Japan ಮಾದರಿಯಲ್ಲಿ ಕರ್ನಾಟಕದ ನಗರಗಳ ಅಭಿವೃದ್ಧಿಗೆ ಡಿಕೆಶಿ ಪ್ಲ್ಯಾನ್; ತುಮಕೂರಿಗೂ Namma Metro ವಿಸ್ತರಣೆಗೆ ಚಿಂತನೆ..!
ನಗರಾಭಿವೃದ್ಧಿ, ಉತ್ಪಾದನೆ, ನಗರ ಸಾರಿಗೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್ನಿಂದ ನಾವು ಸಾಕಷ್ಟು ಕಲಿಯಬೇಕಿದೆ. ಅಲ್ಲಿನ ಸಮಯಪಾಲನೆ, ಶಿಸ್ತು ಮತ್ತು ಬದ್ಧತೆ ಅನುಕರಣೀಯವಾಗಿವೆ. ಹಲವು ಜಪಾನಿನ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ.
ಬೆಂಗಳೂರು: ನಗರ ಸಾರಿಗೆ, ತ್ಯಾಜ್ಯ ನಿರ್ವಹಣೆ, ನಗರ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಕ್ಷೇತ್ರಗಳಲ್ಲಿ ಜಪಾನ್ ಮಾದರಿಗಳನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ತಮ್ಮ ಇತ್ತೀಚನ ಮೂರು ದಿನಗಳ ಜಪಾನ್ ಪ್ರವಾಸದ ಫಲಿತಾಂಶಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಅಲ್ಲಿನ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಸಾಧ್ಯವೇ ಎಂಬುದದನ್ನು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗುವುದು ಎಂದು ಹೇಳಿದರು.
ನಗರಾಭಿವೃದ್ಧಿ, ಉತ್ಪಾದನೆ, ನಗರ ಸಾರಿಗೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಜಪಾನ್ನಿಂದ ನಾವು ಸಾಕಷ್ಟು ಕಲಿಯಬೇಕಿದೆ. ಅಲ್ಲಿನ ಸಮಯಪಾಲನೆ, ಶಿಸ್ತು ಮತ್ತು ಬದ್ಧತೆ ಅನುಕರಣೀಯವಾಗಿವೆ. ಹಲವು ಜಪಾನಿನ ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ. ಹೊಸ ಹೂಡಿಕೆಗಳ ಮೂಲಕ ಉದ್ಯೋಗ ಸೃಷ್ಟಿಸುವುದು ಮತ್ತು ಬೆಂಗಳೂರಿನ ಆಚೆಗೂ ಕೈಗಾರಿಕಾ ಚಟುವಟಿಕೆಗಳನ್ನು ವಿಸ್ತರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಹೂಡಿಕೆ ಮತ್ತು ಮೂಲಸೌಕರ್ಯ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಜಪಾನ್ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಯಸುತಕಾ ನಕಸೋನೆ ಹಾಗೂ ಜಪಾನ್ನಲ್ಲಿರುವ ಭಾರತದ ರಾಯಭಾರಿ ನಾಗ್ಮಾ ಮೊಹಮ್ಮದ್ ಮಲಿಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿರುವ ಘಟಕದಲ್ಲಿ 600 ತಾಂತ್ರಿಕ ಉದ್ಯೋಗಗಳನ್ನು ಸೃಷ್ಟಿಸುವ ಸಂಬಂಧ ಕವಾಸಕಿ ಹೆವಿ ಇಂಡಸ್ಟ್ರೀಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ 10 ವರ್ಷಗಳಲ್ಲಿ ಹಾರೋಹಳ್ಳಿ ಘಟಕದ ವಿಸ್ತರಣೆಗೆ ಕವಾಸಕಿ ಕಂಪನಿ 800 ಕೋಟಿ ರೂ. ವರೆಗೆ ಹೂಡಿಕೆ ಮಾಡಲು ಬದ್ಧವಾಗಿದ್ದು, ಇದರಿಂದ ಸುಮಾರು 600 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.
