ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ವಿವಾದ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ ಗೆ ಹಿಂದೂ ಜಾಗರಣ ವೇದಿಕೆ ಸೆಡ್ಡು ಹೊಡೆದಿದ್ದು, ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆಯನ್ನು ಮಾಡಿದೆ.
ಅಲ್ಲದೇ, ಸೆಪ್ಟೆಂಬರ್ 18 ರಂದು ಲಿಂಕ್ ರಸ್ತೆಯಲ್ಲಿ ಹಿಂದೂ ಶೋಭಾ ಯಾತ್ರೆ ನಡೆಸಲು ಹಿಂದೂ ಪರ ಸಂಘಟನೆ ನಿರ್ಧರಿಸಿದೆ. ಈ ಕುರಿತು ಹಿಂದೂ ಜಾಗರಣ ವೇದಿಕೆಯ ಮಹೇಶ್ ಮಾಹಿತಿ ನೀಡಿದ್ದು, ಶೋಭಾಯಾತ್ರೆಯಲ್ಲಿ ಸುಮಾರು 5 ಸಾವಿರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮೈಸೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲಿ ಎಂದು ಹೇಳಿದ್ದಾರೆ.
ಮಸೀದಿ ಮುಂದೆ ಗಣೇಶೋತ್ಸವ ಮೆರವಣಿಗೆ ಸಾಗುವಂತಿಲ್ಲ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಧಮ್ಕಿ ಬೆನ್ನಲ್ಲೇ ಇದು ರಾಜಕೀಯ ವಿವಾದ ಪಡೆದುಕೊಂಡಿದೆ. ಗಣೇಶ ಭಕ್ತರಿಗೆ ಇನ್ಸ್‌ಪೆಕ್ಟರ್ ಧನಂಜಯ್ ವಾರ್ನಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ಸ್ ಪೆಕ್ಟರ್ ಧನಂಜಯ್ ಅಮಾನತಿಗೆ ಆಗ್ರಹಿಸಿ ಬಿಜೆಪಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದೆ.
ಇದೇ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನಡುವೆ ವಾಗ್ದಾಳಿ, ಪ್ರತಿದಾಳಿ ನಡೆಯುವ ಮೂಲಕ ಒಂದು ರೀತಿಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಮತ್ತೊಂದೆಡೆ ಸೆಪ್ಟೆಂಬರ್ 18 ರಂದು ಶೋಭಾಯಾತ್ರೆ ನಡೆಸಲು ಹಿಂದೂ ಜಾಗರಣ ವೇದಿಕೆ ನಿರ್ಧರಿಸಿದ್ದು, ಅಂದಿನ ವಿದ್ಯಮಾನಗಳು ತೀವ್ರ ಕುತೂಹಲ ಕೆರಳಿಸಿದೆ.