ಬೆಂಗಳೂರು : ಇಂದು ನಮ್ಮ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಗಾಂಧಿ ಭವನದಲ್ಲಿ ಭಾರತ ಯಾತ್ರ ಕೇಂದ್ರ ಹಾಗೂ ಲೋಕನಾಯಕ ಜೆ.ಪಿ. ವಿಚಾರ ವೇದಿಕೆಯ ವತಿಯಿಂದ ಆಯೋಜಿಸಿದ್ದ ‘ಜಯಪ್ರಕಾಶ್ ನಾರಾಯಣ್ ಹುಟ್ಟುಹಬ್ಬ’ ಹಾಗೂ ಜೆ.ಪಿ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ವಾಧಿಕಾರ, ಭ್ರಷ್ಟಾಚಾರ ಇದೆ. ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಮತಗಳನ್ನು ತೆಗೆದುಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿನಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಅದರಿಂದ ಮಾಜಿ ಸಂಸದ ವಿ.ಎಸ್. ಉಗ್ರಪ್ಪನವರು ಈ ಹಿನ್ನೆಲೆಯಲ್ಲಿ ಇನ್ನೊಂದು ಸ್ವಾತಂತ್ರ್ಯ ಹೋರಾಟ ಆಗಬೇಕಿದೆ ಎಂದು ಹೇಳಿರುವುದರಲ್ಲಿ ಅರ್ಥ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ದೇಶದಲ್ಲಿ ಬದಲಾವಣೆ ಆಗಲೇಬೇಕು. ಕ್ರಾಂತಿ ಆಗಬೇಕು. ಅದಕ್ಕಾಗಿಯೇ ಜೆಪಿಯವರು ಸಂಪೂರ್ಣ ಕ್ರಾಂತಿ ಎಂದು ಕರೆದಿದ್ದರು. ಇನ್ನೊಂದು ಸಂಪೂರ್ಣ ಕ್ರಾಂತಿ ಆಗಬೇಕಿರುವ ಅವಶ್ಯಕತೆ ಇದೆ. ಜೆಪಿಯವರ ಹೋರಾಟ, ಲೋಹಿಯಾ ಅವರ ಹೋರಾಟ, ಗಾಂಧೀಜಿಯವರ ಹೋರಾಟ, ವಿನೋಬಾ ಭಾವೆಯವರ ಹೋರಾಟ ನಮಗೆ ಮಾರ್ಗದರ್ಶನವಾಗಲಿ ಎಂದು ಅವರು ಅಭಿಪ್ರಾಯಪಟ್ಟರು.
ಇದೀಗ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ), ಯುವಜನರು ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟವು ಹೋರಾಟ ಮಾಡುತ್ತಿದೆ. ಇದು ಯಾವ ರೂಪ ತಾಳುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಭ್ರಷ್ಟಾಚಾರ ಹೆಚ್ಚಾಗಿರುವ, ಸಾಂವಿಧಾನಿಕ ಹುದ್ದೆಗಳನ್ನು ಕೈಗೊಂಬೆ ಮಾಡಿಕೊಂಡಿರುವ, ಮತ ಕಿತ್ತುಕೊಳ್ಳುವ, ಅಘೋಷಿತ ತುರ್ತು ಪರಿಸ್ಥಿತಿ ಹೇರುವ ಮೂಲಕ ಸರ್ವಾಧಿಕಾರದ ಕಡೆಗೆ ದೇಶ ಚಲಿಸುತ್ತಿರುವ ಕಾಲದಲ್ಲಿ ಮತ್ತೊಂದು ಸಂಪೂರ್ಣ ಕ್ರಾಂತಿ ಅಗತ್ಯ’ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಅವರು ಹೇಳಿದರು.
ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಯುವಕರಲ್ಲಿ ಬದಲಾವಣೆಯನ್ನು ಉಂಟು ಮಾಡುವ ಮೂಲಕ ದೇಶದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು ಎಂದು ಹೇಳುತ್ತಿದ್ದರು. ಸ್ವಜನ ಪಕ್ಷಪಾತ, ತುರ್ತುಪರಿಸ್ಥಿತಿ ವಿರುದ್ಧ ಅವರು ಸಂಪೂರ್ಣ ಕ್ರಾಂತಿ ಆಂದೋಲನ ಕಟ್ಟಿದ್ದರು. ಈಗ ಗಾಂಧೀಜಿ, ಲೋಹಿಯಾ, ಜೆ.ಪಿ, ವಿನೋಬಾ ಭಾವೆ ಅವರ ಚಿಂತನೆಗಳ ಸ್ಫೂರ್ತಿಯಲ್ಲಿ ಮತ್ತೆ ಕ್ರಾಂತಿಯಾಗಬೇಕು ಎಂದು ಹೇಳಿದರು.