ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಪೊಲೀಸ್ ಆಯುಕ್ತರಿಂದ ತಡರಾತ್ರಿ ಕಾರ್ಯಾಚರಣೆ, 400–500 ಪಬ್‌- ಬಾರ್‌ಗಳಲ್ಲಿ ತಪಾಸಣೆ

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಇಂದು ಶನಿವಾರ ನಸುಕಿನ ಜಾವ 2 ಗಂಟೆಯವರೆಗೆ ಮುಂದುವರಿಯಿತು.

ಪೊಲೀಸ್ ಆಯುಕ್ತರಿಂದ ತಪಾಸಣೆ
Sumana Upadhyaya
Updated On : 10 Oct 2026, 2:24 pm

ಬೆಂಗಳೂರು ನಗರದಾದ್ಯಂತ ತಡರಾತ್ರಿ ಕಾರ್ಯಾಚರಣೆ ನಡೆಸಿದ ಸುಮಾರು 1,500 ಪೊಲೀಸ್ ಸಿಬ್ಬಂದಿ, ನಿಗದಿತ ಸಮಯಕ್ಕೆ ಮುಚ್ಚುವ ನಿಯಮ, ಅಪ್ರಾಪ್ತರಿಗೆ ಮದ್ಯ ಪೂರೈಸುವುದರ ಮೇಲಿನ ನಿರ್ಬಂಧ ಹಾಗೂ ಪರವಾನಗಿ ಷರತ್ತುಗಳ ಪಾಲನೆಯ ಪರಿಶೀಲನೆಗಾಗಿ 400ರಿಂದ 500 ಪಬ್‌ಗಳು ಮತ್ತು ಬಾರ್‌ಗಳಲ್ಲಿ ತಪಾಸಣೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆ ಇಂದು ಶನಿವಾರ ನಸುಕಿನ ಜಾವ 2 ಗಂಟೆಯವರೆಗೆ ಮುಂದುವರಿಯಿತು. ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಸೇರಿದಂತೆ 19 ಐಪಿಎಸ್ ಅಧಿಕಾರಿಗಳು, ಆಯಾ ವ್ಯಾಪ್ತಿಯ ಪೊಲೀಸ್ ತಂಡಗಳು ಹಾಗೂ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬ್ರಿಗೇಡ್ ರಸ್ತೆಯಲ್ಲಿರುವ ಬ್ರಿಗೇಡ್ ಗಾರ್ಡನ್ ಮತ್ತು ಪೇಜ್ 3 ಸೇರಿದಂತೆ ಹಲವು ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು. ಕೋರಮಂಗಲ, ಆನಂದ್ ರಾವ್ ವೃತ್ತದ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ನಗರದ ವಿವಿಧೆಡೆ ಪೊಲೀಸರು ಪರಿಶೀಲನೆ ಕೈಗೊಂಡರು.

Advertisement

Advertisement

Also Read

45 ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಅವಧಿ ಮೀರಿದ ವಸ್ತುಗಳು, ನಿಯಮ ಉಲ್ಲಂಘನೆ ಪತ್ತೆ; Video

ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ನಿಗದಿತ ಸಮಯಕ್ಕೆ ಸಂಸ್ಥೆಗಳು ಮುಚ್ಚುತ್ತಿವೆಯೇ ಮತ್ತು ಅಪ್ರಾಪ್ತರಿಗೆ ಮದ್ಯ ಪೂರೈಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಕಾರ್ಯಾಚರಣೆಯ ಉದ್ದೇಶ ಎಂದು ತಿಳಿಸಿದರು. ಈ ಅಂಶಗಳನ್ನು ಆಯಾ ವ್ಯಾಪ್ತಿಯ ಉಪ ಪೊಲೀಸ್ ಆಯುಕ್ತರು ಪರಿಶೀಲಿಸಲಿದ್ದಾರೆ ಎಂದರು.

ಪಬ್‌ಗಳನ್ನು ಮುಚ್ಚಲು ನಿಗದಿತ ಸಮಯವಿದೆ. ಆ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ದಾಳಿ ನಡೆಸಲಾಗಿದೆ. ಅಪ್ರಾಪ್ತರು ಮದ್ಯ ಸೇವಿಸಲು ಅವಕಾಶ ನೀಡಬಾರದು ಎಂದು ಹೇಳಿದರು.

ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಸ್ಥಳದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ರಾತ್ರಿ 1 ಗಂಟೆಯೊಳಗೆ ಅಡುಗೆಮನೆ ಮುಚ್ಚುವುದು, ಮದ್ಯ ಪೂರೈಕೆ ನಿಲ್ಲಿಸುವುದು ಹಾಗೂ ಗ್ರಾಹಕರನ್ನು ಆವರಣದಿಂದ ಹೊರಗೆ ಕಳುಹಿಸುವ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ತಪಾಸಣೆಯ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸ್ಥೆಗಳು ತಮ್ಮ ಪರವಾನಗಿಯ ಷರತ್ತುಗಳ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನೂ ಅಧಿಕಾರಿಗಳು ಪರಿಶೀಲಿಸಿದರು. ಮಹಿಳೆಯರ ಪಬ್‌ಗಳಿಗೆ ಪರವಾನಗಿ ಪಡೆದಿದ್ದ ಸ್ಥಳಗಳಲ್ಲಿ ಅಪ್ರಾಪ್ತರಿಗೆ ಪ್ರವೇಶ ನೀಡಲಾಗುತ್ತಿದೆಯೇ ಹಾಗೂ ನೃತ್ಯ ಪ್ರದರ್ಶನಗಳು ಪರವಾನಗಿ ಷರತ್ತುಗಳನ್ನು ಉಲ್ಲಂಘಿಸುತ್ತಿವೆಯೇ ಎಂಬುದನ್ನು ತಪಾಸಣೆ ನಡೆಸಲಾಯಿತು.

ಕಾರ್ಯಾಚರಣೆಯ ಭಾಗವಾಗಿ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು ಹಾಗೂ ಇತರ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿರುವವರ ತಪಾಸಣೆಯನ್ನೂ ನಡೆಸಲಾಯಿತು.

ಪರಿಶೀಲನೆಯ ವೇಳೆ ಹಲವು ಬಾರ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಿಬ್ಬಂದಿ, ಸಂಸ್ಥೆಗಳನ್ನು ಮುಚ್ಚುವ ಸಮಯವಾದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಹೊರಗೆ ಕಳುಹಿಸಿದರು.

ಕಾರ್ಯಾಚರಣೆಯಲ್ಲಿ ಪತ್ತೆಯಾದ ಸಂಭಾವ್ಯ ನಿಯಮ ಉಲ್ಲಂಘನೆಗಳ ಕುರಿತು ಪೊಲೀಸರು ಪರಿಶೀಲನೆ ನಡೆಸಲಿದ್ದು, ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments