ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹ ಜ್ಯೋತಿ ಫಲಾನುಭವಿಗಳಿಗೆ ಶಾಕ್! ಬೆಂಗಳೂರಿನಲ್ಲಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಸುಮಾರು 16 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಯೋಜನೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಆ ಕುರಿತ ವರದಿ ಇಲ್ಲಿದೆ:
16 ಲಕ್ಷ ಗ್ರಾಹಕರು ಹೊರಗುಳಿಯುವ ಸಾಧ್ಯತೆ ಯಾಕೆ?
ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 69 ಲಕ್ಷ ಫಲಾನುಭವಿಗಳಿದ್ದಾರೆ. ಬೆಸ್ಕಾಂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳನ್ನು ಮರು ಪರಿಶೀಲಿಸುವಾಗ 16.09 ಲಕ್ಷ ಮನೆಗಳು ಬೀಗ ಹಾಕಿದ ಸ್ಥಿತಿಯಲ್ಲಿದ್ದವು ಹಾಗೂ 28,519 ಮನೆಗಳು ಖಾಲಿ ಇದ್ದವು. ಮೀಟರ್ ರೀಡರ್ಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಮೂರಕ್ಕೂ ಹೆಚ್ಚು ಬಾರಿ ಮನೆಗಳಿಗೆ ಭೇಟಿ ನೀಡಿದರೂ ಮಾಹಿತಿ ಸಿಕ್ಕಿಲ್ಲ. ಹಾಗಾಗಿ, ಈ ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ಸಾಧ್ಯವಾಗದ ಕಾರಣ, ಇವರೆಲ್ಲರನ್ನೂ ತಾತ್ಕಾಲಿಕವಾಗಿ ಯೋಜನೆಯಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ, ಬಹುತೇಕ ಮನೆಗಳಿಗೆ ಬೀಗ ಹಾಕಿರುವುದು ಅಥವಾ ಬಾಡಿಗೆದಾರರು ಮನೆ ಖಾಲಿ ಮಾಡಿ ಬೇರೆಡೆ ತೆರಳಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಇದರೊಂದಿಗೆ, ಸುಮಾರು 5.5 ಲಕ್ಷ ಗ್ರಾಹಕರು ತಮ್ಮ ವೈಯಕ್ತಿಕ ವಿವರ ಹಾಗೂ ದಾಖಲೆಗಳನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ.
ಅಕ್ಟೋಬರ್ 31, 2026 ಕೊನೆಯ ಅವಕಾಶ!
ಬೀಗ ಹಾಕಿದ ಮನೆಯ ಮಾಲೀಕರು ಮತ್ತು ಬಾಡಿಗೆದಾರರಿಗೆ ಅನುಕೂಲ ಮಾಡಿಕೊಡಲು ಬೆಸ್ಕಾಂ ಅಕ್ಟೋಬರ್ 31, 2026 ರವರೆಗೆ ಅಂತಿಮ ಗಡುವನ್ನು ವಿಸ್ತರಿಸಿದೆ. ಇದು ಸರ್ಕಾರ ನೀಡುತ್ತಿರುವ ಕೊನೆಯ ಮತ್ತು ಏಕೈಕ ಅವಕಾಶವಾಗಿದ್ದು, ಇಂಧನ ಇಲಾಖೆಯು ಮತ್ತೊಮ್ಮೆ ಈ ಪ್ರಕ್ರಿಯೆಯನ್ನು ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗಾಗಿ, ಫಲಾನುಭವಿಗಳು ಈಗ ಏನು ಮಾಡಬೇಕು?
ಈ ಹಿಂದೆ ಮನೆ ಬೀಗ ಹಾಕಿದ್ದ ಕಾರಣ ಸಮೀಕ್ಷೆಯಿಂದ ವಂಚಿತರಾದ ಗ್ರಾಹಕರು ತಕ್ಷಣವೇ ತಮ್ಮ ಹತ್ತಿರದ ಬೆಸ್ಕಾಂ ಉಪ-ವಿಭಾಗೀಯ ಕಚೇರಿಗೆ ಭೇಟಿ ನೀಡಬೇಕು. ಈ ವೇಳೆ, ಕಚೇರಿಗೆ ಹೋಗುವಾಗ ಆಧಾರ್ ಕಾರ್ಡ್, ವೋಟರ್ ಐಡಿ, ಇತ್ತೀಚಿನ ವಿದ್ಯುತ್ ಬಿಲ್ ಮತ್ತು ಬಾಡಿಗೆದಾರರಾಗಿದ್ದರೆ ಬಾಡಿಗೆ ಕರಾರು ಪತ್ರವನ್ನು ಕೊಂಡೊಯ್ದು ಪರಿಶೀಲನೆ ಪೂರ್ಣಗೊಳಿಸಬೇಕು.