ಬೆಂಗಳೂರು: ರಾಜಧಾನಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ಕುಖ್ಯಾತ ಕ್ರಿಮಿನಲ್ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿರುವುದು ಬೆಳಕಿಗೆ ಬಂದಿದೆ.
ಜೈಲಿನೊಳಗೆ ನ್ಯಾಯಾಂಗ ಬಂಧನದಲ್ಲಿರುವ ಮೆಹ್ರಾಜ್ ಖಾನ್ ಎಂಬ ಕೈದಿ, ಜೈಲಿನ ಕತ್ತಲ ಕೋಣೆಯಲ್ಲೇ ಕುಳಿತು ಇಡೀ ಕ್ರಿಮಿನಲ್ ನೆಟ್‌ವರ್ಕ್ ಮುನ್ನಡೆಸುತ್ತಾ, ಎದುರಾಳಿ ಗ್ಯಾಂಗ್ ಮೇಲೆ ಮಾರಣಾಂತಿಕ ದಾಳಿ ನಡೆಸಲು ಸಂಚು ರೂಪಿಸಿದ್ದ ಆಘಾತಕಾರಿ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ.
ಈ ಬೆಳವಣಿಗೆ ಜೈಲಿನ ಭದ್ರತೆ ಹಾಗೂ ಕೈದಿಗಳಿಗೆ ಅಕ್ರಮ ಮೊಬೈಲ್ ಫೋನ್‌ಗಳು ಹೇಗೆ ಲಭ್ಯವಾಗುತ್ತಿವೆ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಕುರಿತು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಂಘಟಿತ ಅಪರಾಧ ವಿಭಾಗ ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಈ ಅಪರಾಧ ಜಾಲದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ.
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೌಡಿಶೀಟರ್ ಸೈಯದ್ ಮಾಜ್ (24) ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ದೊರೆತಿತ್ತು. ಅಲ್ಲದೆ, ಆತನ ಬಳಿ ಮಚ್ಚು ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾನೆ ಎಂಬ ಮಾಹಿತಿಯೂ ಪೊಲೀಸರಿಗೆ ಲಭ್ಯವಾಗಿತ್ತು.
ತನಿಖೆ ಮುಂದುವರಿಸಿದಾಗ, ಎದುರಾಳಿ ಗ್ಯಾಂಗ್ ಸದಸ್ಯರ ಮೇಲೆ ಮಾರಣಾಂತಿಕ ದಾಳಿ ನಡೆಸಲು ಸೈಯದ್ ಮಾಜ್ ಸಂಚು ರೂಪಿಸುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಅಪರಾಧ ಸಂಚು ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿರುವಂತೆ, ವಿಚಾರಣೆ ವೇಳೆ ಸೈಯದ್ ಮಾಜ್ ಮೆಹ್ರಾಜ್ ಖಾನ್ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾನೆ. ಮೆಹ್ರಾಜ್ ಖಾನ್ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ತನಿಖೆಯಲ್ಲಿ ಮೆಹ್ರಾಜ್ ಖಾನ್ ತನ್ನ ಸಹಚರರಾದ ಸೈಯದ್ ಮಾಜ್ ಮತ್ತು ಅಫ್ಗಾನ್ ಜತೆ ಸೇರಿ ಎದುರಾಳಿ ಗ್ಯಾಂಗ್ ಮೇಲೆ ಮಾರಣಾಂತಿಕ ದಾಳಿ ನಡೆಸಲು ಸಂಚು ರೂಪಿಸಿದ್ದ ಎನ್ನುವುದು ತಿಳಿದುಬಂದಿದೆ.
ನ್ಯಾಯಾಂಗ ಬಂಧನದಲ್ಲಿದ್ದರೂ ಖಾನ್ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ತನ್ನ ಸಹಚರರೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಎದುರಾಳಿ ಗ್ಯಾಂಗ್‌ನ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸಂಗ್ರಹಿಸುವುದು ಹಾಗೂ ಅಪರಾಧ ಚಟುವಟಿಕೆಗಳನ್ನು ನಡೆಸುವಂತೆ ಆತ ತನ್ನ ಸಹಚರರಿಗೆ ಸೂಚಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೈಯದ್ ಮಾಜ್‌ಗೆ ಮೆಹ್ರಾಜ್ ಖಾನ್ ಹಣ ಪಾವತಿಸುತ್ತಿದ್ದ ಎನ್ನುವ ಆರೋಪವೂ ಇದೆ. ಪ್ರಕರಣದ ಮೂರನೇ ಆರೋಪಿ ಅಫ್ಗಾನ್‌ನನ್ನು ಆಗಸ್ಟ್ 31ರಂದು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೆಹ್ರಾಜ್ ಜೈಲಿನೊಳಗಿಂದಲೇ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದುದನ್ನು ಅಫ್ಗಾನ್ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇದರ ಜೊತೆಗೆ, ಆರೋಪಿಗಳು ಬೆಂಗಳೂರಿನಲ್ಲಿನ ಆಸ್ತಿ ವಿವಾದಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಆಸ್ತಿ ವಿವಾದಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಂದ ಹಣ ಪಡೆದು, ವಿವಾದಿತ ರಿಯಲ್ ಎಸ್ಟೇಟ್ ಆಸ್ತಿಗಳನ್ನು ತಮ್ಮ ನಿಯಂತ್ರಣಕ್ಕೆ ಪಡೆಯಲು ಅವರು ಯೋಜಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.