ಸಾಂದರ್ಭಿಕ ಚಿತ್ರ 
ರಾಜ್ಯ

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಮಸೂದೆ ಮರುಪರಿಶೀಲನೆ ರಾಜ್ಯ ಸರ್ಕಾರ ಮುಂದು..!

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕಳೆದ ಮೂರು ವರ್ಷಗಳಿಂದ ಸಕ್ರಿಯ ಚರ್ಚೆಯಲ್ಲಿರುವ ಈ ಪ್ರಸ್ತಾವನೆಯನ್ನು ಇತರ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದುವರಿಸಲಾಗುವುದು.

ಬೆಂಗಳೂರು: ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ವಿವಾದಾತ್ಮಕ ಕರಡು ಮಸೂದೆಯನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದ್ದು, ಕಳೆದ ಮೂರು ವರ್ಷಗಳಿಂದ ಸಕ್ರಿಯ ಚರ್ಚೆಯಲ್ಲಿರುವ ಈ ಪ್ರಸ್ತಾವನೆಯನ್ನು ಇತರ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದುವರಿಸಲಾಗುವುದು ಎಂದು ಹೇಳಿದರು.

ಈ ಪ್ರಸ್ತಾವನೆಗೆ ಸರ್ಕಾರದೊಳಗೆ ಯಾವುದೇ ನೇರ ವಿರೋಧ ವ್ಯಕ್ತವಾಗಿಲ್ಲ. ಆದರೆ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇತರ ಇಲಾಖೆಗಳೊಂದಿಗೆ ಚರ್ಚೆ ನಡೆಸುವುದು ಅಗತ್ಯ. ಐಟಿ-ಬಿಟಿ ಇಲಾಖೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಅಂತಹ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಈ ಪ್ರಸ್ತಾವನೆಯನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಳೆದ ಮೂರು ವರ್ಷಗಳಿಂದಲೂ ಈ ವಿಷಯ ಸಕ್ರಿಯ ಚರ್ಚೆಯಲ್ಲಿದೆ. ಸೂಕ್ತ ಸಮಯದಲ್ಲಿ ಇದನ್ನು ಜಾರಿಗೆ ತರುತ್ತೇವೆ ಎಂದರು.

ಸುಮಾರು 18 ತಿಂಗಳ ಹಿಂದೆ ಸಚಿವ ಸಂಪುಟವು ‘ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ-2024’ಕ್ಕೆ ಅನುಮೋದನೆ ನೀಡಿತ್ತು. ಆದರೆ, ಪ್ರಸ್ತಾವಿತ ಮೀಸಲಾತಿ ಹಾಗೂ ಅದರ ಪರಿಣಾಮವಾಗಿ ಉದ್ಯಮಗಳ ಮೇಲೆ, ವಿಶೇಷವಾಗಿ ತಂತ್ರಜ್ಞಾನ ವಲಯದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಉದ್ಯಮ ವಲಯದ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಸೂದೆಯನ್ನು ತಡೆಹಿಡಿಯಲಾಗಿತ್ತು.

ಮೂಲ ಕರಡು ಮಸೂದೆಯಲ್ಲಿ ಖಾಸಗಿ ಸಂಸ್ಥೆಗಳಲ್ಲಿನ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ 50ರಷ್ಟು ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ 70ರಿಂದ 75ರಷ್ಟು ಉದ್ಯೋಗಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡುವ ಪ್ರಸ್ತಾವನೆ ಇತ್ತು. ಖಾಸಗಿ ಕೈಗಾರಿಕೆಗಳಲ್ಲಿನ ಗ್ರೂಪ್‌ ಸಿ ಮತ್ತು ಡಿ ಹುದ್ದೆಗಳನ್ನು ಶೇ 100ರಷ್ಟು ಕನ್ನಡಿಗರಿಗೆ ಮೀಸಲಿಡುವ ಉದ್ದೇಶವನ್ನೂ ಹೊಂದಿತ್ತು.

