ಬೆಂಗಳೂರು: ಅಕ್ರಮವಾಗಿ 10 ಕೋಟಿ ರೂಪಾಯಿ ನಗದು ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ. ವಕೀಲ ಪ್ರಶಾಂತ್ ಮೆಥಲ್ ಅವರು ಐಟಿ ಮತ್ತು ಇಡಿಗೆ ದೂರು ಸಲ್ಲಿಸಿದ್ದು, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿಸುವ ನಟ ದರ್ಶನ್ ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮಿ ಕಾನೂನಿನ ಹೋರಾಟ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಮೊದಲು ಧನ್ವೀರ್ ಗೌಡ ಕೂಡ ಸಾಥ್ ನೀಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ನಡುವೆ ಕಿರಿಕ್ ಆಗಿದ್ದು ಪರಸ್ಪರ ಇಬ್ಬರು ಆರೋಪ-ಪ್ರತ್ಯಾರೋಪ ಮಾಡಿದ್ದರು.
ಇನ್ನು ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ 10 ಕೋಟಿ ರೂಪಾಯಿ ಹಣ ವರ್ಗಾವಣೆ ನಡೆದಿದೆ ಎನ್ನಲಾಗಿದೆ. ಈ ಅಕ್ರಮ ವ್ಯವಹಾರದ ಸಂಪೂರ್ಣ ತನಿಖೆ ನಡೆಸುವಂತೆ ಪ್ರಶಾಂತ್ ಮೆಥಲ್ ಮನವಿ ಮಾಡಿದ್ದಾರೆ. ನಿಯಮಗಳ ಪ್ರಕಾರ 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವ್ಯವಹಾರ ಮಾಡುವಂತಿಲ್ಲ. ಆದರೆ ಈ ಪ್ರಕರಣದಲ್ಲಿ ಕಾನೂನು ಮೀರಿ ಬರೋಬ್ಬರಿ 10 ಕೋಟಿ ರೂಪಾಯಿ ನಗದು ರೂಪದಲ್ಲಿ ವ್ಯವಹಾರ ನಡೆಸಲಾಗಿದೆ. ಈ ಭಾರಿ ಪ್ರಮಾಣದ ಹಣದ ಮೂಲ ಯಾವುದು ಮತ್ತು ಈ ಅಕ್ರಮ ವಹಿವಾಟಿನ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.