ಕಲಬುರಗಿ: ಬ್ಯಾಂಕಿಂಗ್ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಮರ್ ಖಂಡ್ರೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಆ ಕುರತು ವರದಿ ಇಲ್ಲಿದೆ:
ಆರೋಪವೇನು?
ಅಮರ್ ಖಂಡ್ರೆ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಮತ್ತು ಸಹಕಾರ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿ, ಮೂರನೇ ಬಾರಿಗೆ ನಿಯಮ ಬಾಹಿರವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ ಎಂದು ಆರೋಪಿಸಿ, ಬ್ಯಾಂಕ್ ಸದಸ್ಯರಾದ ಅತಿವಾಳ ಕಪಲಾಪುರ ಮತ್ತು ಶಿವರಾಜ್ ವೀರಶೆಟ್ಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ಆರ್‌ಬಿಐ ತಿದ್ದುಪಡಿ ಹಾಗೂ ಬ್ಯಾಂಕಿಂಗ್ ರೆಗ್ಯೂಲೇಶನ್ ಕಾಯ್ದೆಯ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಮೂರನೇ ಅವಧಿಗೆ ಬ್ಯಾಂಕ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತಿಲ್ಲ ಎಂದು ಅರ್ಜಿದಾರರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಮುಂದುವರೆದು, ಈ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠವು ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಅಮರ್ ಖಂಡ್ರೆಗೆ ನೋಟಿಸ್ ಜಾರಿ ಮಾಡಿದೆ. ಅಷ್ಟೇ ಅಲ್ಲದೆ, ಮುಂಬರುವ ನವೆಂಬರ್ 5 ರೊಳಗೆ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಹೈಕೋರ್ಟ್ ಕಡಕ್ ನಿರ್ದೇಶನ ನೀಡಿದೆ.
ಅಮರ್ ಖಂಡ್ರೆ ಅವರ ಅಧಿಕಾರಾವಧಿಯ ವಿವರ:
ಮೊದಲ ಅವಧಿ: 2013ರ ಅಕ್ಟೋಬರ್ 19 ರಂದು ಐದು ವರ್ಷಗಳ ಕಾಲ ನಿರ್ದೇಶಕರಾಗಿ ಆಯ್ಕೆ.
ಎರಡನೇ ಅವಧಿ: 2018ರ ಅಕ್ಟೋಬರ್ 21 ರಂದು ಪುನರಾಯ್ಕೆ.
ಮೂರನೇ ಅವಧಿ: 2026ರ ಅಕ್ಟೋಬರ್ 4 ರಂದು ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.