ಇದೇ ವೇಳೆ, ಸ್ಥಳೀಯರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ದೊರೆಯುವಂತೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ, ಇತರ ರಾಜ್ಯಗಳಲ್ಲಿ ಇಂತಹ ಕಾನೂನುಗಳು ಎದುರಿಸುತ್ತಿರುವ ಕಾನೂನು ಸವಾಲುಗಳನ್ನು ಪರಿಶೀಲಿಸಿದ ಬಳಿಕವೇ ಕರ್ನಾಟಕ ಮುಂದಿನ ಹೆಜ್ಜೆ ಇಡಬೇಕಿದೆ ಎಂದು ಎಚ್ಚರಿಸಿದ್ದಾರೆ.

ಸ್ಥಳೀಯ ಜನರಿಗೆ, ಅಂದರೆ ನಮ್ಮವರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಉದ್ಯೋಗ ದೊರೆಯುವಂತೆ ಮಾಡುವುದು ಕರ್ನಾಟಕ ಸರ್ಕಾರದ ಬದ್ಧತೆಯಾಗಿದೆ. ನಮ್ಮ ಮಾನವ ಸಂಪನ್ಮೂಲ ಮತ್ತು ಪ್ರತಿಭೆಗಳು ಜಗತ್ತಿನಲ್ಲೇ ಹೆಚ್ಚು ಉದ್ಯೋಗಾರ್ಹವಾಗುವಂತೆ ಮಾಡಲು ದೇಶದ ಅತಿದೊಡ್ಡ ಕೌಶಲ್ಯಾಭಿವೃದ್ಧಿ ಮತ್ತು ಮರುಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ನಾವು ನಡೆಸುತ್ತಿದ್ದೇವೆ. ಸ್ಥಳೀಯವಾಗಿ ಕೌಶಲ್ಯ ಗಳಿಸಿ, ಸ್ಥಳೀಯವಾಗಿಯೇ ಕೆಲಸ ಮಾಡುವುದು ಕರ್ನಾಟಕ ಸರ್ಕಾರದ ಧ್ಯೇಯವಾಗಿದೆ ಎಂದು ತಿಳಿಸಿದರು.

ಇತರ ರಾಜ್ಯಗಳಲ್ಲಿ ಇದೇ ರೀತಿಯ ಕ್ರಮಗಳು ಎದುರಿಸಿರುವ ಕಾನೂನು ತೊಡಕುಗಳನ್ನು ಸರ್ಕಾರ ಅಧ್ಯಯನ ಮಾಡಲಿದೆ ಎಂದ ಸಚಿವರು, ತಮಿಳುನಾಡು ಸರ್ಕಾರದ ಮಸೂದೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹರಿಯಾಣ ಮತ್ತು ಪಂಜಾಬ್‌ನಲ್ಲಿಯೂ ಇಂತಹ ಕ್ರಮಗಳು ಕಾನೂನು ಸವಾಲು ಎದುರಿಸಿವೆ. ಹೀಗಾಗಿ, ಎಲ್ಲ ಕಾನೂನು ತೊಡಕುಗಳನ್ನು ಪರಿಶೀಲಿಸಿದ ಬಳಿಕ ನಮ್ಮ ಜನರಿಗೆ ಮತ್ತು ಹೂಡಿಕೆದಾರರಿಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನೀರಿಗೇ ರೂ.30-35 ಕೊಡ್ತೀರಿ, ಹಾಲಿನ ಬೆಲೆ ಹೆಚ್ಚಾದರೆ ವಿರೋಧವೇಕೆ?: ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

'ನೋಡಲು ಅಸಹ್ಯವಾಗಿದ್ದೀಯ, ಮೊದಲು ದೇಹದ ಆಕಾರ ಸರಿಪಡಿಸಿಕೋ': ಆರೋಗ್ಯದ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಟ್ರಂಪ್ ಅವಮಾನ..!

ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ತೀವ್ರ ಪ್ರತಿಭಟನೆ..!

ದೇಶದಲ್ಲಿ ಅರಾಜಕತೆ ಸೃಷ್ಟಿಸಲು I.N.D.I.A ಒಕ್ಕೂಟ ಯತ್ನ: ಶೋಭಾ ಕರಂದ್ಲಾಜೆ ಆರೋಪ