ಡಿ ಕೆ ಶಿವಕುಮಾರ್  
ರಾಜ್ಯ

ಮಂಗಳೂರಿನಲ್ಲಿ ನಾಳೆ ಸಚಿವ ಸಂಪುಟ ಸಭೆ: ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ; ಸಾರ್ವಜನಿಕರು ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟ ದರ್ಜೆಯ ಸಚಿವರು ಇಂದು ಮಂಗಳೂರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್​ ಇಲಾಖೆ ಸಾರ್ವಜನಿಕರಿಗೆ ಸಂಚಾರ ಸಲಹೆಗಳನ್ನು ಪ್ರಕಟಿಸಿದೆ.

ಮಂಗಳೂರು: ರಾಜ್ಯ ಸರಕಾರದ ಸಚಿವ ಸಂಪುಟ ಸಭೆ ನಾಳೆ ಸೆಪ್ಟೆಂಬರ್ 18ರಂದು ಮಂಗಳೂರು ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ) ಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಸಂಪುಟ ದರ್ಜೆಯ ಸಚಿವರು ಇಂದು ಮಂಗಳೂರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್​ ಇಲಾಖೆ ಸಾರ್ವಜನಿಕರಿಗೆ ಸಂಚಾರ ಸಲಹೆಗಳನ್ನು ಪ್ರಕಟಿಸಿದೆ.

ಇಂದು ಸಂಜೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಮಂಗಳೂರು ನಗರಕ್ಕೆ ಆಗಮಿಸಲಿದ್ದು, ನಾಳೆ ಬೆಳಗ್ಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಪಡೀಲ್‌ನ ಪ್ರಜಾಸೌಧಕ್ಕೆ ತೆರಳಲಿದ್ದಾರೆ. ಸಭೆ ಬಳಿಕ ಮಧ್ಯಾಹ್ನ ಮೇರಿಹಿಲ್‌ನಲ್ಲಿರುವ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ, ಬಳಿಕ ಮಂಗಳೂರು ನಗರಕ್ಕೆ ವಾಪಸಾಗಿ ವಾಸ್ತವ್ಯ ಹೂಡಲಿದ್ದಾರೆ. ಸೆ.19ರ ಬೆಳಗ್ಗೆ ಅವರು ನಗರದಿಂದ ನಿರ್ಗಮಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಗಣ್ಯರ ಭದ್ರತೆ ಹಾಗೂ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.

ಸೆ. 19ರವರೆಗೆ ಗಣ್ಯರ ಸಂಚಾರದ ಪ್ರಮುಖ ಮಾರ್ಗಗಳು

ಬಜಪೆ ವಿಮಾನ ನಿಲ್ದಾಣದಿಂದ ಕಾವೂರು–ಬೊಂದೇಲ್​–ಮೇರಿಹಿಲ್–ಕೆ.ಪಿ.ಟಿ.–ಕದ್ರಿ ಕಂಬಳ–ಬಂಟ್ಸ್ ಹಾಸ್ಟೆಲ್–ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಹಂಪನಕಟ್ಟೆ–ಕ್ಲಾಕ್ ಟವರ್–ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗದಲ್ಲಿ ಗಣ್ಯರ ಸಂಚಾರ ಇರಲಿದೆ.

ನಾಳೆ ಬೆಳಗ್ಗೆ ಹ್ಯಾಮಿಲ್ಟನ್ ಜಂಕ್ಷನ್–ಕ್ಲಾಕ್ ಟವರ್–ಹಂಪನಕಟ್ಟೆ–ಡಾ. ಬಿ.ಆರ್. ಅಂಬೇಡ್ಕರ್ ಜಂಕ್ಷನ್–ಕೆ.ಪಿ.ಟಿ. ಜಂಕ್ಷನ್–ನಂತೂರು ವೃತ್ತ–ಪಂಪುವೆಲ್–ನಾಗುರಿ–ಬಜಾಲ್ ಕ್ರಾಸ್ (ಪ್ರಜಾಸೌಧ)–ಪಡೀಲ್ ಜಂಕ್ಷನ್ ಮಾರ್ಗದಲ್ಲಿ ಸಂಚಾರ ನಡೆಯಲಿದೆ.

