ರಾಜ್ಯ

'ಆತ ನನ್ನ ವಿಡಿಯೊ ಮಾಡುತ್ತಿದ್ದ, ನನಗೆ ನಿಜಕ್ಕೂ ಭಯವಾಯಿತು' : ಪೊಲೀಸರಿಗೆ ದೂರು ನೀಡಿದ ಯುವತಿ; ಮೆಟ್ರೊದಲ್ಲಿ ಆಗಿದ್ದೇನು?; Video

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನನ್ನು ಸೌಪಿಕಾ ಎಂದು ಗುರುತಿಸಿಕೊಂಡಿರುವ ಯುವತಿ, ನಿನ್ನೆ ಮಂಗಳವಾರ ಸಂಜೆ ಸುಮಾರು 4.30ರ ವೇಳೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ಮೆಟ್ರೋ ರೈಲಿನಲ್ಲಿ ತನ್ನ ಅನುಮತಿಯಿಲ್ಲದೆ ರಹಸ್ಯವಾಗಿ ವಿಡಿಯೋ ಮಾಡುತ್ತಿದ್ದ ಸಹ ಪ್ರಯಾಣಿಕನೊಬ್ಬನನ್ನು ಯುವತಿ ತರಾಟೆಗೆ ತೆಗೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನನಗೆ ಬಹಳ ಭಯವಾಗಿದೆ. ಮೆಟ್ರೋದಲ್ಲಿ ನನ್ನ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದೇನೆ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವತಿಯು ಆರೋಪಿತ ಯುವಕನನ್ನು ಪ್ರಶ್ನಿಸುತ್ತಿದ್ದು, ಆತನ ಮೊಬೈಲ್ ಫೋನ್ ಅನ್‌ಲಾಕ್ ಮಾಡುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ತನ್ನನ್ನು ಸೌಪಿಕಾ ಎಂದು ಗುರುತಿಸಿಕೊಂಡಿರುವ ಯುವತಿ, ನಿನ್ನೆ ಮಂಗಳವಾರ ಸಂಜೆ ಸುಮಾರು 4.30ರ ವೇಳೆಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಯುವತಿ, ಸಹ ಪ್ರಯಾಣಿಕನೊಬ್ಬ ತನ್ನನ್ನು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಅವರು ತೀವ್ರ ಆತಂಕಕ್ಕೊಳಗಾಗಿರುವುದು ಕಂಡುಬಂದಿದೆ.

ಘಟನೆ ನಡೆದ ಸಂದರ್ಭದಲ್ಲಿ ತಾನು ಧರಿಸಿದ್ದ ಉಡುಪನ್ನೂ ವಿಡಿಯೋದಲ್ಲಿ ತೋರಿಸಿರುವ ಯುವತಿ, ಮೈತುಂಬ ಬಟ್ಟೆ ಧರಿಸಿದ್ದರೂ ಇಂತಹ ಘಟನೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ದೇಹದ ಯಾವುದೇ ಭಾಗ ಕಾಣಿಸುತ್ತಿಲ್ಲ ಎಂದು ಹೇಳಿರುವ ಅವರು, ಈ ಘಟನೆಗೂ ತಾನು ಧರಿಸಿದ್ದ ಉಡುಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಮೆಟ್ರೋದಲ್ಲೇ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ಯುವತಿ

ತನ್ನನ್ನು ವಿಡಿಯೋ ಮಾಡುತ್ತಿದ್ದಾನೆ ಎಂದು ಆರೋಪಿಸಿದ ವ್ಯಕ್ತಿಯನ್ನು ಯುವತಿ ಮೆಟ್ರೋ ರೈಲಿನಲ್ಲೇ ಪ್ರಶ್ನಿಸಿದ್ದಾರೆ. ಆತನ ಮೊಬೈಲ್ ಫೋನ್ ಹಿಡಿದುಕೊಂಡು, ನನ್ನ ವಿಡಿಯೋ ಏಕೆ ಮಾಡುತ್ತಿದ್ದಿ ಎಂದು ಪದೇಪದೇ ಪ್ರಶ್ನಿಸಿದ್ದಾರೆ.

ಒಂದು ಹಂತದಲ್ಲಿ ಮೊಬೈಲ್ ಅನ್‌ಲಾಕ್ ಮಾಡುವಂತೆ ಯುವತಿ ಒತ್ತಾಯಿಸಿದಾಗ ಅನ್ ಲಾಕ್ ಮಾಡುತ್ತೇನೆ ಫೋನ್ ಕೊಡಿ ಎಂದು ವ್ಯಕ್ತಿ ಉತ್ತರಿಸಿದ್ದಾನೆ.

