ಬೆಳಗಾವಿ: ಗಾಳಿಪಟ ಹಾರಿಸುವ ಸಂಭ್ರಮ ಬೆಳಗಾವಿಯಲ್ಲಿ ಜೀವಕ್ಕೆ ಅಪಾಯ ತಂದೊಡ್ಡಿದೆ. ವಡಗಾವಿಯ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಎರಡನೇ ಮಹಡಿಯ ಟೆರೇಸ್‌ನಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ನಿನ್ನೆ ಗಾಂಧೀನಗರದ ಬಳಿ ಮಾಂಜಾ ದಾರಕ್ಕೆ ಸಿಲುಕಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವಕ ಮೃತಪಟ್ಟಿದ್ದಾನೆ.
ಎರಡು ದಿನಗಳಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ದುರ್ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಮಾಂಜಾ ದಾರದಿಂದ ಮೃತಪಟ್ಟ ಯುವಕನನ್ನು ಮಹಾಂತೇಶನಗರದ ಧ್ರುವ ಸಂತೋಷ ಕರಜಗಿ (19ವ) ಎಂದು ಗುರುತಿಸಲಾಗಿದೆ. ಧ್ರುವ ಬೈಕ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಗಾಂಧೀನಗರದ ಬಳಿ ಏಕಾಏಕಿ ಮಾಂಜಾದ ಹರಿತವಾದ ದಾರ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ದಾರದಿಂದ ಗಂಭೀರ ಗಾಯಗೊಂಡಿದ್ದ ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಅಪಘಾತದ ಮಾಹಿತಿ ತಿಳಿದ ಬಳಿಕ ಬೆಳಗಾವಿ ಉತ್ತರ ಸಂಚಾರ ಪೊಲೀಸರು ಮೊದಲು ಸ್ಥಳಕ್ಕೆ ಭೇಟಿ ನೀಡಿದ್ದರು. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಾಂಧೀನಗರ ಪ್ರದೇಶವು ಮಾಳಮಾರುತಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದರಿಂದ, ಇದೀಗ ಮಾಳಮಾರುತಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.