ಪರ್ಯಾಯ ಮಾರ್ಗಗಳ ಸೂಚನೆ: ಬದ್ರಿಯಾ ಜಂಕ್ಷನ್‌ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಬದ್ರಿಯಾ ಜಂಕ್ಷನ್–ನಿಲೇಶ್ವರ ರಸ್ತೆ–ರೋಸಾರಿಯೋ ರಸ್ತೆ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ಹ್ಯಾಮಿಲ್ಟನ್ ಜಂಕ್ಷನ್‌ನಿಂದ ತಾಜ್ ವಿವಾಂತ್ ಮುಂಭಾಗದ ಮೂಲಕ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಹ್ಯಾಮಿಲ್ಟನ್ ಜಂಕ್ಷನ್ – ನೆಲ್ಲಿಕಾಯಿ ರಸ್ತೆ ಮೂಲಕ ಪರ್ಯಾಯವಾಗಿ ಸಂಚರಿಸಬೇಕು.

ಪಂಪುವೆಲ್​ ಜಂಕ್ಷನ್‌ನಿಂದ ನಾಗುರಿ ಮೂಲಕ ಪಡೀಲ್​ ಕಡೆಗೆ ಅಥವಾ ಪಡೀಲ್‌ನಿಂದ ನಾಗುರಿ ಮೂಲಕ ಪಂಪುವೆಲ್ ಕಡೆಗೆ ತೆರಳುವ ವಾಹನಗಳು ನಂತೂರು ವೃತ್ತ – ಕೈಕಂಬ – ಮರೋಳಿ ಮಾರ್ಗವನ್ನು ಬಳಸಬಹುದು. ಪರ್ಯಾಯವಾಗಿ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು – ಬೊಳಿಯಾರ್ – ಮೆಲ್ಕಾರ್ ಮಾರ್ಗದಲ್ಲೂ ಸಂಚರಿಸಬಹುದಾಗಿದೆ.

ಬಜಾಲ್ ಕ್ರಾಸ್​ ನಿಂದ ಬಜಾಲ್​ ಅಥವಾ ಕಂಕನಾಡಿ ಜಂಕ್ಷನ್​ ರೈಲ್ವೆ ನಿಲ್ದಾಣದ ಕಡೆಗೆ ತೆರಳುವ ಮತ್ತು ಅಲ್ಲಿಂದ ಬರುವ ವಾಹನಗಳು ಪಡೀಲ್–ಬಜಾಲ್ ಕ್ರಾಸ್ ಮಾರ್ಗದ ಬದಲಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ–ಬಜಾಲ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.

ತೊಕ್ಕೊಟ್ಟು ಕಡೆಯಿಂದ ಪಂಪುವೆಲ್ ಕಡೆಗೆ ತೆರಳುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮಾರ್ಗದ ಮೂಲಕ ನಗರ ಪ್ರವೇಶಿಸುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ.

ರಸ್ತೆ ಬದಿ ವಾಹನ ನಿಲುಗಡೆಗೆ ನಿರ್ಬಂಧ: ಗಣ್ಯರ ಸಂಚಾರ ನಡೆಯುವ ಮೇಲ್ಕಂಡ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗಣ್ಯರ ಭದ್ರತೆ ಹಾಗೂ ಸಂಚಾರ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಅನಗತ್ಯವಾಗಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸುವುದನ್ನು ತಪ್ಪಿಸಿ, ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಂಚಾರ ವ್ಯವಸ್ಥೆ ಸುಗಮವಾಗಲು ಸಹಕರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರಿ" ಹಾಗೂ Follow Traffic Rules, Save Lives ಎಂಬ ಸಂದೇಶದೊಂದಿಗೆ ಪೊಲೀಸ್ ಇಲಾಖೆ ಸಾರ್ವಜನಿಕರ ಸಹಕಾರ ಕೋರಿದೆ.

ಸಿಂಗಾರಗೊಂಡ ಮಂಗಳೂರು ನಗರ: ಇಂದು ಸಂಜೆ ಕಲಬುರಗಿಯಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರು ಮಂಗಳೂರಿಗೆ ಆಗಮಿಸಲಿದ್ದು, ಶನಿವಾರದವರೆಗೆ ನಗರದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ನಗರದ ಪ್ರಮುಖ ರಸ್ತೆಗಳಿಗೆ ನವಕಳೆ: ಗಣ್ಯರ ಸ್ವಾಗತಕ್ಕಾಗಿ ಬಜಪೆ ಏರ್‌ಪೋರ್ಟ್ ರಸ್ತೆ, ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ (ಪ್ರಜಾಸೌಧ) ರಸ್ತೆ, ಸರ್ಕ್ಯೂಟ್ ಹೌಸ್ ಹಾಗೂ ತಾಜ್ ವಿವಾಂತ ಸುತ್ತಮುತ್ತಲಿನ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ರಸ್ತೆ ಡಿವೈಡರ್‌ಗಳಿಗೆ ಹೊಸದಾಗಿ ಬಣ್ಣ ಬಳಿಯಲಾಗಿದ್ದು, ಹೆಚ್ಚುವರಿ ಎಲ್‌ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಿ ಪ್ರಮುಖ ವೃತ್ತಗಳನ್ನು ಸುಂದರಗೊಳಿಸಲಾಗಿದೆ. ಸಚಿವ ಸಂಪುಟ ಸಭೆ ನಡೆಯುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ 'ಪ್ರಜಾಸೌಧ'ದ ಸುತ್ತಮುತ್ತ ವಿಶೇಷ ಅಲಂಕಾರ ಮಾಡಲಾಗಿದೆ.

ತಣ್ಣೀರುಬಾವಿ ಕಡಲ ತೀರದಲ್ಲಿ ರಾತ್ರಿ ವಿಶೇಷ ಔತಣಕೂಟ: ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಹೋದ್ಯೋಗಿಗಳಿಗೆ ಕರಾವಳಿಯ ವಿಶಿಷ್ಟ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆತಿಥ್ಯ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಸಿದ್ಧತೆಗಳು ನಡೆದಿವೆ.

ಕಡಲ ತೀರದಲ್ಲಿ ಪೆಂಡಾಲ್: ಇಂದು ರಾತ್ರಿ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರದ ಬೃಹತ್ ಪೆಂಡಾಲ್ ನಿರ್ಮಿಸಲಾಗುತ್ತಿದ್ದು, ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಭವ್ಯ ಸ್ವಾಗತ ಕಮಾನುಗಳನ್ನು ಅಳವಡಿಸಲಾಗುತ್ತಿದೆ.

ಕರಾವಳಿಯ ಖಾದ್ಯ: ಸಿಎಂ ಹಾಗೂ ಸಚಿವರ ನಾಲಿಗೆ ತಣಿಸಲು ಕರಾವಳಿಯ ಜನಪ್ರಿಯ ಸಾಂಪ್ರದಾಯಿಕ ತಿನಿಸುಗಳು, ಮೀನಿನ ವೈವಿಧ್ಯಮಯ ಖಾದ್ಯಗಳು ಹಾಗೂ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!

ED ದಾಳಿ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಬೆನ್ನಿಗೆ ನಿಂತ ಎಸ್‌ಟಿ ಸಮುದಾಯ: ಬೃಹತ್‌ ಸಮಾವೇಶಕ್ಕೆ ಮುಂದು, ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು..!