ಸಂಗ್ರಹ ಚಿತ್ರ 
ರಾಜ್ಯ

ರೈಲಿನಲ್ಲಿ ನೀರಿಲ್ಲದೆ ಪ್ರಯಾಣಿಕರ ಪರದಾಟ: ರೈಲ್ವೆ ಇಲಾಖೆ ಬೇಜವಾಬ್ದಾರಿತನಕ್ಕೆ ಕೋರ್ಟ್ ಚಾಟಿ; ₹16,000 ದಂಡ..!

ರೈಲ್ವೆ ಇಲಾಖೆಯ ಈ ಬೇಜವಾಬ್ದಾರಿತನವನ್ನು 'ಸೇವೆಯಲ್ಲಾದ ಗಂಭೀರ ಲೋಪ' ಎಂದು ಪರಿಗಣಿಸಿರುವ ನ್ಯಾಯಾಲಯ, ತೊಂದರೆಗೊಳಗಾದ ಪ್ರಯಾಣಿಕರಿಗೆ ಒಟ್ಟು ರೂ.16,000 ಪರಿಹಾರ ಹಾಗೂ ಕಾನೂನು ವೆಚ್ಚ ಪಾವತಿಸುವಂತೆ ಆದೇಶಿಸಿದೆ.

ಶಿವಮೊಗ್ಗ: ರೈಲಿನಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲಸೌಕರ್ಯವಾದ ಕುಡಿಯುವ ನೀರು ಹಾಗೂ ಶೌಚಾಲಯಕ್ಕೆ ನೀರು ಒದಗಿಸದ ರೈಲ್ವೆ ಇಲಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಚಾಟಿ ಬೀಸಿದೆ.

ರೈಲ್ವೆ ಇಲಾಖೆಯ ಈ ಬೇಜವಾಬ್ದಾರಿತನವನ್ನು 'ಸೇವೆಯಲ್ಲಾದ ಗಂಭೀರ ಲೋಪ' ಎಂದು ಪರಿಗಣಿಸಿರುವ ನ್ಯಾಯಾಲಯ, ತೊಂದರೆಗೊಳಗಾದ ಪ್ರಯಾಣಿಕರಿಗೆ ಒಟ್ಟು ರೂ.16,000 ಪರಿಹಾರ ಹಾಗೂ ಕಾನೂನು ವೆಚ್ಚ ಪಾವತಿಸುವಂತೆ ಆದೇಶಿಸಿದೆ.

ಶಿವಮೊಗ್ಗದ ಬಸವನಗುಡಿಯ ಲೋಕೋಪಯೋಗಿ ಇಲಾಖೆ ವಸತಿಗೃಹದ ನಿವಾಸಿ ನಾಗೇಂದ್ರ ಅವರು 23 ಮಂದಿ ಕುಟುಂಬಸ್ಥರು ಮತ್ತು ಸಂಬಂಧಿಕರೊಂದಿಗೆ ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಯಲಹಂಕದಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ವಾಪಸಾಗುತ್ತಿದ್ದರು.

ಈ ವೇಳೆ ಅವರು ಸಾಮಾನ್ಯ ಟಿಕೆಟ್‌ಗಳಿಗಾಗಿ 1,000 ರೂ. ಪಾವತಿಸಿದ್ದರು. ರೈಲು ಸಂಖ್ಯೆ 6675ರಲ್ಲಿ ಪ್ರಯಾಣಿಸುತ್ತಿದ್ದಾಗ ಶೌಚಾಲಯಗಳಲ್ಲಿ ನೀರಿನ ಪೂರೈಕೆ ಇಲ್ಲದಿರುವುದು ಗಮನಕ್ಕೆ ಬಂದಿದೆ.

ಈ ಕುರಿತು ತುಮಕೂರು ರೈಲು ನಿಲ್ದಾಣದ ನಿಲ್ದಾಣಾಧಿಕಾರಿಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ನಾಗೇಂದ್ರ ತಿಳಿಸಿದ್ದಾರೆ. ಬಳಿಕ ಅವರು ತುಮಕೂರಿನಲ್ಲಿ ರೈಲಿನಿಂದ ಇಳಿದು, ಮತ್ತೊಂದು ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮುಂದುವರಿಸಲು ಹೆಚ್ಚುವರಿಯಾಗಿ 1,760 ರೂ. ಪಾವತಿಸಬೇಕಾಯಿತು.