ಟೊಯೋಟಾ ಕಂಪನಿಯೂ ಕರ್ನಾಟಕದಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಆಸಕ್ತಿ ತೋರಿಸಿದೆ. ನಾವು ಟೊಯೋಟಾ ಘಟಕಕ್ಕೆ ಭೇಟಿ ನೀಡಿದಾಗ, ರಾಜ್ಯದಲ್ಲಿನ ಉತ್ಪಾದನಾ ಘಟಕವನ್ನು ವಿಸ್ತರಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದರು. ಈ ವಿಸ್ತರಣೆಗೆ ಅಗತ್ಯವಿರುವ ಎಲ್ಲ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಹೇಳಿದರು.
ಪ್ರಸ್ತುತ ಕರ್ನಾಟಕದಲ್ಲಿ 525 ಜಪಾನಿನ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿಯೂ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಮುಂದಿನ ವರ್ಷದ ಏಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ರಾಜ್ಯಕ್ಕೆ ಹೂಡಿಕೆ ಆಕರ್ಷಿಸುವ ಪ್ರಯತ್ನದ ಭಾಗವಾಗಿ ಈ ಪ್ರವಾಸ ಕೈಗೊಳ್ಳಲಾಗಿತ್ತು. ಸಮಾವೇಶದ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿ ಹೂಡಿಕೆದಾರರ ಸಭೆಗಳನ್ನು ನಡೆಸಲಾಗುತ್ತಿದೆ. ಪೂರ್ವ ಏಷ್ಯಾದ ಹಲವು ದೇಶಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿವೆ ಎಂದರು.
ಜಪಾನ್ ಮಾದರಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆಯನ್ನೂ ಸರ್ಕಾರ ಪರಿಶೀಲಿಸಲಿದೆ ಎಂದು ಹೇಳಿದರು.
ಜಪಾನ್ನ ತ್ಯಾಜ್ಯ ನಿರ್ವಹಣಾ ಘಟಕವೊಂದಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ಕನಿಷ್ಠ 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದೇ ಮಾದರಿಯ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೆ ತರಬಹುದೇ ಎಂಬುದನ್ನು ಪರಿಶೀಲಿಸುವಂತೆ ಅಲ್ಲಿನ ಕಂಪನಿಗಳಿಗೆ ಆಹ್ವಾನ ನೀಡಿದ್ದೇವೆ ಎಂದರು.
ಇಂತಹ ಘಟಕಗಳನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರಿನಲ್ಲಿಯೂ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಬಳಿಕ ಜಪಾನ್ನ ನಗರ ಸಾರಿಗೆ ವ್ಯವಸ್ಥೆಯನ್ನು ಉಲ್ಲೇಖಿಸಿದ ಅವರು, ಮೆಟ್ರೋ ನಿಲ್ದಾಣಗಳನ್ನು ವಾಣಿಜ್ಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಮೂಲಕ ಅವುಗಳ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ಜಪಾನ್ನ ನಗರ ಸಾರಿಗೆ ವ್ಯವಸ್ಥೆ ನಮಗೆ ಮಾದರಿಯಾಗಿದೆ. ಅಲ್ಲಿನ ಮೆಟ್ರೋ ನಿಲ್ದಾಣಗಳು ಸುಸಜ್ಜಿತ ವಾಣಿಜ್ಯ ಕೇಂದ್ರಗಳಂತಿವೆ. ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಿಗಿಂತಲೂ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಸ್ವಚ್ಛತೆ ಮತ್ತು ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಕರ್ನಾಟಕದ ಮೆಟ್ರೋ ಮೂಲಸೌಕರ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಮಾರ್ಗಗಳನ್ನು ಪರಿಶೀಲಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಟೋಕಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ಪರಿಚಯಿಸಲಾಗಿದ್ದ ಮಾದರಿಯನ್ನು ಉಲ್ಲೇಖಿಸಿದ ಸಿಎಂ, ಜಪಾನಿನ ಕಂಪನಿಗಳು ರಾಜ್ಯದಲ್ಲೇ ಹೈಬ್ರಿಡ್ ಟ್ಯಾಕ್ಸಿ ವಾಹನಗಳನ್ನು ತಯಾರಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲೂ ಇದೇ ಮಾದರಿಯ ಹೈಬ್ರಿಡ್ ಟ್ಯಾಕ್ಸಿ ಕಾರುಗಳನ್ನು ತಯಾರಿಸುವಂತೆ ಕಂಪನಿಗಳಿಗೆ ಆಹ್ವಾನ ನೀಡಿದ್ದೇವೆ. ಇದರಿಂದ ಸ್ಥಳೀಯ ಆಟೋರಿಕ್ಷಾಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆಟೋರಿಕ್ಷಾಗಳನ್ನೂ ನಾವು ಪ್ರೋತ್ಸಾಹಿಸಬೇಕಿದೆ. ಜಪಾನ್ನಲ್ಲಿ ನೋಡಿದ ಟ್ಯಾಕ್ಸಿ ಮಾದರಿ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಪ್ರವಾಸದ ವೇಳೆ ನಿಯೋಗವು ಪ್ಯಾನಾಸೋನಿಕ್ ಮತ್ತು ಜೆಎಫ್ಇ ಸ್ಟೀಲ್ ಸೇರಿದಂತೆ ಹಲವು ಜಪಾನಿನ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸುಮಿಟೊಮೊ, ಅಜಿನೊಮೊಟೊ, ಮೆಯಿಜಿ ಸೀಕಾ ಫಾರ್ಮಾ, ಯೊಕೊಗಾವಾ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಅನುಮತಿಗಳನ್ನು ತ್ವರಿತವಾಗಿ ನೀಡುವ ಮೂಲಕ ಮತ್ತು ವಿಳಂಬ ತಪ್ಪಿಸುವ ಮೂಲಕ ಹೂಡಿಕೆಗಳಿಗೆ ಸರ್ಕಾರ ನೆರವಾಗಲಿದೆ ಎಂದು ಮಖ್ಯಮಂತ್ರಿಗಳು ಹೇಳಿದರು.
ವಿದೇಶಿ ಹೂಡಿಕೆಗಳಿಗೆ ಅನುಕೂಲ ಮಾಡಿಕೊಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕೈಗಾರಿಕೆಗಳನ್ನು ಆರಂಭಿಸಲು ಬೇಕಾದ ಅನುಮತಿಗಳನ್ನು ತ್ವರಿತವಾಗಿ ನೀಡುವಂತೆ ಮತ್ತು ಯಾವುದೇ ವಿಳಂಬವಾಗದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇದೇ ವೇಳೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಮೆಟ್ರೋ ಜಾಲವನ್ನು ತುಮಕೂರಿನವರೆಗೆ ವಿಸ್ತರಿಸುವ ಪ್ರಸ್ತಾವನೆಯೂ ಸರ್ಕಾರದ ಪರಿಶೀಲನೆಯಲ್ಲಿದೆ.
ಪಿಪಿಪಿ ಮಾದರಿಯಲ್ಲಿ ತುಮಕೂರಿಗೆ ಮೆಟ್ರೋ ವಿಸ್ತರಿಸುವ ಪ್ರಸ್ತಾವನೆಯಿದೆ. ಮೆಟ್ರೋ ಸಂಪರ್ಕದೊಂದಿಗೆ ನಗರಗಳು ಅಭಿವೃದ್ಧಿಯಾಗುತ್ತವೆ. ಸಾರ್ವಜನಿಕರ ಅನುಕೂಲವೂ ಮುಖ್ಯ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಯಾವುದೇ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಪ್ರಸ್ತುತ ಮೆಟ್ರೋ ಯೋಜನೆಗಳು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಅನುಷ್ಠಾನಗೊಳ್ಳುತ್ತಿವೆ ಎಂದು ಹೇಳಿದರು.