಡಣೆಯಾದ್ರೆ ದಕ್ಷಿಣ ರಾಜ್ಯಗಳಿಗೆ ಅನ್ಯಾಯ, ಕೇರಳ-ತೆಲಂಗಾಣ ಸಿಎಂ ಜೊತೆ ಚರ್ಚೆ ಮಾಡ್ತೇನೆ: ಸಿಎಂ ಡಿ ಕೆ ಶಿವಕುಮಾರ್'; Video
ನಾಳೆ ತೆಲಂಗಾಣ ಮತ್ತು ಕೇರಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇವೆ. ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ, ಜನಸಂಖ್ಯೆಯ ವಿಚಾರದಲ್ಲಿ ಅದರ ಪರಿಣಾಮಗಳು ಹಾಗೂ ಇತರ ರಾಜ್ಯಗಳ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದರು.
ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಹಾಗೂ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆ(Delimitation Bill) ಕುರಿತು ಚರ್ಚಿಸಲು ನಾಳೆ ದೆಹಲಿಯಲ್ಲಿ ಕೇರಳ ಮತ್ತು ತೆಲಂಗಾಣ ಮುಖ್ಯಮಂತ್ರಿಗಳನ್ನು ಭೇಟಿಯಾಗುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಶನಿವಾರ ತಿಳಿಸಿದ್ದಾರೆ.
ಈ ಪ್ರಸ್ತಾವನೆಯಿಂದ ದಕ್ಷಿಣ ರಾಜ್ಯಗಳ ಮೇಲೆ ಉಂಟಾಗುವ ಪರಿಣಾಮಗಳು, ವಿಶೇಷವಾಗಿ ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯ ಹಾಗೂ ರಾಜಕೀಯ ಬಲದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33ರಷ್ಟು ಮೀಸಲಾತಿ ಜಾರಿಗೊಳಿಸಲು ಕೇಂದ್ರ ಸರ್ಕಾರ ನಾಡಿದ್ದು ಸೋಮವಾರ ಲೋಕಸಭೆಯಲ್ಲಿ ಹೊಸ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲು ಉದ್ದೇಶಿಸಿದೆ. ಇದರಡಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಲೋಕಸಭೆಯಲ್ಲಿ ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆ ಹಾಗೂ ವಿಧಾನಸಭೆಗಳ ಸದಸ್ಯ ಬಲವನ್ನು ಶೇ. 50ರಷ್ಟು ಹೆಚ್ಚಿಸುವ ಪ್ರಸ್ತಾವನೆ ಇದೆ. ಪರಿಷ್ಕೃತ ಕ್ಷೇತ್ರಗಳ ಸಂಖ್ಯೆ ಮತ್ತು ಗಡಿಗಳನ್ನು 2051ರವರೆಗೆ ಸ್ಥಗಿತಗೊಳಿಸುವ ಉದ್ದೇಶವೂ ಇದೆ.
ಸೋಮವಾರ ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026ರ ಪ್ರಕಾರ ಲೋಕಸಭೆಯ ಗರಿಷ್ಠ ಸದಸ್ಯ ಬಲವನ್ನು 850ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ರಾಜ್ಯಗಳಿಂದ ಗರಿಷ್ಠ 815 ಸದಸ್ಯರು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಇರಲಿದ್ದಾರೆ. ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲದ ಮಿತಿಯನ್ನು 500ರಿಂದ 650ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ.
ನಾನು ಇಂದು ರಾತ್ರಿ ದೆಹಲಿಗೆ ತೆರಳುತ್ತಿದ್ದೇನೆ. ನಾಳೆ ತೆಲಂಗಾಣ ಮತ್ತು ಕೇರಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಈ ವಿಷಯದ ಕುರಿತು ಚರ್ಚಿಸುತ್ತೇವೆ. ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ, ಜನಸಂಖ್ಯೆಯ ವಿಚಾರದಲ್ಲಿ ಅದರ ಪರಿಣಾಮಗಳು ಹಾಗೂ ಇತರ ರಾಜ್ಯಗಳ, ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಡಿ ಕೆ ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಿಷನ್ 360: ಕ್ಷೇತ್ರ ಮರುವಿಂಗಡಣೆ ಮಸೂದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಸಿಗುತ್ತಾ ಸಕ್ಸಸ್? ಅಗತ್ಯವಿರುವ ಬೆಂಬಲವೆಷ್ಟು?