ಈ ವೇಳೆ ಮೆಟ್ರೋ ಭದ್ರತಾ ಸಿಬ್ಬಂದಿಯೂ ಸ್ಥಳದಲ್ಲಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ನಾನು ಆತನ ಮೊಬೈಲ್ ಫೋನ್ ಹಿಡಿದುಕೊಂಡಿದ್ದೆ. ಮೆಟ್ರೋ ನಿಲ್ದಾಣ ಬಂದಾಗ ಆತ ರೈಲಿನಿಂದ ಇಳಿದು ಓಡಿಹೋದ. ನಾನು ಆತನ ಮೊಬೈಲ್ ನ್ನು ಭದ್ರತಾ ಸಿಬ್ಬಂದಿಗೆ ನೀಡಿದ್ದೆ. ಆತ ಅದನ್ನು ಕಸಿದುಕೊಂಡು ಪರಾರಿಯಾದ. ಬೆಂಗಳೂರಿನ ಜನರೇ, ದಯವಿಟ್ಟು ಈ ವ್ಯಕ್ತಿಯನ್ನು ಪತ್ತೆಹಚ್ಚಿ. ಆತ ಕೆಲಸ ಮಾಡುವ ಕಂಪನಿ ಹಾಗೂ ಆತನ ಕುಟುಂಬವನ್ನು ಪತ್ತೆಹಚ್ಚಿ. ನಾನು ಮೆಟ್ರೋ ನಿಲ್ದಾಣದಲ್ಲಿ ಅಧಿಕೃತ ದೂರು ದಾಖಲಿಸಿದ್ದೇನೆ. ಏಳು ದಿನಗಳಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ.

'ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ'

ಮೆಟ್ರೋ ನಿಲ್ದಾಣದ ಲಿಫ್ಟ್‌ನಲ್ಲಿಯೂ ಯುವತಿ ಮತ್ತು ಆರೋಪಿತ ವ್ಯಕ್ತಿಯ ನಡುವಿನ ವಾಗ್ವಾದ ಮುಂದುವರಿದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ನಾನು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಯುವತಿ ಎಚ್ಚರಿಸಿದ್ದಾರೆ. ಅದಕ್ಕೆ ಆತ ನನ್ನನ್ನು ಕ್ಷಮಿಸಿ ಎಂದು ಪ್ರತಿಕ್ರಿಯಿಸಿದ್ದಾನೆ.

ಆಗ ಯುವತಿ, ಕ್ಷಮೆ ಕೇಳುತ್ತಿದ್ದೀಯಾ, ಹಾಗಾದರೆ ನನ್ನ ವಿಡಿಯೋ ಚಿತ್ರೀಕರಿಸಿರುವುದನ್ನು ಒಪ್ಪಿಕೊಳ್ಳುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಇಲ್ಲ ಎಂದು ಉತ್ತರಿಸಿದ್ದಾನೆ.

ಹೌದಾ ನಾನು ನಿನ್ನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದೇನೆ. ನಿನಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇನೆ ಎಂದು ಯುವತಿ ಹೇಳಿದ್ದಾರೆ.

ನಂತರವೂ ಯುವತಿ ಮೊಬೈಲ್ ಅನ್‌ಲಾಕ್ ಮಾಡಿ ಪಾಸ್‌ವರ್ಡ್ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ವ್ಯಕ್ತಿ ತನ್ನ ಮೊಬೈಲ್ ನ್ನು ಮರಳಿ ಪಡೆದು ಅಲ್ಲಿಂದ ತೆರಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ವೈರಲ್ ವಿಡಿಯೋಗೆ ಬೆಂಗಳೂರು ಪೊಲೀಸರ ಪ್ರತಿಕ್ರಿಯೆ

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಬೆಂಗಳೂರು ನಗರ ಪೊಲೀಸರು ಯುವತಿಯನ್ನು ಸಂಪರ್ಕಿಸಿದ್ದಾರೆ.

ವಿಡಿಯೋದ ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆ ನಡೆದ ನಿಖರವಾದ ಸ್ಥಳದ ಮಾಹಿತಿಯನ್ನು ನೀಡಿ. ನಿಮ್ಮ ಸಂಪರ್ಕ ಸಂಖ್ಯೆಯನ್ನು ಖಾಸಗಿ ಸಂದೇಶದ ಮೂಲಕ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

ನಂತರ ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸರು,ಈ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಬಳಿಕ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಯುವತಿ, ತಾನು ಕಾಡುಗೋಡಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ತನ್ನ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಈಗಷ್ಟೇ ಕಾಡುಗೋಡಿ ಪೊಲೀಸ್ ಠಾಣೆಯಿಂದ ಹೊರಬಂದಿದ್ದೇನೆ. ಪೊಲೀಸರು ನನಗೆ ತುಂಬಾ ಸಹಕಾರ ನೀಡಿದ್ದಾರೆ. ನನ್ನ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಸಾಧ್ಯವಾದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ನನ್ನ ದೂರನ್ನು ತಕ್ಷಣ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾರೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಹೋಲುವ ಕೆಲವು ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ. ಆರೋಪಿತ ವ್ಯಕ್ತಿಯ ಗುರುತು ಶೇ.100ರಷ್ಟು ಖಚಿತವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

INDvsNZ: 'ಇವರ ತಡೆಯಲು ಹೊಸ ತಂತ್ರವೇ ಬೇಕು': ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video