ಬಿ.ವೈ. ವಿಜಯೇಂದ್ರ 
ರಾಜ್ಯ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಹೂಳನ್ನು ವೈಜ್ಞಾನಿಕವಾಗಿ ತೆಗೆಯಲು ಸಾಧ್ಯವೇ ಎಂಬುದನ್ನು ತಜ್ಞರು ತಕ್ಷಣವೇ ಪರಿಶೀಲಿಸಬೇಕು ಎಂದು ಹೇಳಿದರು.

ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಲು ಸಾಧ್ಯವಿದೆಯೇ ಎಂಬುದನ್ನು ಸರ್ಕಾರ ತಜ್ಞರಿಂದ ಪರಿಶೀಲಿಸಬೇಕು. ಹೂಳು ತೆರವು ತಾಂತ್ರಿಕವಾಗಿ ಅಥವಾ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಕಂಡುಬಂದರೆ, ರಾಜ್ಯ ಸರ್ಕಾರವು ತಕ್ಷಣವೇ ಸಮಾನಂತರ ಜಲಾಶಯ ನಿರ್ಮಾಣದ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಬಿಜೆಪಿಯ 'ಬಳ್ಳಾರಿ ಚಲೋ' ಪಾದಯಾತ್ರೆಯ ಐದನೇ ದಿನದ ವೇಳೆ ರೈತ ಹೋರಾಟಗಾರರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ಹೂಳನ್ನು ವೈಜ್ಞಾನಿಕವಾಗಿ ತೆಗೆಯಲು ಸಾಧ್ಯವೇ ಎಂಬುದನ್ನು ತಜ್ಞರು ತಕ್ಷಣವೇ ಪರಿಶೀಲಿಸಬೇಕು ಎಂದು ಹೇಳಿದರು.

"ಹೂಳು ತೆಗೆಯುವುದು ಸಾಧ್ಯವಿಲ್ಲ ಅಥವಾ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟರೆ, ಸರ್ಕಾರವು ಈ ವಿಷಯದಲ್ಲಿ ವಿಳಂಬ ಮಾಡಬಾರದು. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ತಕ್ಷಣವೇ ಪರ್ಯಾಯ ಜಲಾಶಯದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ರೈತರನ್ನು ಇನ್ನೂ ನಾಲ್ಕೈದು ವರ್ಷಗಳ ಕಾಲ ಕಾಯುವಂತೆ ಮಾಡಬಾರದು ಎಂದು ಅವರು ನುಡಿದರು.

ಜಲಾಶಯದಲ್ಲಿ ಸುಮಾರು 34 ಟಿಎಂಸಿ (TMC)ಯಷ್ಟು ಹೂಳು ಇದೆ ಎಂದು ಅಂದಾಜಿಸಲಾಗಿದೆ. ಅದನ್ನು ತೆಗೆಯಲು ಅಗತ್ಯವಿರುವ ತಂತ್ರಜ್ಞಾನ, ತಗಲುವ ಸಮಯ ಮತ್ತು ಅಂದಾಜು ವೆಚ್ಚದ ಬಗ್ಗೆ ಸರ್ಕಾರವು ಸ್ಪಷ್ಟ ವಿವರಣೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪ್ರಸ್ತಾವಿತ ಸಮಾಂತರ ಜಲಾಶಯದ ಕುರಿತು ವಿಧಾನ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸುವಂತೆಯೂ ಅವರು ಒತ್ತಾಯಿಸಿದರು. ಇದರಲ್ಲಿ ಆರಂಭಿಕ ಮತ್ತು ಅಂತಿಮ ವೆಚ್ಚದ ಅಂದಾಜುಗಳು, ಕಾಮಗಾರಿ ಪೂರ್ಣಗೊಳ್ಳುವ ಸಮಯ ಮತ್ತು ರಾಜ್ಯದ ಮೇಲಾಗುವ ಆರ್ಥಿಕ ಹೊರೆ ಮುಂತಾದ ವಿಷಯಗಳು ಸೇರಿರಬೇಕು ಎಂದು ಅವರು ಹೇಳಿದರು.

"ಈ ಹಿಂದೆ ಸಮಾನಾಂತರ ಜಲಾಶಯವೊಂದರ ವಿವರವಾದ ಯೋಜನಾ ವರದಿಯನ್ನು (DPR) ಸಿದ್ಧಪಡಿಸಲು 14 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು, ಆದರೆ ಆ ಯೋಜನೆ ಮುಂದುವರಿಯಲಿಲ್ಲ. ಈಗ ಈ ಯೋಜನೆಗೆ ಸುಮಾರು 22,000 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಇದರ ವೆಚ್ಚ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ನಮಗೆ ಸ್ಪಷ್ಟತೆಯ ಅಗತ್ಯವಿದೆ. ಯೋಜನೆಯ ಅನುಷ್ಠಾನದ ವೇಳೆ ವೆಚ್ಚ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ಎಚ್ಚರಿಕೆ ನೀಡಿದರು.

ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯುವಂತೆ ಬಿಜೆಪಿ ಒತ್ತಾಯಿಸಿದೆ ಎಂದು ಹೇಳಿದ ವಿಜಯೇಂದ್ರ, ತುಂಗಭದ್ರಾ ಜಲಾಶಯ, ಪ್ರಸ್ತಾವಿತ ಸಮಾನಾಂತರ ಜಲಾಶಯ, ನೀರಾವರಿ ಮತ್ತು ಉತ್ತರ ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪಕ್ಷವು ವಿಷಯಗಳನ್ನು ಪ್ರಸ್ತಾಪಿಸಲಿದೆ. ಆಡಳಿತ ಪಕ್ಷಕ್ಕೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

'ಬಳ್ಳಾರಿ ಚಲೋ' ಅಭಿಯಾನಕ್ಕೆ ಸಾರ್ವಜನಿಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯನ್ನು ಕಂಡು ಹತಾಶರಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದಾರೆ. ಈ ಹೋರಾಟವು ಸರ್ಕಾರವನ್ನು ಬರ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದೆ . ಶಿವಕುಮಾರ್ ಅವರ ಉತ್ತರ ಕರ್ನಾಟಕ ಭೇಟಿಯು ಬಿಜೆಪಿ ಹೋರಾಟದ ಫಲಿತಾಂಶವಾಗಿದೆ. "ಇದು ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರದ ವಾಗ್ದಾಳಿ ನಡೆಸಿದ ವಿಜಯೇಂದ್ರ, ಜನಪರ ಸರ್ಕಾರಕ್ಕಿಂತ ಹೆಚ್ಚಾಗಿ "ಜಾಹೀರಾತು ಸರ್ಕಾರ" ಎಂದು ಬಣ್ಣಿಸಿದರು. ಅಲ್ಲದೆ, 'ಗೃಹ ಲಕ್ಷ್ಮಿ' ಯೋಜನೆಯಡಿ (ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ. ನೆರವು ನೀಡುವ ಯೋಜನೆ) ನಡೆದಿರುವ 5,000 ಕೋಟಿ ರೂ.ಗಳ ಅವ್ಯವಹಾರದ ಆರೋಪಗಳ ಕುರಿತು ಸ್ಪಷ್ಟನೆ ಕೋರಿದರು. ಬಸ್‌ಗಳ ಕೊರತೆಯಿಂದಾಗಿ 'ಶಕ್ತಿ ಯೋಜನೆ'ಯು (ಮಹಿಳೆಯರಿಗೆ ಉಚಿತ ಬಸ್ ಸೇವೆ) ಗ್ರಾಮೀಣ ಪ್ರದೇಶಗಳಿಗೆ ಪರಿಣಾಮಕಾರಿಯಾಗಿ ತಲುಪುತ್ತಿಲ್ಲ ಮತ್ತು ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಸೈಕಲ್ ವಿತರಣಾ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.

ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉತ್ತರ ಕರ್ನಾಟಕಕ್ಕೆ ಬೃಹತ್ ಕೈಗಾರಿಕೆಗಳನ್ನು ತರಬೇಕು ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದ ವಿಜಯೇಂದ್ರ, 'ಗ್ಯಾರಂಟಿ ಯೋಜನೆ'ಗಳಿಗೆ ಹಣ ಹೊಂದಿಸಲು ಮದ್ಯದ ಅಂಗಡಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆದರೆ ನೀರಾವರಿ ಯೋಜನೆಗಳಿಗೆ ಸೂಕ್ತ ಆದ್ಯತೆ ನೀಡಿಲ್ಲ ಮತ್ತು SCSP-TSP ಅಡಿಯಲ್ಲಿನ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

"ರೈತರ ಜೀವನದೊಂದಿಗೆ ನಾವು ರಾಜಕೀಯ ಮಾಡಲು ಸಾಧ್ಯವಿಲ್ಲ. ನಾವು ನಾಳೆ ಅಧಿಕಾರಕ್ಕೆ ಬರಲಿರುವ ಪಕ್ಷವಾಗಿದ್ದೇವೆ. ಆದ್ದರಿಂದ, ರೈತರು ಮತ್ತು ಮಾಧ್ಯಮಗಳ ಮುಂದೆ ನಾವು ಆಡುವ ಪ್ರತಿಯೊಂದು ಮಾತೂ ಜವಾಬ್ದಾರಿಯುತವಾಗಿರಬೇಕು. ಮಾತನಾಡುವ ಮುನ್ನ ನಾವು ವಾಸ್ತವಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ನುಡಿದರು.

ಪಾದಯಾತ್ರೆಯ ಐದನೇ ದಿನದಂದು ಮಾಜಿ ಸಚಿವ ಬಿ. ಶ್ರೀರಾಮುಲು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ರೇಣುಕಾಚಾರ್ಯ, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಮತ್ತೊಂದು ಪವಾಡ; 10 ದಿನಗಳ ಬಳಿಕ ಇಬ್ಬರ ಜೀವಂತ ರಕ್ಷಣೆ! ಸಾವಿನ ಸಂಖ್ಯೆ 1,344 ಕ್ಕೆ ಏರಿಕೆ

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕಳಪೆ ದಾಖಲೆ ಸೃಷ್ಟಿ!

Pune Fort Murder: ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್; 3ನೇ ಆರೋಪಿ ಬಂಧನ; ಯಾರು ಈ ರಿತೇಶ್?

RCB ಹೆಸರು ಬದಲಾಗುತ್ತಾ? ವದಂತಿಗಳಿಗೆ ತೆರೆ ಎಳೆದ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ!

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