ಟಿಕೆಟ್ ದರ ಮರುಪಾವತಿಸುವಂತೆ ನೋಟಿಸ್ ನೀಡಿದರೂ ಉತ್ತರ ಬಾರದ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ರೈಲ್ವೆ ಸೇವೆಯಲ್ಲಿ ಲೋಪವಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.

ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಭಂಡ್ಯ ಅವರನ್ನೊಳಗೊಂಡ ಪೀಠವು, ಬೆಂಗಳೂರಿನ ನೈಋತ್ಯ ರೈಲ್ವೆಯ ನಿಲ್ದಾಣಾಧಿಕಾರಿ ಹಾಗೂ ತುಮಕೂರು ನಿಲ್ದಾಣಾಧಿಕಾರಿಗೆ ಮೂಲ ಟಿಕೆಟ್ ದರವಾದ 1,000 ರೂ. ಅನ್ನು ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಆದೇಶಿಸಿದೆ. ಈ ಬಡ್ಡಿಯನ್ನು 2025ರ ಏಪ್ರಿಲ್ 15ರಿಂದ ಲೆಕ್ಕ ಹಾಕಬೇಕು.

ಆದೇಶ ಹೊರಡಿಸಿದ 45 ದಿನಗಳೊಳಗೆ ಹಣ ಪಾವತಿಸಬೇಕು. ತಪ್ಪಿದಲ್ಲಿ ಸಂಪೂರ್ಣ ಹಣ ಪಾವತಿಯಾಗುವವರೆಗೆ ವಾರ್ಷಿಕ ಶೇ. 10ರ ಬಡ್ಡಿ ವಿಧಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಇದರ ಜೊತೆಗೆ, ಪ್ರಯಾಣಿಕರಿಗೆ ಪರಿಹಾರವಾಗಿ 10,000 ರೂ. ಹಾಗೂ ವ್ಯಾಜ್ಯದ ವೆಚ್ಚವಾಗಿ 5,000 ರೂ. ಪಾವತಿಸುವಂತೆಯೂ ಆದೇಶಿಸಲಾಗಿದೆ. ಈ ಮೊತ್ತವನ್ನೂ 45 ದಿನಗಳೊಳಗೆ ಪಾವತಿಸಬೇಕು. ಗಡುವಿನೊಳಗೆ ಪಾವತಿಸದಿದ್ದರೆ, ಬಾಕಿ ಮೊತ್ತದ ಮೇಲೆ ವಾರ್ಷಿಕ ಶೇ. 10ರ ಬಡ್ಡಿ ಅನ್ವಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಆಂಧ್ರ ಪ್ರದೇಶದ ನರ್ಸಾಪುರ ಬಳಿ ಕರಾವಳಿ ದಾಟಿದ 'ಅರ್ನಬ್' ಚಂಡಮಾರುತ; ತೀವ್ರತೆ ಇಳಿಕೆ, ಇಬ್ಬರು ಸಾವು

ಪ್ರಾಜೆಕ್ಟ್ ಚೀತಾ ಯೋಜನೆಗೆ ಅತಿ ದೊಡ್ಡ ಹಿನ್ನೆಡೆ! ಕುನೋದಲ್ಲಿ ಬೇಟೆಗಾರರ ಗುಂಡಿಗೆ ಬಲಿಯಾಯ್ತಾ ಚೀತಾ ಮರಿ?

ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಕ್ರಮ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಜೈಲಿನಿಂದ ಕೈದಿಗಳು ಪರಾರಿಯಾಗುವುದನ್ನು ತಡೆಯಲು ಬಂದೂಕು ಬಳಸಲು ತಮಿಳುನಾಡು ಕಾರಾಗೃಹ ಇಲಾಖೆ ಅನುಮತಿ!