ಪ್ರಸ್ತಾವನೆಯ ಸಾಧಕ-ಬಾಧಕಗಳನ್ನು ಚರ್ಚಿಸಿದ ಬಳಿಕ ತಮ್ಮ ನಿಲುವು ನಿರ್ಧರಿಸಲಾಗುವುದು ಎಂದರು. ಕೇಂದ್ರ ಸಚಿವ ಸಂಪುಟ ಈ ಪ್ರಸ್ತಾವನೆಗೆ ನಿನ್ನೆಯಷ್ಟೇ ಅನುಮೋದನೆ ನೀಡಿದೆ. ಸದ್ಯಕ್ಕೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಯಷ್ಟೇ ನಮಗೆ ತಿಳಿದಿದೆ. ಸಚಿವ ಸಂಪುಟದ ನಿರ್ಧಾರದ ನಿಜವಾದ ವಿವರಗಳ ಬಗ್ಗೆ ನಮಗೆ ತಿಳಿದಿಲ್ಲ. ಚರ್ಚಿಸಿದ ಬಳಿಕ ಏನು ಮಾಡಬೇಕು ಮತ್ತು ಈ ವಿಷಯವನ್ನು ಎಷ್ಟು ಬಲವಾಗಿ ಪ್ರಸ್ತಾಪಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಹೇಳಿದರು.
ದಕ್ಷಿಣ ರಾಜ್ಯಗಳು ಒಗ್ಗಟ್ಟಿನಿಂದ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಬೇಕು, ತಮ್ಮ ಪ್ರಾತಿನಿಧ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಮಹಿಳಾ ಮೀಸಲಾತಿಗೆ ನಾವೆಲ್ಲರೂ ಒಪ್ಪಿಗೆ ನೀಡಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳೂ ಮಹಿಳಾ ಮೀಸಲಾತಿಗೆ ಬೆಂಬಲ ನೀಡಿವೆ. ಆದರೆ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ವಿಚಾರದಲ್ಲಿ ನಮ್ಮ ಪಕ್ಷದ ನಿಲುವನ್ನು ನಾಳಿನ ಸಭೆಯ ಬಳಿಕ ತಿಳಿಸುತ್ತೇವೆ ಎಂದರು.
ಕ್ಷೇತ್ರ ಪುನರ್ವಿಂಗಡಣೆ ಕುರಿತು ಚರ್ಚಿಸಲು ಡಿಎಂಕೆ ಕರೆದಿದ್ದ ಚೆನ್ನೈನಲ್ಲಿ ನಡೆದ ಪ್ರತಿಪಕ್ಷಗಳ ಹಿಂದಿನ ಸಭೆಯಲ್ಲಿ ತಾವು ಭಾಗವಹಿಸಿದ್ದನ್ನು ಉಲ್ಲೇಖಿಸಿದ ಸಿಎಂ, ಈ ವಿಷಯದ ಕುರಿತು ಕಳವಳಗಳನ್ನು ಚರ್ಚಿಸಲು ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿದರು.
ನಾಳೆ ದೆಹಲಿಯಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್ ಕೂಡ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆ. ಇದೇ ವೇಳೆ, ಪ್ರಸ್ತಾವಿತ ಮಸೂದೆ ಕುರಿತು ಸೋಮವಾರದಿಂದ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದರು.
ಬಿಜೆಪಿ ದೇಶಾದ್ಯಂತ ತನಗೆ ಅನುಕೂಲವಾಗುವ ರೀತಿಯಲ್ಲಿ ನೋಡುತ್ತಿದೆ. ನಾವು ದಕ್ಷಿಣ ಭಾರತದ ಹಿತಾಸಕ್ತಿಗಳನ್ನು ರಕ್ಷಿಸಬೇಕು, ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯವನ್ನು ಕಾಪಾಡಿಕೊಳ್ಳಬೇಕು. ಈ ಎಲ್ಲ ವಿಚಾರಗಳನ್ನು ಒಟ್ಟಾಗಿ ಚರ್ಚಿಸುತ್ತೇವೆ ಎಂದು ಹೇಳಿದರು.