ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮುಂದೆ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಹೇಳಿದ್ದಾರೆ.
ಬ್ಲಿಂಕಿಟ್ ಆ್ಯಪ್ ನಲ್ಲಿ ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ವಸ್ತುಗಳನ್ನು ಮನೆಗೆ ತಲುಪಿಸುವಂತೆ, ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಿದ ಕೂಡಲೇ ಬಂದು ಮುಚ್ಚುವಂತಹ ವ್ಯವಸ್ಥೆಯನ್ನು ಭವಿಷ್ಯದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಗಮನ ಕೇಂದ್ರೀಕರಿಸುತ್ತೇವೆ ಎಂದು ಮಹೇಶ್ವರ ರಾವ್ ತಿಳಿಸಿದ್ದಾರೆ.
GBA ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮಹೇಶ್ವರ್ ರಾವ್ ಅವರು, ಜಿಬಿಎನಲ್ಲಿ ಕೋಟ್ಯಂತರ ರು. ಹಣವಿದ್ದರೂ ಒಂದು ಗುಂಡಿ ಮುಚ್ಚಲು ಏಕೆ ಅಷ್ಟೊಂದು ಸಮಯ ತೆಗೆದುಕೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದಾರೆ.
ಮಳೆಗಾಲದಲ್ಲೇ ನಮಗೆ ಗುಂಡಿ ಸಮಸ್ಯೆ ಹೆಚ್ಚು ಕಂಡು ಬರುತ್ತವೆ. ಆದರೆ, ಮಳೆಗಾಲದಲ್ಲೇ ಗುಂಡಿ ಸಮಸ್ಯೆ ಹೆಚ್ಚಾಗಲು ಕಾರಣ ರಸ್ತೆಗಳ ಗುಣಮಟ್ಟ. ನಮ್ಮ ರಸ್ತೆ ಗುಣಮಟ್ಟ ಸಾಕಷ್ಟು ಸುಧಾರಣೆಯಾಗಬೇಕು ಎನ್ನುವುದರ ಬಗ್ಗೆ ನನ್ನ ಸಹಮತವಿದೆ. ಆದರೆ, ಮಳೆಗಾಲದಲ್ಲಿ ಗುಂಡಿ ಮುಚ್ಚಲಾಗದು. ವೆಟ್ ಮಿಕ್ಸ್ ಮಾತ್ರ ಹಾಕಬಹುದು ಎಂದರು.
ನಮ್ಮಲ್ಲಿ ರಸ್ತೆಯ ಅಡಿಯಲ್ಲೇ ಡ್ರೈನೇಜ್ ಮತ್ತು ನೀರಿನ ಪೈಪ್‌ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. 20-30 ವರ್ಷಗಳಷ್ಟು ಹಳೇ ಪೈಪ್‌ಲೈನ್ ಆಗಾಗ ಬದಲಾವಣೆ ಮಾಡಬೇಕಾಗುತ್ತದೆ, ಹಾಗೆ ಮಾಡದ ಕಾರಣ ಸಹಜವಾಗಿಯೇ ಇಂತಹ ಪೈಪ್‌ಲೈನ್‌ಗಳಲ್ಲಿ ಸೋರಿಕೆಯಾಗಿ ಹಲವೆಡೆ ಗುಂಡಿ ಬೀಳುತ್ತಿವೆ ಎಂದು ಆಯುಕ್ತರು ಹೇಳಿದ್ದಾರೆ.