

ಬೆಳಗಾವಿ: ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಾಟದ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 24,000 ಲೀಟರ್ ಅಕ್ರಮ ಮದ್ಯ ತುಂಬಿದ್ದ ಭರತ್‌ಬೆಂಜ್ ಟ್ಯಾಂಕರ್ ಅನ್ನು ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮೀಪ ಶನಿವಾರ ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಟ್ಯಾಂಕರ್ ಮತ್ತು ಮದ್ಯದ ಒಟ್ಟು ಮೌಲ್ಯ 32.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಅಬಕಾರಿ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಶನಿವಾರ ಮಧ್ಯರಾತ್ರಿ ಸುಮಾರು 12.25ಕ್ಕೆ ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಕೆಎ-25-ಎಎ-3750 ನೋಂದಣಿ ಸಂಖ್ಯೆಯ ಭಾರತ್‌ಬೆನ್ಜ್ ಟ್ಯಾಂಕರ್ ಅನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಇದರ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಬೋಳಚಿಕ್ಕಲಕಿ ಗ್ರಾಮದ ನಿವಾಸಿ, ಟ್ಯಾಂಕರ್ ಚಾಲಕ ಬಂಡೆನವಾಜ್ ನಬಿ ಸಾಬ್ ತಿಗಣಿಬಿದರಿ ಅವರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ರ ಸೆಕ್ಷನ್ 35(3)ರ ಅಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ವಾಹನದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ಪ್ರಥಮ ಮಾಹಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ಕೇಂದ್ರ ಕಚೇರಿಯ ಅಬಕಾರಿ ಹೆಚ್ಚುವರಿ ಆಯುಕ್ತರು, ಬೆಳಗಾವಿ ವಿಭಾಗದ ಜಂಟಿ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ರಾಮದುರ್ಗ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಬೈಲಹೊಂಗಲ ಅಬಕಾರಿ ವಲಯದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.