ತುಮಕೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮಾಜಿ ಸಚಿವ ದಿವಂಗತ ಡಿ. ಸುಧಾಕರ್ ಅವರ ಸಹೋದರ ಡಿಎಸ್. ಕುಮಾರ್ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಳೆದ ಏಳು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಅರ್ಜುನ್, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಯುವತಿ ತುಮಕೂರು ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅರ್ಜುನ್, ಆತನ ತಂದೆ ಡಿಎಸ್. ಕುಮಾರ್, ತಾಯಿ ಪದ್ಮರೇಖಾ, ಸಹೋದರಿಯರು ಮತ್ತು ಭಾವ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಡಿಎಸ್ ಕುಮಾರ್ ಅವರ ಪುತ್ರ ಅರ್ಜುನ್ ಹಾಗೂ ಸಂತ್ರಸ್ತ ಯುವತಿ ಕಳೆದ 16 ವರ್ಷಗಳಿಂದ ಪರಿಚಿತರಾಗಿದ್ದು, ಕಳೆದ 7 ವರ್ಷಗಳಿಂದ ಅರ್ಜುನ್ ಪ್ರೀತಿಸುವುದಾಗಿ ಹೇಳಿ ನಂಬಿಸಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
2020ರಲ್ಲಿ ಎರಡು ಕುಟುಂಬದ ಪೋಷಕರ ಸಮ್ಮುಖದಲ್ಲಿ ಕುಂಕುಮ ಶಾಸ್ತ್ರವೂ ನಡೆದಿತ್ತು. ಈ ಸಂದರ್ಭದಲ್ಲಿ ಜೊತೆಯಾಗಿ ಹಲವು ಕಡೆ ಪ್ರಯಾಣ ಬೆಳೆಸಿದ್ದ ವೇಳೆ ಅರ್ಜುನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಮದುವೆ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಮಾತುಕತೆ ಮುಂದುವರೆದಿತ್ತು. 2025ರ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥಕ್ಕೆ ತಯಾರಿ ಮಾಡಕೊಳ್ಳಲಾಗಿತ್ತು. ಆದರೆ ಕುಟುಂಬದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ಮನವೊಲಿಸಿ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿಸಲಾಗಿತ್ತು. 2026ರ ಮಾರ್ಚ್ 1ರಂದು ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಆದರೆ ಮದುವೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಅರ್ಜುನ್ ಕುಟುಂಬ ಮದುವೆ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಆರೋಪಿಸಲಾಗಿದೆ.
ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಕೆಯ ಹೇಳಿಕೆ ಪಡೆದಿದ್ದು, ಆರೋಪಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಮಹಜರ್ ನಡೆಸಿದ್ದಾರೆ.